ಕಲಬುರಗಿಯಲ್ಲಿ ಶೇ.300, ಯಾದರಿಗಿ ಶೇ.160, ಬೀದರ್ ಶೇ.155ರಷ್ಟು ಮಳೆ, ಒಟ್ಟಾರೆ ಕೊರತೆ ಶೇ.14ಕ್ಕಿಳಿಕೆ, ಮಳೆ ಕೊರತೆಯ 85 ತಾಲೂಕುಗಳಲ್ಲಿ ಬರ ಘೋಷಣೆಗೆ ಚಿಂತನೆ, ಬರ ಮಾನದಂಡ ಬದಲಿಸಲು ಕೇಂದ್ರಕ್ಕೆ ಪತ್ರ: ಕೃಷ್ಣ ಬೈರೇಗೌಡ
ಬೆಂಗಳೂರು(ಜು.25): ಮಲೆನಾಡು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಜನಜೀವನ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೂನ್ ತಿಂಗಳಲ್ಲಿ ರಾಜ್ಯಕ್ಕೆ ಶೇ.56ರಷ್ಟು ಮಳೆ ಕೊರತೆಯಾಗಿದ್ದು, ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಮಳೆಯ ಕೊರತೆ ಪ್ರಮಾಣ ಶೇ.56ರಿಂದ ಶೇ.14ಕ್ಕೆ ಇಳಿದಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ.300, ಯಾದಗಿರಿ ಜಿಲ್ಲೆಯಲ್ಲಿ ಶೇ.160, ಬೀದರ್ ಶೇ.155, ಬೆಳಗಾವಿ ಶೇ.186, ಬಾಗಲಕೋಟೆ ಶೇ.174, ವಿಜಯಪುರ ಶೇ.185 ಮತ್ತು ಗದಗ ಜಿಲ್ಲೆಯಲ್ಲಿ ಶೇ.166ರಷ್ಟು ಮಳೆಯಾಗಿದೆ. ಮುಂದಿನ ದಿನದಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ರಾಯಚೂರಲ್ಲಿ ಮುನಿಸಿಕೊಂಡ ವರುಣ ದೇವ: ಮಳೆಗಾಗಿ ಏಳು ಬೆಟ್ಟದ ನಡುವಿನ ಬಾವಿಯಲ್ಲಿ ಶ್ರೀಗಳ ಪೂಜೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ವಾಡಿಕೆ ಮಳೆಗಿಂತ ಒಟ್ಟಾರೆ ಮಳೆಯ ಪ್ರಮಾಣ ಕಡಿಮೆ ಇದೆ. ಜು.28ರ ವೇಳೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದ್ದು, ಮಳೆ ಕೊರತೆ ನೀಗುವ ವಿಶ್ವಾಸ ಇದೆ ಎಂದರು.
ರಾಜ್ಯದ 85 ತಾಲೂಕುಗಳಲ್ಲಿ ಶೇ.20ರಷ್ಟು ಮಳೆ ಕೊರತೆಯಾಗಿದೆ. ಈ ತಾಲೂಕುಗಳಲ್ಲಿ ಬರ ಘೋಷಣೆ ಸಂಬಂಧ ಚಿಂತನೆ ನಡೆಸಲಾಗುತ್ತಿದೆ. ಆದರೆ, ಕೇಂದ್ರದ ಬರ ಮಾನದಂಡ ಕಠಿಣವಾಗಿದ್ದು, ಇದನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಿಗೆ ಸೂಚನೆ:
ಮುಂದಿನ ನಾಲ್ಕು ದಿನದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗಲಿದೆ ಎಂಬ ಸೂಚನೆ ಇದೆ. ಅಲ್ಲದೇ, ಮಹಾರಾಷ್ಟ್ರದ ಉಜಿನಿ ಅಣೆಕಟ್ಟೆಯಿಂದ ಇನ್ನೂ ನೀರು ಬಿಡುಗಡೆಯಾಗಿಲ್ಲ. ಅಲ್ಲಿ ನೀರು ಬಿಡುಗಡೆಯಾದರೆ, ಭೀಮಾ ನದಿ ಪಾತ್ರ ವಿಕೋಪಕ್ಕೆ ತಿರುಗಲಿದೆ. ಜನವಸತಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಸ್ಥಳೀಯ ಪರಿಸ್ಥಿತಿಗಳನ್ನು ಗಮನಿಸಿ ಜನಜೀವನ, ಆಸ್ತಿ-ಪಾಸ್ತಿಗಳಿಗೆ ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಹೈಅಲರ್ಟ್ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗ್ಳೂರು ಬಿಟ್ಟು ಉಳಿದೆಲ್ಲೆಡೆ ಭಾರೀ ಮಳೆಯಾಗುವ ಸಾಧ್ಯತೆ
ಡ್ಯಾಂಗಳಲ್ಲಿ ಶೇ.40ರಿಂದ 50ರಷ್ಟು ನೀರು ಹೆಚ್ಚಳ
ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಶೇ.40ರಿಂದ ಶೇ.50ಕ್ಕೆ ಹೆಚ್ಚಳವಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
ಕಳೆದ ಏಳು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ 144 ಟಿಎಂಸಿ ನೀರಿನ ಸಂಗ್ರಹಣೆ ಅಧಿಕವಾಗಿದೆ. ಭಾನುವಾರ ಒಂದೇ ದಿನ 40 ಟಿಎಂಸಿ ಸಂಗ್ರಹಣೆಯಾಗಿದೆ. ಕಾವೇರಿ ನದಿಪಾತ್ರಕ್ಕೆ ಸಂಬಂಧಿಸಿದ ನಾಲ್ಕು ಜಲಾಶಯಗಳಾದ ಹಾರಂಗಿ, ಕಬಿನಿ, ಕೆಆರ್‌ಎಸ್ ಮತ್ತು ಹೇಮಾವತಿ ಜಲಾಶಯಗಳಿಗೆ 67,278 ಕ್ಯುಸೆಕ್ ಒಳಹರಿವು ಇದೆ. ಕಬಿನಿ, ಕೆಆರ್‌ಎಸ್ ಜಲಾಶಯದಿಂದ ಒಂಭತ್ತು ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಲಪ್ರಭ, ಘಟಪ್ರಭ, ಆಲಮಟ್ಟಿ, ನಾರಾಯಣಪುರ ಮತ್ತು ತುಂಗಭದ್ರ ಜಲಾಶಯಗಳಲ್ಲಿ ಒಟ್ಟಾರೆ 2.61 ಲಕ್ಷ ಕ್ಯುಸೆಕ್ ನೀರು ಒಳಹರಿವಿದೆ ಎಂದರು.