Covid-19 Crisis: ರಾಜ್ಯದಲ್ಲಿ ನಿನ್ನೆ 47774 ಮಂದಿಗೆ ಕೋವಿಡ್‌: 18% ಪಾಸಿಟಿವಿಟಿ

By Kannadaprabha News  |  First Published Jan 21, 2022, 4:00 AM IST

ರಾಜ್ಯದಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು, ಗುರುವಾರ 47,774 ಜನರು ಸೋಂಕಿತರಾಗಿದ್ದಾರೆ, ಬೆಂಗಳೂರಿನಲ್ಲಿ ಮೊದಲ ಬಾರಿ 30 ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲುವ ಮೂಲಕ ಮೊದಲ ಎರಡು ಅಲೆಯ ದಾಖಲೆಯನ್ನು ರಾಜಧಾನಿ ಮುರಿದಿದೆ. 


ಬೆಂಗಳೂರು (ಜ.21): ರಾಜ್ಯದಲ್ಲಿ ಕೊರೋನಾ (Coronavirus) ಹೆಚ್ಚಾಗುತ್ತಿದ್ದು, ಗುರುವಾರ 47,774 ಜನರು ಸೋಂಕಿತರಾಗಿದ್ದಾರೆ, ಬೆಂಗಳೂರಿನಲ್ಲಿ ಮೊದಲ ಬಾರಿ 30 ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲುವ ಮೂಲಕ ಮೊದಲ ಎರಡು ಅಲೆಯ ದಾಖಲೆಯನ್ನು ರಾಜಧಾನಿ ಮುರಿದಿದೆ. ರಾಜ್ಯದಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಮೂರು ಲಕ್ಷ ಗಡಿಗೆ ಸಮೀಪಿಸಿವೆ. 29 ಸೋಂಕಿತರು ಸಾವಿಗೀಡಾಗಿದ್ದಾರೆ. 

22,143 ಮಂದಿ ಗುಣಮುಖರಾಗಿದ್ದು, ಸದ್ಯ 2,93,231 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಬುಧವಾರ 2.1 ಲಕ್ಷ ಸೋಂಕು ಪರೀಕ್ಷೆಗಳು ನಡೆದಿದ್ದವು. ಆದರೆ, ಗುರುವಾರ ಹಿಂದೆಂದಿಗಿಂತಲೂ ಅತಿ ಹೆಚ್ಚು 2.58 ಲಕ್ಷದಷ್ಟುನಡೆದಿವೆ. ಹೀಗಾಗಿಯೇ ಸೋಂಕಿತರ ಸಂಖ್ಯೆ ಏಳು ಸಾವಿರಷ್ಟುಏರಿಕೆಯಾಗಿದೆ (ಬುಧವಾರ 40,499 ಪ್ರಕರಣ).

Latest Videos

ರಾಜಧಾನಿ ಬೆಂಗಳೂರಿನಲ್ಲಿ (Bengaluru) 30,540 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಹೊಸ ಪ್ರಕರಣಗಳು ಆರು ಸಾವಿರ ಹೆಚ್ಚಳವಾಗಿವೆ (ಬುಧವಾರ 24,135). ಈ ಹಿಂದೆ ಬೆಂಗಳೂರಿನಲ್ಲಿ ಏಪ್ರಿಲ್‌ 30 ರಂದು 26 ಸಾವಿರ ಮಂದಿಗೆ ಸೋಂಕು ತಗುಲಿತ್ತು. ಅದನ್ನು ಹೊರತುಪಡಿಸಿದರೆ, ಅತಿ ಹೆಚ್ಚು ಮಂದಿಗೆ ಗುರುವಾರ ಸೋಂಕು ತಗುಲಿದ್ದು, ರಾಜಧಾನಿಯಲ್ಲಿ ಆತಂಕ ಹೆಚ್ಚಿದೆ.

Corona In Karnataka ಕರ್ನಾಟಕದಲ್ಲಿ ಒಂದೇ ದಿನ 41 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆ

ರಾಜ್ಯದಲ್ಲಿ ಸೋಂಕು ಪರೀಕ್ಷೆಗಳು ಅತಿ ಹೆಚ್ಚು ನಡೆದಿರುವ ಹಿನ್ನೆಲೆಯಲ್ಲಿ ಹೊಸ ಪ್ರಕರಣಗಳು ಹೆಚ್ಚಳವಾಗಿವೆ. ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.18 ರಷ್ಟಿದೆ. ಸಾವಿನ ಸಂಖ್ಯೆ ಮಾತ್ರ ಎರಡು ದಿನಗಳಿಂದ ಹೆಚ್ಚಳವಾಗುತ್ತಾ ಸಾಗಿದ್ದು, ಗುರುವಾರ 29ಕ್ಕೆ ತಲುಪಿದೆ. ಇನ್ನು ಗುಣಮುಖರ ಸಂಖ್ಯೆ 20 ಸಾವಿರ ಆಸುಪಾಸಿನಲ್ಲಿಯೇ ಮುಂದುವರೆದಿದೆ. ಸಕ್ರಿಯ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಾ ಸಾಗಿದ್ದು, ಶುಕ್ರವಾರ ಮೂರು ಲಕ್ಷ ಗಡಿ ದಾಟಲಿವೆ. ಮೂರು ಅಲೆಗಳನ್ನು ಸೇರಿ ಈವರೆಗಿನ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 33.37 ಲಕ್ಷಕ್ಕೆ, ಗುಣಮುಖರ ಸಂಖ್ಯೆ 30.45 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 38515ಕ್ಕೆ ಏರಿಕೆಯಾಗಿದೆ.

29 ಸಾವು: ಬೆಂಗಳೂರು ಎಂಟು, ಮೈಸೂರು ಹಾಗೂ ಕಲಬುರಗಿ ತಲಾ ಐದು, ತುಮಕೂರು, ಬೀದರ್‌ ತಲಾ ಎರಡು, ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ, ಹಾಸನ, ಮಂಡ್ಯ, ರಾಯಚೂರು, ಉತ್ತರಕನ್ನಡದಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ಸೋಂಕಿತರ ಪೈಕಿ ಇಬ್ಬರು ವರ್ಷದೊಳಗೆ, ನಾಲ್ವರು 30 ರಿಂದ 40 ವರ್ಷದವರು, 23 ಸೋಂಕಿತರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ.

Coronavirus: ಬೆಂಗ್ಳೂರಲ್ಲಿ ತುಸು ಇಳಿದ ಸೋಂಕಿತರ ಸಂಖ್ಯೆ

ಎಲ್ಲಿ, ಎಷ್ಟು ಮಂದಿಗೆ ಸೋಂಕು?: ಗುರುವಾರ ಬೆಂಗಳೂರು ಹೊರತುಪಡಿಸಿದರೆ ಮಂಡ್ಯ, ಮೈಸೂರು, ತುಮಕೂರು, ಹಾಸನದಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಧಾರವಾಡ, ಕಲಬುರಗಿ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ 500ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಹಾವೇರಿ ಹಾಗೂ ಯಾದಗಿರಿಯಲ್ಲಿ 100ಕ್ಕಿಂತ ಕಡಿಮೆ ಮಂದಿಗೆ ಸೋಂಕು ತಗುಲಿದೆ.

584 ಕಂಟೈನ್ಮೆಂಟ್‌ ವಲಯ ಸಕ್ರಿಯ: ಬಿಬಿಎಂಪಿಯ (BBMP) ಒಟ್ಟು ಎಂಟು ವಲಯಗಳಲ್ಲಿ 584 ಕಂಟೈನ್ಮೆಂಟ್‌ ವಲಯಗಳು (Containment Zones) ಸಕ್ರಿಯವಾಗಿವೆ. ಈ ಪೈಕಿ ಮಹದೇವಪುರ 221, ಬೊಮ್ಮನಹಳ್ಳಿ 128, ದಕ್ಷಿಣ 65, ಪಶ್ಚಿಮ 62, ಯಲಹಂಕ 59, ಪೂರ್ವ 38, ಆರ್‌ಆರ್‌ನಗರ 6 ಹಾಗೂ ದಾಸರಹಳ್ಳಿಯಲ್ಲಿ 5 ಕಂಟೈನ್ಮೆಂಟ್‌ ವಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಬಿಬಿಎಂಪಿ ಕೋವಿಡ್‌ ವರದಿ ತಿಳಿಸಿದೆ.

click me!