
ಬೆಂಗಳೂರು (ಏ.01): ‘ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. ಆಗಲಿ, 2005ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್ ಬಿಜೆಪಿಯಿಂದ ದುಡ್ಡು ತಂದಿತ್ತೇ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, 2005ರ ಚಾಮರಾಜಪೇಟೆ ಉಪಚುನಾವಣೆಯ ಆ ‘ಮುಸ್ಲಿಂ ಅಭ್ಯರ್ಥಿ’ಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ಬೆವರು ಹರಿಸಿದ್ದರು. ದೇವೇಗೌಡರಂಥವರು ಅಂದು ಅಷ್ಟುಕಷ್ಟಪಟ್ಟು ಉಪಚುನಾವಣೆ ನಡೆಸಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ, ಪ್ರಾಮಾಣಿಕ ಉತ್ತರ ಕೊಡಬಹುದೇ ಎಂದು ಜಮೀರ್ ಹೆಸರು ಪ್ರಸ್ತಾಪಿಸದೆ ಖಾರವಾಗಿ ಪ್ರಶ್ನಿಸಿದ್ದಾರೆ.
ಎಚ್‌ಡಿಕೆ ನಮ್ಮನ್ನು ಏಕೆ ದ್ವೇಷಿಸುತ್ತಾರೆಂಬುದು ಗೊತ್ತಾಗಿಲ್ಲ ಎಂದ ಮುಖಂಡ ...
ಚಾಮರಾಜಪೇಟೆ ಉಪಚುನಾವಣೆಯ ಮತದಾನಕ್ಕೆ ಇನ್ನು ಎರಡು ದಿನಗಳು ಬಾಕಿ ಉಳಿದಿವೆ ಎನ್ನುವಾಗ ನಮ್ಮ ‘ಮುಸ್ಲಿಂ ಅಭ್ಯರ್ಥಿ’ ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಅಂತ ಗೊತ್ತಾಯಿತು. ಅಂದು ಶಿವಮೊಗ್ಗ ಪ್ರವಾಸದಲ್ಲಿದ್ದ ನಾನು ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ? ಅಂದು ಚಾಮರಾಜಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್ ‘ಮುಸ್ಲಿಂ ಅಭ್ಯರ್ಥಿ’ಯನ್ನು ಗುರುತಿಸಿತ್ತೆ? ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ ಎಂದು ಕಿಡಿಕಾರಿದ್ದಾರೆ.
ಸನ್ಮಿತ್ರರು ನಮ್ಮಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರ ಸೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದೆಲ್ಲ ಮಾಡಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಜೆಡಿಎಸ್ ಪಕ್ಷ ಎಲ್ಲರನ್ನೂ ಬೆಳೆಸಿದೆ. ಹೊರಗೆ ಹೋದವರನ್ನು ಹರಸಿದೆ. ಕೃತಜ್ಞತೆ ಇರಲಿ. 2008ರ ಆಪರೇಷನ್ ಕಮಲದ ನಂತರ ನಡೆದ 20ಕ್ಕೂ ಹೆಚ್ಚು ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲದೇ ಮುಖಭಂಗ ಅನುಭವಿಸಿತ್ತು. ಅದರ ಹಿಂದೆ ಯಾವ ನಾಯಕರು ಇದ್ದರು? ಎಷ್ಟುಹಣ ಪಡೆದಿದ್ದರು? ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಸನ್ಮಿತ್ರರು ತಿಳಿಯಲಿ. ಹೇಗೂ ಅವರ ಅಕ್ಕಪಕ್ಕದಲ್ಲಿಯೇ ಇದ್ದೀರಲ್ಲ, ಕೇಳಿ ನೋಡಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ