ರಾಜ್ಯದಲ್ಲಿ 10 ಲಕ್ಷ ಕೇಸ್‌! ಬೆಂಗಳೂರಲ್ಲೇ ಅಧಿಕ

By Kannadaprabha NewsFirst Published Apr 2, 2021, 7:08 AM IST
Highlights

ರಾಜ್ಯದಲ್ಲಿ 10 ಲಕ್ಷಕ್ಕೂ ಅಧಿಕ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಆತಂಕ ಮತ್ತಷ್ಟು ಹೆಚ್ಚಿದಂತಾಗಿದೆ. ಬೆಂಗಳೂರಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗಿವೆ. 

ಬೆಂಗಳೂರು (ಏ.02):  ರಾಜ್ಯದಲ್ಲಿ ಗುರುವಾರ 4,234 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಡುವುದರೊಂದಿಗೆ ರಾಜ್ಯದಲ್ಲಿ ಈವರೆಗೆ ಕೋವಿಡ್‌ ಪೀಡಿತರಾದವರ ಒಟ್ಟು ಸಂಖ್ಯೆ 10 ಲಕ್ಷ ದಾಟಿದೆ.

ತನ್ಮೂಲಕ ದೇಶದಲ್ಲಿ 10 ಲಕ್ಷದ ಗಡಿ ದಾಟಿದ ಮೂರನೇ ರಾಜ್ಯ ಕರ್ನಾಟಕವಾಗಿದೆ. ಕೋವಿಡ್‌ ಎರಡನೇ ಅಲೆ ಈಗಾಗಲೇ ಜೋರಾಗಿ ಅಪ್ಪಳಿಸಿರುವ ಮಹಾರಾಷ್ಟ್ರ (28.1 ಲಕ್ಷ), ಕೇರಳ (11.27 ಲಕ್ಷ) ಮೊದಲೆರಡು ಸ್ಥಾನದಲ್ಲಿವೆ. 9.02 ಲಕ್ಷ ಪ್ರಕರಣಗಳೊಂದಿಗೆ ಆಂಧ್ರಪ್ರದೇಶ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈವರೆಗೆ 10,01,238 ಮಂದಿ ಕೋವಿಡ್‌ ಸೋಂಕಿಗೆ ಒಳಪಟ್ಟಿದ್ದಾರೆ.

ಗುರುವಾರ 4234 ಸೋಂಕು ಪ್ರಕರಣಗಳೊಂದಿಗೆ ಸತತ ಎರಡನೇ ದಿನ ಹೊಸ 4 ಸಾವಿರದ ಗಡಿ ದಾಟಿದಂತಾಗಿದ್ದು, 30ರಿಂದ 50 ವರ್ಷದೊಳಗಿನ ನಾಲ್ವರು ಸೇರಿದಂತೆ ಒಟ್ಟು 18 ಮಂದಿ ಮೃತರಾಗಿದ್ದಾರೆ. 1,599 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 30,865ಕ್ಕೆ ಏರಿದೆ. ತೀವ್ರ ನಿಗಾ ವಿಭಾಗದಲ್ಲಿ 265 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗ್ಳೂರಲ್ಲಿ ಒಂದೇ ದಿನ ಕೊರೋನಾಗೆ 18 ಬಲಿ..! .

1.15 ಲಕ್ಷ ಕೊರೋನಾ ಪರೀಕ್ಷೆ ನಡೆದಿದೆ. ಜನವರಿ 9ರಂದು 1.24 ಲಕ್ಷ ಪರೀಕ್ಷೆ ನಡೆದ ನಂತರದಲ್ಲಿನ ಅತ್ಯಂತ ಹೆಚ್ಚಿನ ಪರೀಕ್ಷೆ ಗುರುವಾರ ನಡೆದಿದೆ. ಪಾಸಿಟಿವಿಟಿ ದರ 3.65 ದಾಖಲಾಗಿದೆ. ಈವರೆಗೆ ಒಟ್ಟು 2.15 ಕೋಟಿ ಪರೀಕ್ಷೆ ನಡೆದಿವೆ. ಒಟ್ಟು 9.57 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 12,585 ಮಂದಿ ಮೃತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 11, ಧಾರವಾಡ 2, ತುಮಕೂರು, ಮೈಸೂರು, ಮಂಡ್ಯ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 2,906, ಬೀದರ್‌ 218, ಕಲಬುರಗಿ 144, ಮೈಸೂರು 109, ತುಮಕೂರು 102, ಬೆಂಗಳೂರು ಗ್ರಾಮಾಂತರ 73, ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ 67, ಧಾರವಾಡ 57, ಉಡುಪಿ 53, ಚಿಕ್ಕಮಗಳೂರು 51, ಬೆಳಗಾವಿ 46, ಉತ್ತರ ಕನ್ನಡ 44 ಪ್ರಕರಣ ವರದಿಯಾಗಿದೆ. ಚಿಕ್ಕಬಳ್ಳಾಪುರ, ಹಾವೇರಿ, ಕೊಪ್ಪಳ ಮತ್ತು ರಾಮನಗರದಲ್ಲಿ ಏಕಂಕಿಯಲ್ಲಿ ಹೊಸ ಪ್ರಕರಣ ಪತ್ತೆಯಾಗಿದೆ.

click me!