
ಬೆಂಗಳೂರು/ ಚಿತ್ರದುರ್ಗ (ಆ.22): ಚಿತ್ರದುರ್ಗದ ಶಾಸಕ ಹಾಗೂ ಚಿತ್ರನಟ ದೊಡ್ಡಣ್ಣ ಅವರ ಅಳಿಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮನೆ ಹಾಗೂ ಮಾಲೀಕತ್ವದ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ ಭಾರೀ ದಾಳಿ ನಡೆಸಿದ್ದಾರೆ. ಮನಿ ಲಾಂಡರಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ ಮತ್ತು ಗೋವಾ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು, ಚಿತ್ರದುರ್ಗದಲ್ಲಿ ಶೋಧ ಕಾರ್ಯ: ಬೆಂಗಳೂರಿನ ವಸಂತನಗರದಲ್ಲಿರುವ ಶಾಸಕ ಪಪ್ಪಿ ಅವರ ಖಾಸಗಿ ಅಪಾರ್ಟ್‌ಮೆಂಟ್ ಮತ್ತು ಸಹಕಾರ ನಗರದಲ್ಲಿರುವ ನಿವಾಸಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಳ್ಳಕೆರೆಯಲ್ಲೂ ಶಾಸಕರ ನಿವಾಸ ಸೇರಿದಂತೆ ಅವರ ಸಹೋದರರಾದ ಕೆ.ಸಿ. ನಾಗರಾಜ್ ಮತ್ತು ಕೆ.ಸಿ. ತಿಪ್ಪೇಸ್ವಾಮಿ ಅವರ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆದಿದೆ. ಸುಮಾರು ಹತ್ತು ಮಂದಿಗೂ ಅಧಿಕ ಅಧಿಕಾರಿಗಳ ತಂಡ ಮೂರು ಇನೋವಾ ಕಾರುಗಳಲ್ಲಿ ಆಗಮಿಸಿ, ಬೆಳಗ್ಗೆ 5.30ಕ್ಕೆ ದಾಳಿ ಆರಂಭಿಸಿದೆ. ದಾಳಿ ನಡೆದ ಸಂದರ್ಭದಲ್ಲಿ ಶಾಸಕ ವೀರೇಂದ್ರ ಪಪ್ಪಿ ಅವರು ಸಿಕ್ಕಿಂನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಇ.ಡಿ. ದಾಳಿಯು ಶಾಸಕ ವೀರೇಂದ್ರ ಪಪ್ಪಿ ಮಾಲೀಕತ್ವದ ಹಲವು ಕಂಪನಿಗಳ ಮೇಲೆ ಕೇಂದ್ರೀಕೃತವಾಗಿದೆ. ಅವುಗಳೆಂದರೆ ರತ್ನ ಗೇಮಿಂಗ್ ಸಲ್ಯೂಷನ್ಸ್ (Ratna Gaming Solutions), ರತ್ನ ಗೋಲ್ಡ್ ಕಂಪನಿ (Ratna Gold Company), ರತ್ನ ಮಲ್ಟಿ ಸೋರ್ಸ್ ಕಂಪನಿ (Ratna Multisource Company), ಪಪ್ಪಿ ಟೆಕ್ನಾಲಜೀಸ್ ಕಂಪನಿ (Pappi Technologies Company), ಪಪ್ಪಿ ಟೂರ್ಸ್ & ಟ್ರಾವೆಲ್ಸ್ (Pappi Tour & Travels) ಮತ್ತು ಪಪ್ಪಿ ಬೇರ್ ಬಾಕ್ಸ್ (Pappi Bear Bax). ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿ ಗೇಮಿಂಗ್ ಆ್ಯಪ್ ಸಂಬಂಧ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ ಇ.ಡಿ. ಅಧಿಕಾರಿಗಳು ಈ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಇ.ಡಿ. ದಾಳಿ ನಡೆದಿತ್ತು: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮೇಲೆ ಇ.ಡಿ. ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಅಕ್ರಮ ಹಣ ಪತ್ತೆಯಾಗಿತ್ತು. ಆ ಪ್ರಕರಣದ ಆಧಾರದ ಮೇಲೆ ಇ.ಡಿ. ಪ್ರವೇಶಿಸಿ, ಶಾಸಕರನ್ನು ಬಂಧಿಸಿತ್ತು. ಈಗ ನಡೆದಿರುವ ದಾಳಿ ಕೂಡ ಹಳೆಯ ಪ್ರಕರಣದ ಕುರಿತು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಿವಾಸಗಳು ಮತ್ತು ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ