ಕೃಷ್ಣಾ-ಭೀಮೆಗೆ ನೀರು ಬಿಡಿ: ಮಹಾರಾಷ್ಟ್ರಕ್ಕೆ ಸಿದ್ದು ಪತ್ರ

By Kannadaprabha NewsFirst Published Jun 1, 2023, 9:31 AM IST
Highlights

ಕೂಡಲೇ ಕೃಷ್ಣಾ ನದಿಗೆ ಇನ್ನು ಎರಡು ಟಿಎಂಸಿ ಮತ್ತು ಭೀಮಾ ನದಿಗೆ 3 ಟಿಎಂಸಿ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ತಮ್ಮ ಪತ್ರದಲ್ಲಿ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಜೂ.01): ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಜನ ಹಾಗು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕೊಯ್ನಾ ಮತ್ತು ಉಜ್ಜನಿ ಜಲಾಶಯಗಳಿಂದ ತಲಾ ಮೂರು ಟಿಎಂಸಿ ನೀರನ್ನು ಕ್ರಮವಾಗಿ ಕೃಷ್ಣಾ ಮತ್ತು ಭೀಮಾ ನದಿಗಳಿಗೆ ಹರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರಿಗೆ ಬುಧವಾರ ಪತ್ರ ಬರೆದಿರುವ ಮುಖ್ಯಮಂತ್ರಿ ಅವರು, ಉತ್ತರ ಕರ್ನಾಟಕದ ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿರು ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಟಿಯಾಗಿದೆ. ಆ ಜಿಲ್ಲೆಗಳ ಜನ ಮತ್ತು ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಕೊಯ್ನಾ ಜಯಲಾಯದಿಂದ ಕೃಷ್ಣಾ ನದಿಗೆ 3 ಟಿಎಂಸಿ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಈಡೇರಿಸೋದು ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

ಈಗಾಗಲೇ ಮಹಾರಾಷ್ಟ್ರ ಸರ್ಕಾರವು ಮೇ 15ಕ್ಕೂ ಮುನ್ನ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸಿರುವುದಕ್ಕೆ ಮುಖ್ಯಮಂತ್ರಿ ಅವರು ಧನ್ಯವಾದ ತಿಳಿಸಿದ್ದು, ಕೂಡಲೇ ಕೃಷ್ಣಾ ನದಿಗೆ ಇನ್ನು ಎರಡು ಟಿಎಂಸಿ ಮತ್ತು ಭೀಮಾ ನದಿಗೆ 3 ಟಿಎಂಸಿ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ತಮ್ಮ ಪತ್ರದಲ್ಲಿ ಕೋರಿದ್ದಾರೆ.

click me!