
ಬೆಂಗಳೂರು(ಜೂ.25): ಕೋವಿಡ್ ಎರಡನೇ ಅಲೆಯಿಂದಾಗಿ ತೀವ್ರ ಸಂಕಷ್ಟಅನುಭವಿಸುತ್ತಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ಸರ್ಕಾರವು ನೆರವಿನ ಹಸ್ತ ಚಾಚಿದ್ದು, ಪ್ರವಾಸೋದ್ಯಮ ವಲಯಗಳಲ್ಲಿರುವ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳಿಗೆ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಹಾಗೂ ಅಬಕಾರಿ ಶುಲ್ಕದಲ್ಲಿ ಹಲವಾರು ರಿಯಾಯಿತಿಗಳನ್ನು ನೀಡಿ ಆದೇಶ ಹೊರಡಿಸಿದೆ.
ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‌ಗಳಿಗೆ ಪ್ರಸಕ್ತ ಸಾಲಿನಲ್ಲಿ ಶೇ. 50ರಷ್ಟುಆಸ್ತಿ ತೆರಿಗೆ ಶುಲ್ಕ ವಿನಾಯಿತಿ ಮತ್ತು ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ವಿದ್ಯುಚ್ಛಕ್ತಿ ಶುಲ್ಕ ಮನ್ನಾ ಮಾಡಲಾಗಿದೆ. ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳಲ್ಲಿ ಶೇ. 50ರಷ್ಟು ಮೊತ್ತವನ್ನು ಪಾವತಿಸುವುದು ಮತ್ತು ಉಳಿದ ಶೇ.50ರಷ್ಟು ಮೊತ್ತವನ್ನು ಈ ವರ್ಷದ ಡಿ.31 ರೊಳಗೆ ಪಾವತಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.
ಅಲ್ಲದೇ, ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರತಿ ಪ್ರವಾಸಿ ಮಾರ್ಗದರ್ಶಿಗೆ (ಗೈಡ್) ಐದು ಸಾವಿರ ರು. ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯದ 6 ಕಡೆ ಹೆಲಿಪೋರ್ಟ್ ಸ್ಥಾಪನೆ: ಸಚಿವ ಸಿ.ಪಿ.ಯೋಗೇಶ್ವರ
ಕೋವಿಡ್ ಎರಡನೇ ಅಲೆಯಿಂದ ಪ್ರವಾಸೋದ್ಯಮ ವಲಯ ತೀವ್ರ ನಷ್ಟಕ್ಕೀಡಾಗಿದ್ದು, ಕರ್ನಾಟಕ ಟೂರಿಸಂ ಸೊಸೈಟಿಯವರು ಪುನಶ್ಚೇತನ ಪ್ಯಾಕೇಜ್ ನೀಡಲು ಕೋರಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ವಿನಾಯಿತಿ ಮತ್ತು ಪರಿಹಾರ ಮೊತ್ತ ನೀಡಲಾಗಿದೆ. ಸರ್ಕಾರವು ಪ್ರವಾಸೋದ್ಯಮ ವಲಯದ ಜತೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ರಾಜ್ಯ ಸರ್ಕಾರವು ವಿವಿಧ ಪ್ರವಾಸೋದ್ಯಮ ಉದ್ದಿಮೆದಾರರಿಗೆ ನೀಡಿರುವ ಪುನಶ್ಚೇತನ ಸಹಾಯವು ಸಂಕಷ್ಟ ಕಾಲದಿಂದ ಹೊರಬಂದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ