Heart attacks in Children: ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್‌ ಬಳಕೆ ಕಾರಣ! KMCRI ಆಘಾತಕಾರಿ ವರದಿ ಬಹಿರಂಗ

Kannadaprabha News, Ravi Janekal |   | Kannada Prabha
Published : Jun 29, 2025, 08:00 AM ISTUpdated : Jun 29, 2025, 11:25 AM IST
child herat attack

ಸಾರಾಂಶ

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಅತಿಯಾದ ಮೊಬೈಲ್‌ ಬಳಕೆ, ಜಂಕ್‌ ಫುಡ್‌ ಸೇವನೆ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವುದು ಪ್ರಮುಖ ಕಾರಣ ಎಂದು ಹುಬ್ಬಳ್ಳಿಯ ಕೆಎಂಸಿಆರ್‌ಐ ವೈದ್ಯರ ತಂಡ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. 

ಹುಬ್ಬಳ್ಳಿ (ಜೂ.29): ರಾಜ್ಯ ಮಾತ್ರವಲ್ಲದೇ ದೇಶದ ವಿವಿಧೆಡೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಕೂಡ ಹೃದಯಾಘಾತದಿಂದ ಮೃತಪಡುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಅತಿಯಾದ ಮೊಬೈಲ್‌ ಬಳಕೆ ಪ್ರಮುಖ ಕಾರಣ ಎಂಬ ಆಘಾತಕಾರಿ ಅಂಶ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ) ವೈದ್ಯರ ತಂಡ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.

8 ಮತ್ತು 9ನೇ ತರಗತಿ ಅಧ್ಯಯನ ಮಾಡುತ್ತಿರುವ, ಬೊಜ್ಜು ಹೆಚ್ಚಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ದೈಹಿಕ ಚಟುವಟಿಕೆ ಇಲ್ಲದಿರುವುದು, ಮೊಬೈಲ್‌ನಲ್ಲಿಯೇ ಹೆಚ್ಚು ಸಮಯ ಕಾಲ ಕಳೆಯುವುದು ಮತ್ತು ಜಂಕ್‌ ಫುಡ್‌ ಸೇವನೆಯು ಮಕ್ಕಳ ಆರೋಗ್ಯವನ್ನೇ ಕಸಿದು ಕೊಂಡಿರುವುದು ಅಧ್ಯಯನದಲ್ಲಿ ಪತ್ತೆ ಆಗಿದೆ. ಅಧ್ಯಯನಕ್ಕೆ ಒಳಪಡಿಸಿದ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳ ಲಕ್ಷಣಗಳು ಪತ್ತೆ ಆಗಿವೆ. ವೈದ್ಯರು ಆ ವಿದ್ಯಾರ್ಥಿಗಳ ಪೋಷಕರಿಗೆ ಮಕ್ಕಳ ಆರೋಗ್ಯದ ಸ್ಥಿತಿಗತಿಯ ವರದಿ ನೀಡಿದ್ದಾರೆ. ಅಲ್ಲದೆ ಅವರ ಜೀವನ ಶೈಲಿಯಲ್ಲಿ ಮಾಡಲೇಬೇಕಾದ ಬದಲಾವಣೆಯನ್ನು ತಿಳಿಸಿಕೊಟ್ಟಿದ್ದಾರೆ.

ಕೆಎಂಸಿಆರ್‌ಐ ಆಸ್ಪತ್ರೆಯ ಬಹುವಿಭಾಗೀಯ ಸಂಶೋಧನಾ ಘಟಕದ ನೋಡಲ್ ಅಧಿಕಾರಿ ಡಾ। ರಾಮ ಕೌಲಗುಡ್ಡ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ। ಮಂಜುನಾಥ ನೇಕಾರ, ವಿಜ್ಞಾನಿಗಳಾದ ಡಾ। ಶಿವಕುಮಾರ ಬೇಲೂರ ಮತ್ತು ಡಾ। ಅರುಣ ಶೆಟ್ಟರ ಅವರ ತಂಡ ಮಕ್ಕಳ ಮೇಲೆ ಈ ಕುರಿತು ಅಧ್ಯಯನ ನಡೆಸಿದೆ.

ಹೇಗೆ ಅಧ್ಯಯನ?:

ಧಾರವಾಡ ಜಿಲ್ಲೆಯ 6 ಶಾಲೆಗಳ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ತೂಕ ಹೆಚ್ಚಿರುವ ಸುಮಾರು 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಪೈಕಿ 26 ವಿದ್ಯಾರ್ಥಿಗಳಲ್ಲಿ ಅಸಹಜ ಲಕ್ಷಣಗಳು ಕಂಡುಬಂದಿವೆ. ಅಲ್ಲದೇ ಬಹುತೇಕ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಎದುರಿಸುತ್ತಿದ್ದು, 11 ವಿದ್ಯಾರ್ಥಿಗಳಲ್ಲಿ ಟ್ರೈಗ್ಲಿಸರೈಡ್‌ ಹೆಚ್ಚಿರುವುದು, 4 ವಿದ್ಯಾರ್ಥಿಗಳಲ್ಲಿ ಹೋಮೊಸಿಸ್ಟೈನ್ ಮತ್ತು ಲಿಪೊಪ್ರೋಟೀನ್ ಹೆಚ್ಚಾಗಿರುವುದು ಸೇರಿ ವಿವಿಧ ತೊಂದರೆಗಳನ್ನು ಪತ್ತೆ ಹಚ್ಚಲಾಗಿದೆ.

ಈ ವಿದ್ಯಾರ್ಥಿಗಳಲ್ಲಿ ಬೊಜ್ಜು ಹೆಚ್ಚಿರಲು, ದೈಹಿಕ ಚಟುವಟಿಕೆ ಇಲ್ಲದೇ ಇರುವುದು‌, ಪ್ರತಿನಿತ್ಯ ಶಾಲೆಗೆ ಹೋಗುವುದು ಹಾಗೂ ಮನೆಗೆ ಹೋಗುವುದಷ್ಟನ್ನೇ ಮಾಡುವುದು, ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಆಟವನ್ನೇ ಆಡುತ್ತಿರಲಿಲ್ಲ. ಪಠ್ಯೇತರ ಚಟುವಟಿಕೆಯಲ್ಲೂ ಭಾಗಿಯಾಗುತ್ತಿಲ್ಲ ಎಂಬ ಅಂಶಗಳನ್ನು ಪತ್ತೆ ಹಚ್ಚಲಾಗಿದೆ.

ನಾಲ್ಕು ಗಂಟೆ ಮೊಬೈಲ್ ವೀಕ್ಷಣೆ:

ಅಧ್ಯಯನಕ್ಕೆ ಒಳಪಟ್ಟ ಮಕ್ಕಳು ಪ್ರತಿದಿನ 1-4 ಗಂಟೆವರೆಗೆ ಮೊಬೈಲ್ ನೋಡುತ್ತಿರುವುದು ಗೊತ್ತಾಗಿದೆ. ಜತೆಗೆ ಅವರ ಆಹಾರ ಕ್ರಮ ಕೂಡ ಸರಿಯಾಗಿರಲಿಲ್ಲ. ವಿದ್ಯಾರ್ಥಿಗಳ ಪರೀಕ್ಷಾ ವರದಿಯನ್ನು ಅವರ ಪಾಲಕರಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೂ ಕಳುಹಿಸಿ ಕೊಡಲಾಗಿದೆ. ಅಧ್ಯಯನ ತಂಡವೇ ವಿದ್ಯಾರ್ಥಿಗಳ ಮನೆಗೆ ಹೋಗಿ, ಅವರಿಗೆ ಡಯಟ್ ಪ್ಲಾನ್, ದೈಹಿಕ ಚಟುವಟಿಕೆಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿಕೊಟ್ಟಿದೆ.

ಪರಿಹಾರವೇನು?:

ಮಕ್ಕಳ ಆಹಾರ ಪದ್ಧತಿ ಬದಲಾಯಿಸಬೇಕು. ಜಂಕ್ ಪುಡ್ ತಿನ್ನುವುದು, ಸಾಫ್ಟ್ ಡ್ರಿಂಕ್ಸ್ ಹೆಚ್ಚಾಗಿ ಕುಡಿಯುವುದನ್ನು ಬಿಡಬೇಕು. ದೈಹಿಕ ಚಟುವಟಿಕೆಗೂ ಸಮಯ ನೀಡಬೇಕು. ಮೊಬೈಲ್‌ ಬಳಕೆ ಕಡಿಮೆ ಮಾಡಬೇಕು. ಒಳ್ಳೆಯ ಜೀವನ ಶೈಲಿ, ಆಹಾರ ಪದ್ಧತಿ ರೂಢಿ ಮಾಡಿಕೊಂಡರೆ ಹೃದಯದ ತೊಂದರೆಯಿಂದ ಪಾರಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಸರ್ಕಾರಕ್ಕೆ ವರದಿ:

ಕೆಎಂಸಿಆರ್‌ಐ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಅಧ್ಯಯನದ ಕುರಿತು ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ. ಭಾರತೀಯ ಆಯುರ್ ವಿಜ್ಞಾನ ಸಂಸ್ಥೆ, ಶಿಕ್ಷಣ ಇಲಾಖೆ ಸಚಿವರಿಗೆ ಹಾಗೂ ಆರೋಗ್ಯ ಇಲಾಖೆ ಸಚಿವರಿಗೆ ಈ ವರದಿಯನ್ನು ಸಲ್ಲಿಸಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಪಾಲ್ಗೊಳ್ಳುವಂತೆ ಮಾಡಲು ಶಿಕ್ಷಣ ಇಲಾಖೆ ಎಲ್ಲ ಶಾಲಾ- ಕಾಲೇಜುಗಳಿಗೆ ನಿರ್ದೇಶನ ನೀಡಬೇಕು. ಮಕ್ಕಳ ಆರೋಗ್ಯ ತಪಾಸಣೆಯನ್ನೂ ಕಾಲಕಾಲಕ್ಕೆ ಮಾಡಿಸಬೇಕು. ಇದಕ್ಕೆ ನೀತಿ ರೂಪಿಸಬೇಕು ಎಂದು ಮನವಿ ಕೂಡ ಮಾಡಿದೆ.

ಒಟ್ಟಿನಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಮೊಬೈಲ್‌ ಬಳಕೆ ಹಾಗೂ ಬದಲಾದ ಜೀವನ ಶೈಲಿ ಕಾರಣ ಎಂಬುದು ಪಾಲಕರು, ಶಿಕ್ಷಕರು, ಪ್ರಜ್ಞಾವಂತರಲ್ಲಿ ಆತಂಕವನ್ನುಂಟು ಮಾಡಿರುವುದಂತೂ ಸತ್ಯ.

ಸರ್ಕಾರಿ ಹಾಗೂ ಖಾಸಗಿ‌ಯ 6 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ನಾನಾ ವಿಧಗಳಲ್ಲಿ ಅಧ್ಯಯನ ಮಾಡಲಾಗಿದೆ. 30 ಮಕ್ಕಳಲ್ಲಿ ಹೆಚ್ಚು ತೂಕದ ಮೂವರನ್ನು ಪರೀಕ್ಷೆಗೆ ಒಳಪಡಿಸಿದಾಗ ಆಘಾತಕಾರಿ ಅಂಶಗಳು ಪತ್ತೆಯಾಗಿವೆ. ವಿವಿಧ ತಪಾಸಣೆ ಮಾಡಲು ಪ್ರತಿ ವಿದ್ಯಾರ್ಥಿಗೆ ₹5 ಸಾವಿರ ವೆಚ್ಚ ತಗಲುತ್ತದೆ. ಸರ್ಕಾರ ನೀತಿ ರೂಪಿಸಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಅಂದಾಗ ಮಕ್ಕಳಲ್ಲಿನ ಹೃದಯಾಘಾತ ತಡೆಗಟ್ಟಬಹುದು.

-ಡಾ। ರಾಮ ಕೌಲಗುಡ್ಡ, ಕೆಎಂಸಿಆರ್‌ಐ ಬಹುವಿಭಾಗೀಯ ಸಂಶೋಧನಾ ಘಟಕದ ನೋಡಲ್ ಅಧಿಕಾರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!