
ಬೆಳ್ತಂಗಡಿ (ಜೂ.6): ನೂಜೋಡಿ ಮಾಪಾಲ ಮನೆ ನಿವಾಸಿ ಶೇಖರ ಮಲೆಕುಡಿಯ ಅವರ ಪತ್ನಿ ಮಧುರಾ (29) ಹೆರಿಗೆ ನಂತರದಲ್ಲಿ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಅವರಿಗೆ ಮೂರುವರೆ ವರ್ಷದ ಗಂಡು ಮಗುವಿದ್ದು, ಎರಡನೆ ಮಗುವಿನ ಹೆರಿಗೆಗಾಗಿ ಜೂ.2ರಂದು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಜೂ.3ರಂದು ಸಂಜೆ 6.45ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಅವರಿಗೆ ರಾತ್ರಿ 9 ಗಂಟೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಎಚ್ಚೆತ್ತ ವೈದ್ಯರು ಮಧುರಾ ಅವರನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ರಾತ್ರಿ 11.30ಕ್ಕೆ ಕರೆತಂದು ದಾಖಲಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 12.37ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ಆಸ್ಪತ್ರೆಯಲ್ಲಿ ಮಧುರಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿ ಮನೆಯಲ್ಲಿ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಲಾಗಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆ ನಡೆಸದೆ ಶವ ಹಸ್ತಾಂತರಿಸಿದ ಬಗ್ಗೆ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಮತ್ತಿತರರು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು. ಮಧುರಾ ಅವರ ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಮಗುವಿನ ಭವಿಷ್ಯಕ್ಕಾಗಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಮೃತ ಮಧುರಾ ಅವರ ಕುಟುಂಬಸ್ಥರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ನಾರಾವಿಯ ಮನೆಗೆ ಬಂದು ಪರಿಶೀಲನೆ ನಡೆಸಿ ಮನೆಯವರ ಜೊತೆ ಮಾತುಕತೆ ನಡೆಸಿದ ನಂತರದಲ್ಲಿ ಮೃತದೇಹವನ್ನು ಪುನಃ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ನಾರಾವಿಯ ಪತಿಯ ಮನೆಯ ಬಳಿ ಅಂತ್ಯಸಂಸ್ಕಾರ ನಡೆಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ