
ಬೆಳಗಾವಿ (ಜೂ.1) : ಕಾಂಗ್ರೆಸ್ ಚುನಾವಣೆಗೂ ಮುಂಚೆ ಘೋಷಣೆ ಮಾಡಿದ್ದ ಯೋಜನೆಗಳನ್ನು ಸರ್ಕಾರ ರಚಿಸಿ ವಾರ ಕಳೆದರೂ ಅಧಿಕೃತವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುವುದರ ಬಗ್ಗೆ ಸರ್ಕಾರ ಅಷ್ಟೇ ಅಲ್ಲ ರಾಜ್ಯಾದ್ಯಂತ ಜನರಲ್ಲಿಯೂ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಸಚಿವರಾದ ಸತೀಶ ಜಾರಕಿಹೊಳಿ(ಶ) ಮತ್ತು ಲಕ್ಷ್ಮೇ ಹೆಬ್ಬಾಳಕರ ಅವರು, ಗೃಹಲಕ್ಷ್ಮೇ ಯೋಜನೆಗೆ ಮೊದಲ ಪ್ರಾಶಸ್ತ್ಯವಾಗಿ ಅತ್ತೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿಕೆ ನೀಡಿರುವುದು ಇದೀಗ ಕೆಲವು ಅತ್ತೆ, ಸೊಸೆಯರ ಅಸಮಾಧಾನಕ್ಕೆ ಕಾರಣವಾಗಿದೆ.
ಗೃಹಲಕ್ಷ್ಮೇ ಯೋಜನೆ ಕೇವಲ ಅತ್ತೆಗೇಕೆ, ಸೊಸೆಗೂ ಜಾರಿಯಾಗಬೇಕು ಎಂದು ಬೆಳಗಾವಿ ವೀರಭದ್ರ ನಗರದ ನಿವಾಸಿ ರಾಧಾ (ಅತ್ತೆ) ಹಾಗೂ ದೀಪಿಕಾ (ಸೊಸೆ) ಎಂಬುವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಗೃಹಲಕ್ಷ್ಮೇ ಯೋಜನೆ ಘೋಷಿಸಿತ್ತು. ನಾವು ಮಾಧ್ಯಮಗಳಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆ ನೋಡಿದ್ದೇವೆ. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಅತ್ತೆಗೂ ಹಣ ನೀಡಬೇಕು, ಸೊಸೆಗೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅತ್ತೆ ಒಪ್ಪಿದಲ್ಲಿ ಮಾತ್ರ ಸೊಸೆಗೆ ಕಾಂಗ್ರೆಸ್ ಗ್ಯಾರಂಟಿ ಹಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಯೋಜನೆ ಘೋಷಣೆ ಮಾಡುವಾಗ ಮನೆಯ ಲಕ್ಷ್ಮಿಗೆ ಹಣ ನೀಡುವ ಭರವಸೆ ನೀಡಿತ್ತು. ಮನೆಗೆ ಅತ್ತೆಯೂ ಲಕ್ಷ್ಮಿನೆ, ಸೊಸೆಯೂ ಲಕ್ಷ್ಮಿನೇ. ಇಬ್ಬರಿಗೂ ಎರಡು ಸಾವಿರ ನೀಡಬೇಕು. ಗ್ಯಾರಂಟಿ ಯೋಜನೆ ಘೋಷಣೆ ಮುನ್ನ ಈ ಬಗ್ಗೆ ವಿಚಾರ ಮಾಡಬೇಕಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗೊಂದಲ ಮೂಡಿಸುತ್ತದೆ. ಎರಡು ಸಾವಿರ ಹಣಕ್ಕಾಗಿ ಅತ್ತೆ ಸೊಸೆ ಮಧ್ಯೆ ಜಗಳವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತಕ್ಷಣವೇ ಅತ್ತೆ, ಸೊಸೆ ಇಬ್ಬರಿಗೂ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕು ಎಂದು ಅತ್ತೆ, ಸೊಸೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಉಚಿತ ಗ್ಯಾರೆಂಟಿ ತಲೆನೋವು, ಗೃಹ ಲಕ್ಷ್ಮೀ ಯೋಜನೆ ಅತ್ತೆಗಾ? ಸೊಸೆಗಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ