ಹೆಚ್ಚು ಆದಾಯ ದೇಗುಲ ಸೇವೆಗಳು ಇನ್ಮುಂದೆ ಬ್ಯಾಂಕ್‌ ಮೂಲಕ..!

By Kannadaprabha NewsFirst Published Jun 25, 2021, 10:27 AM IST
Highlights

* ‘ಎ’ ದರ್ಜೆ ದೇಗುಲಗಳ ಸೇವೆಗಳಲ್ಲಿ ಪಾರದರ್ಶಕತೆ ಕಾಪಾಡಲು ಈ ಕ್ರಮ
* 10 ಕೋಟಿಗಿಂತ ಹೆಚ್ಚಿನ ಆದಾಯ ದೇಗುಲಗಳಲ್ಲಿ ಈ ನಿಯಮ ಜಾರಿಗೆ
* ಮೊದಲಿಗೆ ಕುಕ್ಕೆ ಸುಬ್ರಹ್ಮಣ್ಯ, ನಂಜನಗೂಡು, ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಜಾರಿ
 

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಜೂ.25): ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ‘ಎ’ ದರ್ಜೆ ಗಳಲ್ಲಿನ ಎಲ್ಲ ಸೇವೆಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಹಣಕಾಸು ವ್ಯವಹಾರಗಳನ್ನು ಬ್ಯಾಂಕ್‌ಗಳ ಮೂಲಕ ನಿರ್ವಹಿಸಲು ಸರ್ಕಾರ ನಿರ್ಧರಿಸಿದೆ.

ಇದೇ ಕಾರಣದಿಂದ ದೇವಾಲಯದ ಆವರಣದಲ್ಲಿ ಗಳ ವಿಶೇಷ ಸೇವಾ ಕೌಂಟರ್‌ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಭಕ್ತರು ಯಾವುದೇ ಸೇವೆ ಮಾಡಿಸಲು ಬ್ಯಾಂಕ್‌ನಲ್ಲೇ ಹಣ ಪಾವತಿಸಿ, ರಸೀದಿ ಪಡೆಯಬೇಕು. ಬ್ಯಾಂಕ್‌ನವರು ಸೇವಾ ಕೌಂಟರ್‌, ಅನ್ನದಾನ ಕೌಂಟರ್‌, ಖಾಯಂ ಸೇವಾ ಕೌಂಟರ್‌ಗಳನ್ನು ಆರಂಭಿಸಿ, ರಸೀದಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಭಕ್ತರು ತಮಗೆ ಬೇಕಾದ ಸೇವೆಗೆ ಈ ಬ್ಯಾಂಕ್‌ ನಲ್ಲಿ ಹಣ ಪಾವತಿಸಿ ಸೇವಾ ರಸೀದಿ ಪಡೆಯಬಹುದು. ಅಲ್ಲದೆ, ಮುಂಗಡ ಆನ್‌ಲೈನ್‌ ಸೇವಾ ಬುಕ್ಕಿಂಗ್‌ಗೂ ಅವಕಾಶ ವಿರಲಿದೆ ಎಂದು ಮುಜರಾಯಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ ಸಿಬ್ಬಂದಿ ನೀಡುವ ಸೇವಾ ರಸೀದಿಯನ್ನು ದೇವಾಲಯದ ಸಿಬ್ಬಂದಿಗೆ ಕೊಟ್ಟು ಪೂಜೆ, ಅಭಿಷೇಕ ಸೇರಿದಂತೆ ಎಲ್ಲ ಸೇವೆಗಳನ್ನು ಮಾಡಿಸಬಹುದಾಗಿದೆ. ಅಲ್ಲದೆ, ಭಕ್ತರಿಂದ ಸಂಗ್ರಹವಾಗುವ ಹಣವನ್ನು ಬ್ಯಾಂಕ್‌ ಮೂಲಕ ದೇವಾಲಯದ ಖಾತೆಗೆ ಕಾಲ ಕಾಲಕ್ಕೆ ಜಮೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಅನ್ಯ ಧಾರ್ಮಿಕ ಕೇಂದ್ರಗಳಿಗೆ ಹಿಂದೂ ದೇವಾಲಯಗಳ ಹಣ ಬಳಕೆಗೆ ತಡೆ

ಹೆಚ್ಚು ಆದಾಯದ ದೇಗುಲಕ್ಕೆ ವಿಸ್ತರಣೆ:

ಪ್ರಾರಂಭಿಕವಾಗಿ ರಾಜ್ಯದ ಅತಿ ಹೆಚ್ಚು ಆದಾಯ ತರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಬೆಂಗಳೂರಿನ ಬನಶಂಕರಿ ದೇವಾಲಯ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಸೇವೆಗಳು ಸೇರಿದಂತೆ ಎಲ್ಲ ರೀತಿಯ ಹಣಕಾಸು ವ್ಯವಹಾರಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ವತಿಯಿಂದ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ‘ಎ’ ಗ್ರೇಡ್‌ ದೇವಾಲಯಗಳಲ್ಲಿ 10 ಕೋಟಿಗೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ದೇವಾಲಯಗಳಲ್ಲಿ ಬ್ಯಾಂಕ್‌ಗಳಿಂದ ರಸೀದಿ ಪಡೆಯುವ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬ್ಬಂದಿ ವಜಾ ಇಲ್ಲ:

ದೇವಾಲಯಗಳಲ್ಲಿನ ಸೇವೆಗಳಿಗೆ ರಸೀದಿ ನೀಡುವ ಕಾರ್ಯವನ್ನು ಈವರೆಗೂ ಆಯಾ ದೇವಾಲಯಗಳ ಆಡಳಿತ ಮಂಡಳಿ ನಿರ್ವಹಿಸುತ್ತಿದೆ. ಇದೀಗ ಬ್ಯಾಂಕ್‌ಗೆ ವಹಿಸಿರುವುದರಿಂದ ರಸೀದಿ ನೀಡಲು ನಿಯೋಜಿಸಿದ್ದ ಸಿಬ್ಬಂದಿಗೆ ಪರ್ಯಾಯ ಕೆಲಸದ ಜವಾಬ್ದಾರಿ ವಹಿಸಲು ಕ್ರಮ ಕೈಗೊಳ್ಳುತ್ತೇವೆ. ಆದರೆ, ಯಾವುದೇ ಸಿಬ್ಬಂದಿಯನ್ನು ವಜಾ ಮಾಡುವುದಿಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಹೊಸ ನಿಯಮ ಏಕೆ?

ಕೋಟ್ಯಂತರ ರು.ಗಳ ಆದಾಯ ತರುವ ದೇವಾಲಯಗಳಲ್ಲಿ ಸಾಕಷ್ಟು ವಂಚನೆ ನಡೆಯುತ್ತಿತ್ತು. ಒಂದೇ ಸಂಖ್ಯೆಗೆ ಕೆಲವೊಮ್ಮೆ ಮೂರು, ನಾಲ್ಕು ನಕಲಿ ರಸೀದಿಗಳನ್ನು ಹಾಕಿ ಇಲಾಖೆಗೆ ವಂಚಿಸುವುದು ಬೆಳಕಿಗೆ ಬರುತ್ತಿತ್ತು. ಭಕ್ತರು ಮೂಲಕ ಹಣ ಸಲ್ಲಿಸಿದರೂ ಸೇವೆಗಳನ್ನು ಮಾಡದೆ ವಂಚಿಸುವುದು ಗೊತ್ತಾಗಿತ್ತು. ಈ ಎಲ್ಲ ಬೆಳವಣಿಗೆಗಳಿಗೆ ಕಡಿವಾಣ ಹಾಕಲು ಹೊಸ ನಿಯಮ ಜಾರಿಗೆ ತರಲಾಗಿದೆ. 

ತಿರುಪತಿಯ ವೆಂಕಟರಮಣ ದೇವಾಲಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಮೂಲಕ ಎಲ್ಲ ಸೇವೆಗಳನ್ನು ಮಾಡಿಸಲಾಗುತ್ತಿದೆ. ಇದೀಗ ರಾಜ್ಯದ ದೇವಾಲಯಗಳಲ್ಲಿಯೂ ಷರತ್ತುಗಳನ್ನು ವಿಧಿಸಿ ಎಚ್‌ಡಿಎಫ್‌ಸಿ ಬ್ಯಾಂಕ್‌ ಮೂಲಕವ್ಯವಹಾರ ಮಾಡಲು ಮುಂದಾಗುತ್ತಿದ್ದೇವೆ. ಹೆಚ್ಚಾಗಿ ಪಾರದರ್ಶಕತೆ ಕಾಪಾಡುವುದಕ್ಕಾಗಿ ಈ ನಿಯಮ ಜಾರಿ ಮಾಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. 

click me!