ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ; ಫೋಟೋ, ವಿಡಿಯೋ ತೆಗೆಯಲು ನಿರ್ಬಂಧ

By Sathish Kumar KHFirst Published Apr 25, 2024, 12:48 PM IST
Highlights

ಲೋಕಸಭಾ ಚುನಾವಣೆಯಲ್ಲಿ ಮತದಾನ ಕೇಂದ್ರಕ್ಕೆ ಹೋಗುವವರೆಗೂ ಮಾತ್ರ ಮೊಬೈಲ್ ಬಳಸಬಹುದು. ಆದರೆ, ಮತದಾನ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ.

ಬೆಂಗಳೂರು (ಏ.25): ರಾಜ್ಯದಾದ್ಯಂತ ನಾಳೆ ಏ.26ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳ ಒಳಗೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ. ಏಕೆಂದರೆ, ಎಲ್ಲ ಮತದಾನ ಕೇಂದ್ರದೊಳಗೆ ಮೊಬೈಲ್‌ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಸೇರಿದಂತೆ ಕಳೆದ ಕೆಲವು ಚುನಾವಣೆಗಳಲ್ಲಿ ಮತದಾರರು ಮತದಾನ ಮಾಡುವ ನಿಯಮಗಳನ್ನು ಪಾಲಿಸದೇ ಉಲ್ಲಂಘನೆ ಮಾಡಿದ ಹಲವು ನಿದರ್ಶನಗಳು ವರದಿಯಾಗಿವೆ. ಮತದಾನ ಮಾಡುವಾಗ ಅದನ್ನು ಫೋಟೋ ತೆಗೆದುಕೊಳ್ಳುವ ಅಥವಾ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡಿಕೊಂಡು ಸಿಕ್ಕಿಬಿದ್ದ ನಿದರ್ಶನಗಳೂ ವರದಿ ಆಗಿದ್ದವು. ಈ ಹಿನ್ನೆಲೆಯಲ್ಲಿ ಮತದಾನ ಕೇಂದ್ರದೊಳಗೆ ಮತ ಚಲಾಯಿಸಲು ತೆರಳುವ ವೇಳೆ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡದಿರಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಬಲ್ ಸೆಕ್ಯೂರಿಟಿ; ಎಲ್ಲ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಅಳವಡಿಕೆ

ವೋಟಿಂಗ್ ಬೂತ್ ಹುಡುಕಲು ಮೊಬೈಲ್ ಬೇಕು, ವೋಟ್ ಮಾಡಲು ಮೊಬೈಲ್ ನಿರ್ಬಂಧ: ಇಡೀ ದೇಶದಲ್ಲಿ ಚುನಾವಣಾ ಆಯೋಗದಿಂದ ವೋಟರ್‌ ಹೆಲ್ಪ್‌ಲೈನ್ ಆಪ್, ವೆಬ್‌ಸೈಟ್, ಸ್ಕ್ಯಾನ್ ಕೋಡ್‌ ಸೇರಿದಂತೆ ವಿವಿಧ ಆಯಾಮದಲ್ಲಿ ಮೊಬೈಲ್‌ನ ಮೂಲಕ ತಮ್ಮ ಮತಗಟ್ಟೆಗಳನ್ನು ಹುಡುಕಿಕೊಂಡು ಅಲ್ಲಿಗೆ ಹೋಗಬಹುದು. ಆದರೆ, ಮತಗಟ್ಟೆಯವರೆಗೂ ಮಾತ್ರ ಮೊಬೈಲ್ ಬಳಸಲು ಅವಕಾಶವಿದ್ದು, ಅದರ ನಂತರ ಮತದಾನ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ. ನೀವು ಮತದಾನಕ್ಕೆ ಹೋಗುವ ಮುನ್ನ ಅಲ್ಲಿ ಮೊಬೈಲ್‌ ಅನ್ನು ಇಟ್ಟು ಹೋಗಲು ಒಂದು ಟ್ರೈ (ಪ್ಲಾಸ್ಟಿಕ್ ಬುಟ್ಟಿ) ವ್ಯವಸ್ಥೆ ಮಾಡಲಾಗುತ್ತದೆ. ಅದರಲ್ಲಿ ಮೊಬೈಲ್ ಇಟ್ಟು ಮತದಾನ ಮಾಡಿ ಬಂದು ಪುನಃ ಅದನ್ನು ತೆಗೆದುಕೊಂಡು ಹೊರಗೆ ಹೋಗಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಮಾಡಲಾಗಿತ್ತು. ಆದಾಗ್ಯೂ ಜನರು ವಿವಿಧ ಕಾರಣಗಳಿಗಾಗಿ ತಮ್ಮ ಫೋನ್‌ಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂಬ ದೂರುಗಳಿವೆ. ಬೂತ್‌ಗಳಿಗೆ ಫೋನ್ ತೆಗೆದುಕೊಂಡು ಹೋಗಬೇಡಿ ಎಂದು ನಾವು ಹೇಳುತ್ತಿಲ್ಲ. ಮತದಾರರು ಮತದಾನ ಮಾಡುವಾಗ ಅವುಗಳನ್ನು ಬಳಸಬಾರದು ಎಂದು ಮಾತ್ರ ನಾವು ಹೇಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆ ಮತದಾನ ಮಾಡಲು ಹೋಗುವ ಜನರನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗುವುದು.

ಕೆಲವು ಸಂದರ್ಭಗಳಲ್ಲಿ, ಮತಗಟ್ಟೆಯೊಳಗೆ ಫೋನ್‌ಗಳನ್ನು ಅನುಮತಿಸದಿರಲು ಚುನಾವಣಾಧಿಕಾರಿಗಳು ನಿರ್ಧರಿಸಿದ್ದಾರೆ, ಇದು ಕೆಲವೇ ಸೆಕೆಂಡುಗಳ ವಿಷಯವಾಗಿದೆ. ಮತದಾನದ ಸಮಯದಲ್ಲಿ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ಬಳಕೆ ನಿರ್ಬಂಧಿಸಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

click me!