ರಾಜ್ಯದಲ್ಲಿ ಮೊದಲ ಬಾರಿಗೆ ನಡೆದ ಲಿಂಬೆ ಉತ್ಸವದ ಝಲಕ್

By Suvarna News  |  First Published Apr 23, 2022, 8:01 PM IST

• ಬರದ ನಾಡಲ್ಲಿ ಭರ್ಜರಿ ಲಿಂಬೆ ಉತ್ಸವ..!
• ರಾಜ್ಯದಲ್ಲಿ ಮೊದಲ ಬಾರಿಗೆ ಲಿಂಬೆ ಉತ್ಸವ ಆಯೋಜನೆ..!
• ಲಿಂಬೆ, ಸಿರಿಧಾನ್ಯ ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಮಳಿಗೆ ಉದ್ಘಾಟನೆ..!


ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್..

ವಿಜಯಪುರ (ಏ.23):
ಲಿಂಬೆಯ ನಾಡು ಎಂದೇ ಹೆಸರುವಾಸಿಯಾದ ಬರದ ನಾಡು ವಿಜಯಪುರದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಲಿಂಬೆ ಉತ್ಸವ-2022 ಮಹತ್ವದ ಕಾರ್ಯಕ್ರಮಕ್ಕೆ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರ ಸಾಕ್ಷಿಯಾಯಿತು.

ಕೇಂದ್ರ ಸರಕಾರದ ಮಹಾತ್ಮಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ-ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ವಿಜಯಪೂರ ಜಿಲ್ಲೆಗೆ ಲಿಂಬೆ ಬೆಳೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಏಪ್ರೀಲ್ 23 ಮತ್ತು ಏಪ್ರೀಲ್ 24ರಂದು ಎರಡು ದಿನಗಳ ಕಾಲ  ನಗರದಲ್ಲಿ ಲಿಂಬೆ ಉತ್ಸವವನ್ನು ಆಯೋಜನ ಮಾಡಲಾಗಿದೆ.

Latest Videos

undefined

ಏಪ್ರೀಲ್ 23ರಂದು ನಗರದ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಂಧಗಿ ಶಾಸಕರಾದ ರಮೇಶ ಭೂಸನೂರ ಅವರು ಚಾಲನೆ‌ ನೀಡಿದರು. ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಶಾಂತಿಗಾಗಿ 18 ಕೋಟಿ ಜಪಯಜ್ಞ: ಹೊಸ ದಾಖಲೆಗೆ ಸಾಕ್ಷಿಯಾದ ವಿಜಯಪುರ!

ಬರದ ನಾಡಲ್ಲಿ ಭರ್ಜರಿ ಲಿಂಬೆ ಉತ್ಸವ..!
ವಿಜಯಪುರ ಜಿಲ್ಲೆ ಅಂದ್ರೆ ಹೇಳಿ-ಕೇಳಿ ಬರದ ನಾಡು.. ಇಂಡಿ, ಸಿಂದಗಿ ಭಾಗಗಳಲ್ಲಿ ಲಿಂಬೆಯೇ ಪ್ರಮುಖ ಬೆಳೆ. ಇಲ್ಲಿ ಬೆಳೆಯುವ ನಿಂಬೆ ದೇಶ-ವಿದೇಶಗಳಲ್ಲು ಮನೆ ಮಾತು.. ಹೀಗಾಗಿ ಹಿಂದೆ ಇಂಡಿ ತಾಲೂಕಿನಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಕೂಡ ರಚನೆಯಾಗಿದೆ. ಇದೆಲ್ಲದ ಹಿನ್ನಲೆಯನ್ನ ಇಟ್ಟುಕೊಂಡು ವಿಜಯಪುರದಲ್ಲಿ ಲಿಂಬೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಭರ್ಜರಿಯಾಗಿ ಆರಂಭಗೊಂಡಿರುವ ಲಿಂಬೆ ಉತ್ಸವದಲ್ಲಿ ತರಹೇವಾರಿ ಲಿಂಬೆಗಳನ್ನ ರೈತರು ಪ್ರದರ್ಶನಕ್ಕಿಟ್ಟಿದ್ದಾರೆ.. ಗಜ ನಿಂಬೆ, ಸೂಜಿ ನಿಂಬೆ, ಸೀಡ್‌ಲೆಸ್ ಲಿಂಬೆ, ಕಾಜಿ ನಿಂಬೆ ಸೇರಿದಂತೆ ನಿಂಬೆ ಅಗಿಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ..

ಎರಡು ದಿನವೂ ವಿಚಾರ ಸಂಕೀರಣ.! 
ರಾಜ್ಯಮಟ್ಟದ ಲಿಂಬೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಲಿಂಬೆ ಉತ್ಸವ - 2022 ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನುರಿತ ತಜ್ಞರಿಂದ ಲಿಂಬೆ ಹಾಗೂ ಸಿರಿಧಾನ್ಯಗಳ ಸಂಸ್ಕರಣೆ, ಮಾರುಕಟ್ಟೆ, ರಫ್ತು ಅವಕಾಶಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಈ ಉತ್ಸವದಲ್ಲಿ ಲಿಂಬೆ ಹಾಗೂ ಸಿರಿಧಾನ್ಯದ ವಿವಿಧ ಪದಾರ್ಥಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ.

ಮಂಡಳಿಯ ಕಾರ್ಯವೈಖರಿಗೆ ಶ್ಲಾಘನೆ..! 
ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಶೋಕ ಅಲ್ಲಾಪೂರ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, ಮಂಡಳಿಯ ಸಹಾಯಕ ನಿರ್ದೇಶಕ ಆನಂದ ಬಿರಾದಾರ ಹಾಗೂ ಇನ್ನೀತರ ಮಹನೀಯರ ಜನಪರ ಕಾಳಜಿಯಿಂದ ಇಂತಹ ಮಹತ್ವದ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ ಎಂದು ಸಮಾರಂಭದಲ್ಲಿ ಶ್ಲಾಘನೆ ವ್ಯಕ್ತವಾಯಿತು.

ಸಾಧನೆ ಮಾಡಿದ ರೈತರಿಗೆ ಸನ್ಮಾನ..! 
ಇದೇ ವೇಳೆ ಲಿಂಬೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಲ್ಲಿ ಸಾಧನೆ ತೋರಿದ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. 22 ಸಹಕಾರ ಉತ್ಪಾದಕರ ಸಂಘಗಳನ್ನು ಇದೆ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಟ್ರೇಡ್ ಮಾರ್ಕನ್ನು ಕೂಡ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮ ಬರಗಿಮಠ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಡಿ.ಆರ್ ಪಾಟೀಲ, ಎಸ್.ಐ ಹಣಮಶೆಟ್ಟಿ, ಸಿದ್ಧು ಪೂಜಾರಿ, ಡಾ.ಕಲಘಟಗಿ, ಮಹಾದೇವ ಅಂಬಲಿ, ಸದಾಶಿವ ಪಾಟೀಲ, ರಾಘವೇಂದ್ರ ಬಗಲಿ, ಗುರುರಾಜ ಕಕ್ಕಮರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

click me!