ಗೊಲ್ಲರಹಟ್ಟಿಯಲ್ಲಿ ಮರುಕಳಿಸಿದ ಮೌಢ್ಯಾಚರಣೆ: ಊರಿಂದ ಹೊರಗಿಟ್ಟಿದ್ದ ಬಾಣಂತಿ, ಹಸುಗೂಸು ರಕ್ಷಿಸಿದ ಜಡ್ಜ್‌

By Kannadaprabha News  |  First Published Aug 25, 2023, 8:33 AM IST

ತುಮಕೂರಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿಯನ್ನು ಊರಾಚೆಗಿಡುವ ‘ಮೈಲಿಗೆ ಮೌಢ್ಯ’ಕ್ಕೆ ಹಸುಗೂಸೊಂದು ಮೃತಪಟ್ಟಘಟನೆ ಮಾಸುವ ಮುನ್ನವೇ ಅದೇ ರೀತಿ ಸೋಗೆ ಗುಡಿಸಲಿನಲ್ಲಿಟ್ಟಿದ್ದ ಬಾಣಂತಿ, ಹಸುಗೂಸನ್ನು ಖುದ್ದು ಮಹಿಳಾ ನ್ಯಾಯಾಧೀಶರೊಬ್ಬರು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. 


ತುಮಕೂರು (ಆ.25): ತುಮಕೂರಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿಯನ್ನು ಊರಾಚೆಗಿಡುವ ‘ಮೈಲಿಗೆ ಮೌಢ್ಯ’ಕ್ಕೆ ಹಸುಗೂಸೊಂದು ಮೃತಪಟ್ಟಘಟನೆ ಮಾಸುವ ಮುನ್ನವೇ ಅದೇ ರೀತಿ ಸೋಗೆ ಗುಡಿಸಲಿನಲ್ಲಿಟ್ಟಿದ್ದ ಬಾಣಂತಿ, ಹಸುಗೂಸನ್ನು ಖುದ್ದು ಮಹಿಳಾ ನ್ಯಾಯಾಧೀಶರೊಬ್ಬರು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಗುಬ್ಬಿ ತಾಲೂಕು ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ 15 ದಿನದ ಹಸುಗೂಸನ್ನು ಮೈಲಿಗೆ ಮೌಢ್ಯದ ಕಾರಣಕ್ಕೆ ಮನೆಯಿಂದ ಎರಡು ಕಿ.ಮೀ. ದೂರದ ಸೋಗೆಯ ಗುಡಿಸಲಿನಲ್ಲಿ ಇರಿಸಲಾಗಿತ್ತು! 

ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಖುದ್ದು ಗುಬ್ಬಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ವಾಹನಗಳೇ ಓಡಾಡಲು ದುಸ್ತರವಾಗಿದ್ದ ಜಾಗಕ್ಕೆ 2 ಕಿ.ಮೀ. ನಡೆದೇ ಕ್ರಮಿಸಿದ ಅವರು ಅಲ್ಲಿನ ಪೂಜಾರಪ್ಪ ಹಾಗೂ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಖುದ್ದು ಮಗುವನ್ನು ಎತ್ತಿಕೊಂಡು ಬಂದು ಹಟ್ಟಿಯಲ್ಲಿ ಬಿಟ್ಟು ಬಂದಿದ್ದಾರೆ. ಸಂಜೆ 4 ಗಂಟೆಗೆ ಗ್ರಾಮಕ್ಕೆ ತೆರಳಿದ ನ್ಯಾಯಾಧೀಶರು ಸುಮಾರು 4 ಗಂಟೆಗಳಿಗೂ ಹೆಚ್ಚು ಕಾಲ ಗ್ರಾಮದಲ್ಲಿ ಉಳಿದು ಮೈಲಿಗೆ ಮೌಢ್ಯದ ಬಗ್ಗೆ ತಿಳಿವಳಿಕೆ ಹೇಳಿದ್ದಾರೆ. ಈ ರೀತಿ ಮೌಢ್ಯ ಆಚರಿಸುವುದರಿಂದ ಯಾವ ದೇವರೂ ಕ್ಷಮಿಸುವುದಿಲ್ಲವೆಂದು ಹೇಳಿ ಮಗುವನ್ನು ಹಾಗೂ ಬಾಣಂತಿಯನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ.

Tap to resize

Latest Videos

ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್‌, ಹೆಬ್ಬಾರ್‌, ಬೈರತಿ

ಚಿರತೆ, ಸೇರಿ ಕಾಡುಪ್ರಾಣಿಗಳ ಸಂಚಾರವಿರುವ ಜಾಗದಲ್ಲಿ ನಿರ್ಮಿಸಲಾದ ಸೋಗೆಯ ಪುಟ್ಟಗುಡಿಸಲಲ್ಲಿ 15 ದಿನ ಮಗು ಮತ್ತು ಬಾಣಂತಿಯನ್ನು ಇರಿಸಲಾಗಿತ್ತು. ಗುಡಿಸಲಿನಿಂದ ಮಗುವನ್ನು ಖುದ್ದು ತಾವೇ ಹೊರ ತಂದು ಎತ್ತಿಕೊಂಡು ಮನೆಗೆ ಬಿಟ್ಟಿದ್ದಲ್ಲದೆ, ಸೋಗೆ ಗುಡಿಸಲನ್ನು ತೆರವುಗೊಳಿಸುವಂತೆ ಸೂಚಿಸಿದ್ದಾಗಿ ಉಂಡಿ ಮಂಜುಳಾ ಅವರು ತಿಳಿಸಿದ್ದಾರೆ. ಕಳೆದ ತಿಂಗಳು ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯ ಹೊರಗಿನ ಗುಡಿಸಲಿನಲ್ಲಿಟ್ಟಿಬಾಣಂತಿಯ ಜತೆಗಿದ್ದ ಹಸುಗೂಸು ಶೀತಗಾಳಿಯಿಂದಾಗಿ ಮೃತಪಟ್ಟಿತ್ತು. 

ಕಾಂಗ್ರೆಸ್‌ಗೆ ಎಷ್ಟು ಜನರ ಬರ್ತಾರೆಂದು ಕಾಲವೇ ಹೇಳುತ್ತದೆ: ಡಿಕೆಶಿ

ಈ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ರೀತಿಯ ಸಂಪ್ರದಾಯದ ಕುರಿತು ಖುದ್ದು ಅಧಿಕಾರಿಗಳೇ ಗೊಲ್ಲರಹಟ್ಟಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದರ ಬೆನ್ನಲ್ಲೇ ಸಂಪ್ರದಾಯ ಪಾಲಿಸಲು ಊರಹೊರಗಿನ ಗುಡಿಸಲಲ್ಲಿ ಹಸುಗೂಸಿನೊಂದಿಗೆ ಉಳಿದುಕೊಂಡಿದ್ದ ಬಾಣಂತಿ ಮತ್ತು ಮಗುವನ್ನು ಖುದ್ದು ನ್ಯಾಯಾಧೀಶರೇ ರಕ್ಷಿಸಿ ಜೀವ ಉಳಿಸಿದ್ದಾರೆ. ಈ ರೀತಿಯ ಘಟನೆ ಮತ್ತೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

click me!