ಸೋತ ಅಭ್ಯರ್ಥಿ ಹೆಸರಲ್ಲಿ ಅನುದಾನ: ಸದನದಲ್ಲಿ ಟಿ.ಡಿ.ರಾಜೇಗೌಡ ಧರಣಿ

By Govindaraj S  |  First Published Dec 28, 2022, 1:33 PM IST

ಚುನಾವಣೆಯಲ್ಲಿ ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡಿರುವ ವಿಷಯ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ, ತೀವ್ರ ಚರ್ಚೆ ಮತ್ತು ಬಾವಿಯಲ್ಲಿ ಧರಣಿ ನಡೆಸಲು ಕಾರಣವಾಯಿತು. 


ವಿಧಾನಸಭೆ (ಡಿ.28): ಚುನಾವಣೆಯಲ್ಲಿ ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡಿರುವ ವಿಷಯ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ, ತೀವ್ರ ಚರ್ಚೆ ಮತ್ತು ಬಾವಿಯಲ್ಲಿ ಧರಣಿ ನಡೆಸಲು ಕಾರಣವಾಯಿತು. ಮಂಗಳವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಟಿ.ಡಿ.ರಾಜೇಗೌಡ, ತಾವು ಪ್ರತಿನಿಧಿಸುವ ಶೃಂಗೇರಿ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಹೆಸರಿನಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ತಮ್ಮ ಹಕ್ಕಿಗೆ ಚ್ಯುತಿಯಾಗಿದೆ ಎಂದರು. ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಸದನದ ಸದಸ್ಯ ರಾಜೇಗೌಡ ಅವರ ಪ್ರಸ್ತಾಪ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ. 

ಶಾಸಕರ ಅನುದಾನದಲ್ಲಿ ಕಡಿತ ಮಾಡಿಲ್ಲ. ಯಾರ ಹೆಸರಲ್ಲಿ ಅನುದಾನ ಹೋದರೂ, ಅಭಿವೃದ್ಧಿಯಾಗುತ್ತದೆ ಎಂದು ತೃಪ್ತಿಪಟ್ಟುಕೊಳ್ಳಬೇಕು ಎಂದು ಹೇಳಿದರು. ನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮಾಜಿ ಶಾಸಕರ ಹೆಸರನಲ್ಲಿ ಅನುದಾನ ನೀಡಿರುವುದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಶಿಷ್ಟಾಚಾರ ಉಲ್ಲಂಘನೆಗೆ ಯಾವುದೇ ದಾಖಲೆಗಳು ಇಲ್ಲ. ಆದರೆ ಇಂತಹ ಬೆಳವಣಿಗೆಗಳು ಹಿಂದಿನಿಂದಲೂ ಬೆಳೆದುಬಂದಿವೆ. ಇಂತಹ ಪ್ರವೃತ್ತಿ ನಿಲ್ಲಬೇಕು’ ಎಂದು ಹೇಳಿ ಹಕ್ಕುಚ್ಯುತಿಪ್ರಸ್ತಾಪ ತಿರಸ್ಕರಿಸಿದರು. ಇದರಿಂದ ಅಸಮಾಧಾನಗೊಂಡ ರಾಜೇಗೌಡ ಅವರು ಸಭಾಧ್ಯಕ್ಷರ ಮುಂದೆ ಧರಣಿ ನಡೆಸಿದರು. ಇದಕ್ಕೆ ಕಾಂಗ್ರೆಸ್‌ನ ಡಾ.ರಂಗನಾಥ್‌ ಜತೆಯಾಗಿ ಧರಣಿ ನಡೆಸಿದರು. ಭೋಜನ ವಿರಾಮದ ಬಳಿಕವೂ ಧರಣಿ ಮುಂದುವರಿಸಿದರು.

Latest Videos

undefined

ಹಿಂದೂ ಅರ್ಚಕರ ನೇಮಕ, ಹೋರಾಟಕ್ಕೆ ಬೆಲೆ ಸಿಕ್ಕಿದೆ: ಪ್ರಮೋದ್‌ ಮುತಾಲಿಕ್‌

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿರುವುದಕ್ಕೆ ಆಕ್ಷೇಪವಿದ್ದರೆ ಅದನ್ನು ರದ್ದುಪಡಿಸಲಾಗುವುದು ಎಂದರು. ಅದಕ್ಕೆ ಸಭಾಧ್ಯಕ್ಷ ಕಾಗೇರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜೇಗೌಡ ಅವರ ಮನವೊಲಿಸಿ, ಮಂಜೂರಾಗಿರುವ ಹಣ ರದ್ದುಗೊಳಿಸುವುದು ಬೇಡ, ಕ್ಷೇತ್ರದಲ್ಲಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಬಳಿಕ ರಾಜೇಗೌಡ ಅವರು ಪ್ರತಿಭಟನೆ ಹಿಂಪಡೆದರು. ಕೊನೆಗೆ ಮುಖ್ಯಮಂತ್ರಿಗಳು ಇನ್ನು ಮುಂದೆ ಯಾರ ಹೆಸರು ಪ್ರಸ್ತಾಪಿಸದೇ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.

ಅರಣ್ಯ ಇಲಾಖೆಗೆ ರೈತರ ಸಹಕಾರ ಅತ್ಯಗತ್ಯ: ಅರಣ್ಯ ಭೂಮಿ ರಕ್ಷಣೆ, ಆನೆಗಳ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ರೈತರು, ಗ್ರಾಮಸ್ಥರ ಸಹಕಾರವೂ ಅತ್ಯಗತ್ಯವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಆನೆಗಳ ಹಾವಳಿಗೆ ಹಾನಿಯಾದ ಸೂಸಲವಾನಿ, ವಿಠಲ, ಹಾಗಲಮನೆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದರು. ಆನೆಗಳ ಹಾವಳಿಯಿಂದ ರೈತರಿಗೆ ರಕ್ಷಣೆ ನೀಡದೆ ಇರುವುದು ಸರಿಯಲ್ಲ. ಇದರಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯದ್ದೂ ತಪ್ಪಾಗಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಂಭೀರವಾದ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆಯುತ್ತೇನೆ. 

ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ತಂದ: ಕೊಳಕು ಮಂಡಲ ಕಂಡು ಹೌಹಾರಿದ ಜನ

ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದರೊಂದಿಗೆ ಮಲೆನಾಡಿನ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ಈಗಾಗಲೇ ರೈತರು ಒತ್ತುವರಿ ಮಾಡಿರುವ ಜಾಗ ಹೊರತುಪಡಿಸಿ ಉಳಿದ ಜಾಗದಲ್ಲಿ ಅರಣ್ಯ ಇಲಾಖೆಯವರು ಇಪಿಟಿಯನ್ನು ತೆಗೆಯಬೇಕು. ಈಗಾಗಲೇ ರೈತರು ಫಸಲು ಬರುವ ಬೆಳೆಗಳನ್ನು ಹೊಂದಿದ್ದರೆ ಅವರಿಗೆ ಯಾವುದೇ ರೀತಿಯ ತೊಂದರೆ ಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಆನೆ ಹಾವಳಿಯಿಂದ ಹಾನಿಯಾದ ಬೆಳೆಗೆ ಪರಿಹಾರ ಧನ ನೀಡಿದರೆ ಮಾತ್ರ ಸಾಲದು. ಅದರ ಜೊತೆಗೆ ಆನೆ ಹಾವಳಿ ತಡೆಯಲು ಶಾಶ್ವತವಾದ ಪರಿಹಾರ ಕಂಡು ಹಿಡಿಯಬೇಕು. ಈ ಭಾಗದ ಆನೆ ಹಾವಳಿಗೆ ತುರ್ತು ಕ್ರಮ ಕೈಗೊಳ್ಳಬೇಕು.ರೈತರ, ಗ್ರಾಮಸ್ಥರ ನೆಮ್ಮದಿ ಬದುಕಿಗೆ ಸಹಕಾರ ನೀಡಬೇಕು ಎಂದು ಸೂಚಿಸಿದರು.

click me!