
ಬೆಂಗಳೂರು (ಅ.25): ರಾಜ್ಯದಲ್ಲಿ ಅ.31ರಂದು ನರಕ ಚತುರ್ದಶಿ, ನ.1ರಂದು ಕನ್ನಡ ರಾಜ್ಯೋತ್ಸವ, ನ.2ರಂದು ಬಲಿಪಾಡ್ಯಮಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಅ.31ರಿಂದ ನ.1ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಜೊತೆಗೆ, ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ನ.03 ಮತ್ತು ನ.04ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಈ ಬಾರಿಯೂ ಪ್ರಯಾಣ ದರ ಹೆಚ್ಚಳ ಬರೆ!
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ಮಾಡಲಾಗುತ್ತದೆ. ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಬಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.
ಇ-ಟಿಕೇಟ್ ಬುಕಿಂಗ್‌ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ.
ಗುಂಪು ಮತ್ತು ಎರಡೂ ಬದಿಯ ಟಿಕೆಟ್ ಬುಕಿಂಗ್‌ಗೆ ಶೇ.10 ರಿಯಾಯಿತಿ:
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಟಿಕೆಟ್ ಬುಕಿಂಗ್ ಮಾಡುವಾಗ 4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು. ಜೊತೆಗೆ ಊರಿಗೆ ಹೋಗುವ & ಬರುವ ಪ್ರಯಾಣದ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ವಾಪಸ್ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು. ಇನ್ನು ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.
ಇದನ್ನೂ ಓದಿ: ಕನಕಪುರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ಕಾರ್ಯಾಚರಣೆ ಮಾಡಲಾಗುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್‌ಜಾಲ ವ್ಯವಸ್ಥೆಯಲ್ಲಿ ಹಾಗೂ ಕರಾರಸಾ ನಿಗಮದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ ಹಾಗೂ ಸದರಿ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ. ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ