ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅರಮನೆಗೆ ಭೇಟಿ ನೀಡಿ ಅಧಿಕೃತವಾಗಿ ಆಹ್ವಾನಿಸಿದರು.
ಮೈಸೂರು (ಸೆ.24): ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅರಮನೆಗೆ ಭೇಟಿ ನೀಡಿ ಅಧಿಕೃತವಾಗಿ ಆಹ್ವಾನಿಸಿದರು. ಈ ವೇಳೆ ಸಚಿವ ಎಸ್.ಟಿ.ಸೋಮಶೇಖರ್‌ಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದು, ರಾಜವಂಶಸ್ಥ ಆಹ್ವಾನ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮ್‌ದಾಸ್ ಗೈರಾಗಿದ್ದಾರೆ. ಮೈಸೂರು ಜಿಲ್ಲಾಡಳಿತ ಫಲ ತಾಂಬೂಲ ಹಾಗೂ ಹೂಗುಚ್ಚ ನೀಡಿ ಆಹ್ವಾನ ಕೋರಿದ್ದು, ಜಿಲ್ಲಾಧಿಕಾರಿ ಬಗಾದಿ ಗೌತಮ್, ಮೇಯರ್ ಶಿವಕುಮಾರ್ ಸೇರಿ ಸ್ಥಳೀಯ ಜನ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ದಸರಾ ಮಹೋತ್ಸವಕ್ಕೆ ರಾಜಮನೆತನಕ್ಕೆ ಆಹ್ವಾನ ನೀಡಲಾಗಿದೆ. ದಸರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ಕೊಡಲು ಒಪ್ಪಿದ್ದಾರೆ. ಪ್ರತಿ ವರ್ಷದಂತೆ ರಾಜಧನ ಕೊಡಲಾಗಿದೆ ಎಂದರು. ಮಾತ್ರವಲ್ಲದೇ ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ಕಿಚ್ಚ ಸುದೀಪ್ ಬರುತ್ತಿಲ್ಲ. ಕೊನೆ ಕ್ಷಣದಲ್ಲಿ ಸುದೀಪ್ ಬರುವುದಿಲ್ಲೆಂದು ಮಾಹಿತಿ ಕೊಟ್ಟಿದ್ದಾರೆ. ಪರ್ಯಾಯವಾಗಿ ಯಾರನ್ನ ಕರೆಸಬೇಕೆಂದು ಚಿಂತನೆ ನಡೆಸುತ್ತಿದ್ದೇವೆ. ಬಿಜೆಪಿ ಶಾಸಕ ರಾಮದಾಸ್ ಮೋದಿ ಯುಗ ಉತ್ಸವ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೀಗಾಗಿ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಮದಾಸ್ ಬರುತ್ತಾರೆ. ಇನ್ನು ದಸರಾಗೆ ಪ್ರಚಾರದ ಕೊರತೆ ವಿಚಾರವಾಗಿ ಫ್ಲೆಕ್ಸ್ ಹಾಕೊದೆ ಪ್ರಚಾರ ಅಲ್ಲಾ. ಪ್ರತಿ ವರ್ಷದಂತೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.
Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ
26 ರಿಂದ ಅರಮನೆ ಸುತ್ತ ಏಕಮುಖ ವಾಹನ ಸಂಚಾರ ವ್ಯವಸ್ಥೆ: ದಸರಾ ಸಂದರ್ಭದಲ್ಲಿ ನಗರದಲ್ಲಿ ಹೆಚ್ಚಾಗುವ ವಾಹನ ಸಂಚಾರದ ಹಿನ್ನಲೆಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಹನಗಳ ಸಂಚಾರ ಮತ್ತು ವಾಹನಗಳ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ. ಮೈಸೂರು ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಸೆ.26 ರಿಂದ ಅ.5 ರವರೆಗೆ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 11 ಗಂಟೆಯವರೆಗೆ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಶಿವರಾತ್ರಿ ರಾಜೇಂದ್ರ ವೃತ್ತ - ಕುಸ್ತಿ ಅಖಾಡ ಜಂಕ್ಷನ್- ಬಿ.ಎನ್.ರಸ್ತೆ - ಜಯಚಾಮರಾಜ ಒಡೆಯರ್ ವೃತ್ತ - ಆಲ್ಬರ್ಚ್ ವಿಕ್ಟರ್ ರಸ್ತೆ - ಚಾಮರಾಜ ವೃತ್ತ - ಕೆ.ಆರ್. ವೃತ್ತ - ನ್ಯೂ ಸಯ್ಯಾಜಿರಾವ್ ರಸ್ತೆ - ಬಸವೇಶ್ವರ ವೃತ್ತ - ಚಾಮರಾಜ ಜೋಡಿ ರಸ್ತೆ- ಶಿವರಾತ್ರಿ ರಾಜೇಂದ್ರ ವೃತ್ತ. ಈ ರಸ್ತೆಗಳಲ್ಲಿ ಅರಮನೆಯನ್ನು ಮಧ್ಯ ಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ (ಆಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸಲು ಅವಕಾಶ ನೀಡಿರುತ್ತದೆ. ಈ ರಸ್ತೆಗಳಲ್ಲಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿನಲ್ಲಿ (ಕ್ಲಾಕ್ ವೈಸ್) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಬಸವೇಶ್ವರ ವೃತ್ತದಿಂದ ಪೂರ್ವಕ್ಕೆ ಶಿವರಾತ್ರಿ ರಾಜೇಂದ್ರ ವೃತ್ತದವರೆಗಿನ ರಸ್ತೆ ಹೊರತುಪಡಿಸಿ).
ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳು: ಸೆ.26 ರಿಂದ ಅ.3 ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮಗಳು ನಡೆಯುವ ಸಮಯದಲ್ಲಿ ಸಂಜೆ 4 ರಿಂದ ರಾತ್ರಿ 11 ಗಂಟೆವರೆಗೆ ಮಹಾರಾಜ ಕಾಲೇಜು ಮೈದಾನದ ಮುಂಭಾಗದಲ್ಲಿರುವ ಕೃಷ್ಣರಾಜ ಬುಲೆವಾರ್ಡ ರಸ್ತೆಯಲ್ಲಿ ಏಕಲವ್ಯ ವೃತ್ತದಿಂದ ಕೌಟಿಲ್ಯ ವೃತ್ತದವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮೈಸೂರು ದಸರಾ: ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆ..!
ವಾಹನ ನಿಲುಗಡೆಗೆ ನಿಷೇಧ: ಮೈಸೂರು ಅರಮನೆಯ ಸುತ್ತಲಿನ ರಸ್ತೆಗಳಾದ ಬಿ.ಎನ್. ರಸ್ತೆ, ಎ.ವಿ. ರಸ್ತೆ, ಸಯ್ಯಾಜಿರಾವ್ ರಸ್ತೆ, ಪುರಂದರ ರಸ್ತೆಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ರಮಾವಿಲಾಸ ರಸ್ತೆಯಲ್ಲಿ ಎಂಡಿಎ ಜಂಕ್ಷನ್‌ನಿಂದ ಬನುಮಯ್ಯ ಕಾಲೇಜು ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ (ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ).