Mysuru Dasara 2022: ದಸರಾ ಭದ್ರತೆಗೆ 5485 ಪೊಲೀಸರ ನಿಯೋಜನೆ: ಪೊಲೀಸ್‌ ಆಯುಕ್ತ ಚಂದ್ರಗುಪ್ತ

By Govindaraj SFirst Published Sep 25, 2022, 2:30 AM IST
Highlights

ವಿಶ್ವವಿಖ್ಯಾತ ದಸರಾ ಮಹೋತ್ಸವ ಸೆ.26 ರಿಂದ ಅ.5ರವರೆಗೆ ನಡೆಯಲಿದ್ದು, ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ನಗರದ ಪೊಲೀಸ್‌ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೈಸೂರು (ಸೆ.25): ವಿಶ್ವವಿಖ್ಯಾತ ದಸರಾ ಮಹೋತ್ಸವ ಸೆ.26 ರಿಂದ ಅ.5ರವರೆಗೆ ನಡೆಯಲಿದ್ದು, ಸುರಕ್ಷಿತ, ಸುಗಮ ಮತ್ತು ಸಂಭ್ರಮದ ದಸರಾ ಆಚರಣೆಗೆ ನಗರದ ಪೊಲೀಸ್‌ ಇಲಾಖೆ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಸರಾ ಭದ್ರತೆಗಾಗಿ 5,485 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಸರೆಗೆ ದೇಶ, ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭದ್ರತೆ ಕೈಗೊಳ್ಳಲಾಗಿದೆ. 

ಜನಸ್ನೇಹಿಯಾಗಿ ಸಾರ್ವಜನಿಕರೊಂದಿಗೆ ಬೆರೆತು ಸೇವೆ ನೀಡಲು ಪೊಲೀಸ್‌ ಇಲಾಖೆ ಸಜ್ಜಾಗಿದೆ. ನಗರದಲ್ಲಿ ಈಗಾಗಲೇ ಅಳವಡಿಸಿರುವ ಕಾಯಂ ಸಿಸಿ ಕ್ಯಾಮರಾಗಳ ಜೊತೆಗೆ ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 110 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ಇವುಗಳು ದಿನದ 24 ಗಂಟೆಯೂ ರೆಕಾರ್ಡ್‌ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ವೃತ್ತಿ ನಿರತ ಹಳೆಯ ಜೇಬುಗಳ್ಳರು, ಬ್ಯಾಗ್‌, ಸೂಟ್‌ಕೇಸ್‌ ಲಿಫ್ಟರ್‌ ಹಾಗೂ ಇತರ ಕಳುವು ಪ್ರಕರಣಗಳ ಅಪರಾಧಿಗಳ ವಿರುದ್ಧ ಭದ್ರತಾ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Mysuru Dasara 2022: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜಮನೆತನವನ್ನು ಆಹ್ವಾನಿಸಿದ ಸಚಿವ ಸೋಮಶೇಖರ್‌

ಮೊಬೈಲ್‌ ಕಮಾಂಡ್‌ ವಾಹನ ಬಳಕೆ: ದಸರಾದಲ್ಲಿ ಮೊಬೈಲ್‌ ಕಮಾಂಡ್‌ ಸೆಂಟರ್‌ನ್ನು ಬಳಲಾಗುತ್ತದೆ. ಈ ಬಸ್‌ನಲ್ಲಿ ಸಿಸಿಟಿವಿ ವ್ಯವಸ್ಥೆ ಇದ್ದು, ಬಾಡಿವೋರ್ನ್‌ ಕ್ಯಾಮರಾಗಳು, ಲಾಂಗ್‌ ಡಿಸ್ಟೆನ್ಸ್‌ ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ವ್ಯವಸ್ಥೆ ಇರುತ್ತದೆ. ಅರಮನೆ ಮತ್ತು ಬನ್ನಿಮಂಟಪದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿಪೋರ್ನ್‌ ಕ್ಯಾಮರಾ ವಿತರಿಸಲಾಗುತ್ತದೆ. ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್‌ ಕ್ಯಾಮರಾಗಳಿಂದ ಕಣ್ಗಾವಲು ನಡೆಸಲಾಗುವುದು. ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೊಲೀಸ್‌ ಸಹಾಯ ನೀಡಲು ನಗರದ 8 ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕೆ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಮರೆತಿದ್ದಕ್ಕೆ ಪ್ರತಿಭಟನೆ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ಮರೆತು ದಸರಾ ಆಚರಣೆ ಮಾಡಲು ಮುಂದಾಗಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಮೈಸೂರು ಕನ್ನಡ ವೇದಿಕೆಯವರು ಮೈಸೂರು ವಿವಿ ಕ್ರಾಫರ್ಡ್‌ ಮುಂಭಾಗದ ನಾಲ್ವಡಿ ಪ್ರತಿಮೆ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ಜೂನ್‌ ತಿಂಗಳಲ್ಲಿ ಒಡೆಯರ್‌ ಅವರ ಜಯಂತಿ ಆಚರಿಸಬೇಕಿತ್ತು. ಅವರ ಜಯಂತಿ ಆಚರಿಸದೆ ದಸರಾ ಹಬ್ಬಕ್ಕೆ ಚಾಲನೆ ನೀಡುವುದು ಅಸಮಂಜಸ. ಈಗಲಾದರೂ ಅವರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಬೇಕು. ಬಳಿಕ, ದಸರಾ ಹಬ್ಬಕ್ಕೆ ಚಾಲನೆ ನೀಡಲಿ ಎಂದು ಒತ್ತಾಯಿಸಿದರು.

Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ 49 ಸ್ತಬ್ಧಚಿತ್ರಗಳು, 40 ಕಲಾ ತಂಡಗಳು ಸೇರಿದಂತೆ 100ಕ್ಕೂ ಹೆಚ್ಚು ಕಲಾ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ. ಹಾಗೆಯೇ, ದಸರಾ ಆನೆಗಳ ಬಳಿ ಯಾರೂ ಸುಳಿಯದಂತೆ ಕ್ರಮ ಕೈಗೊಳ್ಳಲಾಗುವುದು.
- ಡಾ. ಚಂದ್ರಗುಪ್ತ, ನಗರ ಪೊಲೀಸ್‌ ಆಯುಕ್ತ

click me!