Covid Crisis: ಕರ್ನಾಟಕದಲ್ಲಿ ಒಮಿಕ್ರೋನ್‌ ಉಪತಳಿ ಪತ್ತೆ

By Govindaraj SFirst Published Jun 23, 2022, 5:00 AM IST
Highlights

ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರೋನ್‌ನ ಉಪತಳಿಗಳಾದ ಬಿಎ3, ಬಿಎ4 ಹಾಗೂ ಬಿಎ 5 ಪತ್ತೆಯಾಗಿದ್ದು, ಕಳೆದ ಒಂದು ತಿಂಗಳಿಂದ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳಕ್ಕೆ ಈ ಉಪತಳಿಗಳು ಕೂಡ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರು (ಜೂ.23): ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರೋನ್‌ನ ಉಪತಳಿಗಳಾದ ಬಿಎ3, ಬಿಎ4 ಹಾಗೂ ಬಿಎ 5 ಪತ್ತೆಯಾಗಿದ್ದು, ಕಳೆದ ಒಂದು ತಿಂಗಳಿಂದ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳಕ್ಕೆ ಈ ಉಪತಳಿಗಳು ಕೂಡ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

ಸದ್ಯ ನಾಲ್ಕನೇ ಅಲೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹೊಸ ರೂಪಾಂತರಿಗಳು ಮತ್ತು ಅದರ ಉಪತಳಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಂಶವಾಹಿ (ಜಿನೋಮಿಕ್‌ ಸೀಕ್ವೆನ್ಸ್‌) ಪರೀಕ್ಷೆಗಳನ್ನು ನಿರಂತರವಾಗಿ ನಡೆಸುತ್ತಿದೆ. ಮೇ ಮತ್ತು ಜೂನ್‌ನಲ್ಲಿ ನಡೆದ ವಂಶವಾಹಿ ಪರೀಕ್ಷೆಗಳಲ್ಲಿ ಶೇ.98 ರಷ್ಟುಒಮಿಕ್ರೋನ್‌ನ ಬಿಎ1.1.529, ಬಿಎ1, ಬಿಎ2 ಪತ್ತೆಯಾಗಿದ್ದು, ಶೇ.2ರಷ್ಟುಒಮಿಕ್ರೋನ್‌ನ ಹೊಸ ಉಪತಳಿಗಳಾದ ಬಿಎ3, ಬಿಎ4, ಬಿಎ 5 ಪತ್ತೆಯಾಗಿವೆ. ಈ ಮೂಲಕ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಿರುವ ಬಿಎ 3-5 ಉಪತಳಿಗಳು ರಾಜ್ಯದಲ್ಲಿಕ್ಕೂ ಕಾಲಿಟ್ಟಂತಾಗಿದೆ.

ರಾಜ್ಯದಲ್ಲಿ ಮೂರನೇ ಅಲೆ ಕಾಣಿಸಿಕೊಂಡ ಜನವರಿ -ಏಪ್ರಿಲ್‌ ಸಂದರ್ಭದಲ್ಲಿ ಒಮಿಕ್ರೋನ್‌ ಉಪತಳಿಗಳಾದ ಬಿಎ1.1.529, ಬಿಎ1 ಹಾಗೂ ಬಿಎ2 ಮಾತ್ರ ಇದ್ದವು. ಮೂರನೇ ಅಲೆ ತಗ್ಗಿದ ಬಳಿಕ ಅಂದರೆ, ಏಪ್ರಿಲ್‌ನಲ್ಲಿ ಕೊರೋನಾ ಪ್ರಕರಣಗಳು ಸರಾಸರಿ 100 ವರದಿಯಾಗುತ್ತಿದ್ದವು. ಆದರೆ, ಮೇ ಕೊನೆಯ ವಾರ 200ಕ್ಕೆ ಏರಿಕೆಯಾಗಿದ್ದವು.

ಒಂದೇ ದಿನ 13,216 ಕೋವಿಡ್ ಕೇಸ್ ಪತ್ತೆ, ಓಮಿಕ್ರಾನ್ ಉಪತಳಿ ಸಂಖ್ಯೆ ಏರಿಕೆ!

ಇನ್ನು ಜೂನ್‌ ಆರಂಭದಿಂದ ನಿರಂತರ ಏರಿಕೆಯಾಗಿ 800 ಗಡಿದಾಟಿವೆ. ಅಲ್ಲದೆ, ಏಪ್ರಿಲ್‌ನಲ್ಲಿ ಶೇ.0.5 ಪರೀಕ್ಷೆಗಳ ಪಾಸಿಟಿವಿಟಿ ದರವು ಕೂಡ ಶೇ.3ಕ್ಕೆ ಹೆಚ್ಚಿತ್ತು. ಈ ಹಿನ್ನೆಲೆ ಆರೋಗ್ಯ ಇಲಾಖೆಯು ಕೂಡ ವಂಶವಾಹಿ ಪರೀಕ್ಷೆಗಳನ್ನು ತೀವ್ರಗೊಳಿಸಿತ್ತು. ಮೇ ಮತ್ತು ಜೂನ್‌ನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಹೊಸ ಉಪತಳಿಗಳು ಒಂದಿಷ್ಟುಪ್ರಮಾಣದಲ್ಲಿರುವುದು ದೃಢಪಟ್ಟಿದೆ. ಇವುಗಳಿಂದಲೇ ಕಳೆದ ಒಂದು ತಿಂಗಳಿಂದ ಹೊಸ ಪ್ರಕರಣ ಹೆಚ್ಚಳವಾಗಿರುವುದು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ ಉಪತಳಿ: ಸುಧಾಕರ್‌
ವಂಶವಾಹಿ ಪರೀಕ್ಷೆಗಳ ಮಾಹಿತಿಯನ್ನು ಟ್ವೀಟ್‌ ಮೂಲಕ ಹಂಚಿಕೊಂಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ‘ಒಮಿಕ್ರೋನ್‌ ಬಿಎ1.1.529, ಬಿಎ1 ಪ್ರಕರಣಗಳ ಪ್ರಮಾಣ ಶೇ.8.6 ರಷ್ಟು ತಗ್ಗಿದೆ. ಮೇನಲ್ಲಿ ಬಿಎ2 ಉಪತಳಿ ಪ್ರಮಾಣವು ಶೇ.80 ರಿಂದ ಶೇ.89ಕ್ಕೆ ಹೆಚ್ಚಿದೆ. ಇವುಗಳ ನಡುವೆ ಬಿಎ3, ಬಿಎ4, ಬಿಎ 5 ಉಪತಳಿಗಳು ಕೂಡಾ ಪತ್ತೆಯಾಗಿದ್ದು, ಆರಂಭಿಕ ಹಂತದಲ್ಲಿರುವುದನ್ನು ಗಮನಿಸಲಾಗಿದೆ’ ಎಂದಿದ್ದಾರೆ. ಜತೆಗೆ 2021 ಜನವರಿ -ಡಿಸೆಂಬರ್‌ವರೆಗೂ ಕೊರೋನಾ ವೈರಸ್‌ನ ಡೆಲ್ಟಾ ರೂಪಾಂತರಿ ಪ್ರಮಾಣ ಶೇ.90 ರಷ್ಟಿತ್ತು. 2022 ಜನವರಿಯಿಂದ -ಏಪ್ರಿಲ್‌ವರೆಗೂ ಡೆಲ್ಟಾ ಶೇ.10 ರಷ್ಟು, ಒಮಿಕ್ರೋನ್‌ ಉಪತಳಿಗಳು ಶೇ.88 ರಷ್ಟು, ಶೇ.2 ರಷ್ಟು ಇತರೆ ರೂಪಾಂತರಿ ಇದ್ದವು. ಮೇ ಮತ್ತು ಜೂನ್‌ನಲ್ಲಿ ಶೇ.99.2 ರಷ್ಟುಒಮಿಕ್ರೋನ್‌ ಉಪತಳಿಗಳೇ ಇವೆ ಎಂದು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ನಿಗಾ: ‘ಒಮಿಕ್ರೋನ್‌ ಉಪತಳಿಗಳಾದ ಬಿಎ4, ಬಿಎ5 ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಹೆಚ್ಚು ಪತ್ತೆಯಾಗಿದ್ದು, ಅಲ್ಲಿನ ಸರ್ಕಾರಗಳು ಈ ಉಪತಳಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿವೆ. ಒಮಿಕ್ರೋನ್‌ನ ಬಿಎ1.1.529, ಬಿಎ1, ಬಿಎ2 ಉಪತಳಿಗಳು ಶ್ವಾಸಕೋಶಕ್ಕೆ ನುಗ್ಗುವ ಸಾಮರ್ಥ್ಯ ಹೊಂದಿರಲಿಲ್ಲ. ಬಾಯಿ ಮತ್ತು ಮೂಗಿಗೆ ಸೀಮಿತವಾಗಿ ಕೆಮ್ಮು, ನೆಗಡಿಗೆ ಮಾತ್ರ ಉಂಟು ಮಾಡಿತು. ಹೀಗಾಗಿಯೇ ಮೂರನೇ ಅಲೆಯಲ್ಲಿ ಆಸ್ಪತ್ರೆ ದಾಖಲಾತಿ ಸಾವು, ನೋವು ಹೆಚ್ಚಿನ ಹಾನಿಯಾಗಲಿಲ್ಲ. ಆದರೆ, ಸದ್ಯ ಕಾಣಿಸಿಕೊಂಡಿರುವ ಉಪತಳಿಗಳಾದ ಬಿಎ4, ಬಿಎ5 ಸಾಕಷ್ಟು ತೀವ್ರವಾಗಿದ್ದು, ಶ್ವಾಸಕೋಶಕ್ಕೆ ದಾಳಿ ಮಾಡಬಹುದು. ಇವುಗಳಿಂದಲೇ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ರಾಜ್ಯ ಕೊರೋನಾ ವಂಶವಾಹಿ ಪರೀಕ್ಷೆಗಳ ಸಮಿತಿ ಸದಸ್ಯ ಡಾ.ವಿಶಾಲ್‌ ರಾವ್‌ ತಿಳಿಸಿದ್ದಾರೆ.

ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್ ಪಡೆದವರಿಗೆ ನೆಮ್ಮದಿಯ ಸುದ್ದಿ, ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ!

ಮೇ-ಜೂ ಕೊರೋನಾ ವೈರಸ್‌ ವಂಶವಾಹಿ ಪರೀಕ್ಷೆಗಳು
ರೂಪಾಂತರ/ಉಪತಳಿಗಳು - ಪ್ರಕರಣಗಳು

ಡೆಲ್ಟಾ- 3
ಇತರೆ - 14
ಬಿಎ1.1.529 - 189
ಬಿಎ1 - 1
ಬಿಎ2 - 1964
ಬಿಎ3 - 2
ಬಿಎ4 - 4
ಬಿಎ5 - 38
ಒಟ್ಟು ಪರೀಕ್ಷೆ - 2215

click me!