ಜಂಟಿ ಅಧಿವೇಶನಕ್ಕೆ ಶಾಸಕರು ಗೈರು; ಕುರ್ಚಿಗಳು ಖಾಲಿ ಖಾಲಿ!

By Kannadaprabha NewsFirst Published Feb 11, 2023, 9:29 AM IST
Highlights

 ವಿಧಾನಮಂಡಲ ಜಂಟಿ ಅಧಿವೇಶನದ ಮೊದಲ ದಿನವೇ ಸದಸ್ಯರಿಂದ ನಿರಾಸಕ್ತಿ ವ್ಯಕ್ತವಾಗಿದ್ದು, ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಬಹುತೇಕ ಸದಸ್ಯರು ಸದನಕ್ಕೆ ಗೈರಾಗಿದ್ದರು.

ವಿಧಾನಸಭೆ (ಫೆ.11) : ವಿಧಾನಮಂಡಲ ಜಂಟಿ ಅಧಿವೇಶನದ ಮೊದಲ ದಿನವೇ ಸದಸ್ಯರಿಂದ ನಿರಾಸಕ್ತಿ ವ್ಯಕ್ತವಾಗಿದ್ದು, ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಬಹುತೇಕ ಸದಸ್ಯರು ಸದನಕ್ಕೆ ಗೈರಾಗಿದ್ದರು.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌(Governor Thawarchand Gehlot) ಭಾಷಣ ಮಾಡಿದ ವೇಳೆ ಬಹುತೇಕ ಕುರ್ಚಿಗಳು ಖಾಲಿ ಖಾಲಿ ಇದ್ದವು. ವಿಧಾನಸಭೆ(Assembly) ಮತ್ತು ವಿಧಾನಪರಿಷತ್‌(Legislative Council)ನ ಸದಸ್ಯರು ಒಟ್ಟಾಗಿ ಸೇರಿದರೂ ಸದನವು ಖಾಲಿ ಎನಿಸಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,(Siddaramaiah) ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಸದನಕ್ಕೆ ಗೈರಾಗಿದ್ದರು.ಜೆಡಿಎಸ್‌ನ ಸದಸ್ಯರು ಬೆರಳೆಣಿಕೆಯಷ್ಟುಇದ್ದರು. ಇನ್ನು, ಆಡಳಿತಾರೂಢ ಬಿಜೆಪಿ ಸದಸ್ಯರು ಕಾಂಗ್ರೆಸ್‌, ಜೆಡಿಎಸ್‌ಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಬಹಳಷ್ಟುಮಂದಿ ಗೈರಾಗಿದ್ದರು.

Latest Videos

Karnataka Budget Session 2023: ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ರಾಜ್ಯಪಾಲರ ಭಾಷಣದ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಹಾಜರಿರಬೇಕಾಗಿರುವುದು ಸಂಪ್ರದಾಯ. ಆದರೆ, ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ಯಾತ್ರೆಗಳನ್ನು ನಡೆಸುವಲ್ಲಿ ಮಗ್ನವಾಗಿವೆ. ಹೀಗಾಗಿ ಬಹುತೇಕ ಶಾಸಕರು ಪ್ರಚಾರದ ಕಡೆ ಗಮನಹರಿಸಿದ್ದಾರೆ. ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರೆ, ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆ(Pancharatna rathayatre)ಯಲ್ಲಿ ಭಾಗವಹಿಸಿದ್ದಾರೆ. ಬಿಜೆಪಿಯು ಸಂಕಲ್ಪಯಾತ್ರೆಗೆ ಸಿದ್ಧತೆ ಕೈಗೊಂಡಿದೆ.

ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಛಲಕ್ಕೆ ಬಿದ್ದಿರುವ ಎಲ್ಲಾ ರಾಜಕೀಯ ಪಕ್ಷಗಳು ಬಹುಮತ ಗಳಿಸುವ ನಿಟ್ಟಿನಲ್ಲಿ ರಣತಂತ್ರ ಮಾಡಲು ಮಗ್ನವಾಗಿವೆ. ಅಧಿವೇಶನದ ಕಡೆ ಹೆಚ್ಚಿನ ಗಮನ ಇಲ್ಲದಂತೆ ಕಾಣುತ್ತದೆ. ಜನರನ್ನು ತಲುಪಲು ಇನ್ನಿಲ್ಲದ ಕಸರತ್ತು ನಡೆಸಿವೆ. ಪ್ರತಿಪಕ್ಷ ಕಾಂಗ್ರೆಸ್‌ನ ಮೊದಲ ಸಾಲಿನಲ್ಲಿ ಸಿದ್ದರಾಮಯ್ಯ ಹೊರತುಪಡಿಸಿದರೆ ಇನ್ನುಳಿದ ನಾಯಕರು ಹಾಜರಿದ್ದರು. ಆದರೆ, ನಂತರದ ಸಾಲಿನಲ್ಲಿನ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಜೆಡಿಎಸ್‌ನಲ್ಲಿಯೂ ಪ್ರಮುಖ ಮುಖಂಡರು ಗೈರು ಹಾಜರಾಗಿದ್ದರು. ಬಿಜೆಪಿಯಿಂದ ಮೊದಲ, ಎರಡನೇ ಸಾಲಿನಲ್ಲಿ ಸದಸ್ಯರು ಕಾಣಿಸಿದರೆ, ಉಳಿದ ಸಾಲಿನಲ್ಲಿ ಸದಸ್ಯರ ಹಾಜರಾತಿ ಕಡಿಮೆ ಇತ್ತು.

ಮತ್ತೊಮ್ಮೆ ಭಾರತ ವಿಶ್ವ ನಾಯಕನಾಗಿಸಲು ಕೈಜೋಡಿಸಿ: ಥಾವರಚಂದ

click me!