* ಹೆಜ್ಜೇನು ದಾಳಿಯಿಂದ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಸಾವು
* ಚಿಕ್ಕಮಗಳೂರು ತಾಲೂಕಿನ ಕೃಷ್ಣಗಿರಿ ಎಸ್ಟೇಟ್‌ನಲ್ಲಿ ಘಟನೆ
* ಕಾಫಿ ತೋಟಕ್ಕೆ ಹೋಗಿದ್ದಾಗ ಹೆಜ್ಜೇನು ದಾಳಿ ನಡೆಸಿದ್ದವು
* ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಕೊನೆಯುಸಿರು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.23):ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಇಂದು(ಶನಿವಾರ) ದುರ್ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕಾಫಿ ತೋಟಕ್ಕೆ ಹೋಗಿದ್ದ ಸಮಯದಲ್ಲಿ ಹೆಜ್ಜೇನು ದಾಳಿ ನಡೆದಿದೆ. ಒಮ್ಮೆಲೆ ಸಾವಿರಕ್ಕೂ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ತೋಟದ ಮಾಲೀಕ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ ಎಸ್ ಭೋಜೇಗೌಡ ಅಸುನೀಗಿದ್ದಾರೆ.
ಹೆಜ್ಜೇನು ದಾಳಿಗೆ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಸಾವು
ಕಾಫಿ ತೋಟಕ್ಕೆ ಹೋಗಿದ್ದಂತ ಸಂದರ್ಭದಲ್ಲಿ ದಿಢೀರ್ ಹೆಜ್ಜೇನು ದಾಳಿ ನಡೆಸಿದ ಕಾರಣದಿಂದಾಗಿ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್ ಬೋಜೇಗೌಡ (74 )ಸಾವನ್ನಪ್ಪಿರೋ ಘಟನೆ ನಡೆದಿದೆ. ಚಿಕ್ಕಮಗಳೂರುತಾಲೂಕಿನ ಕೃಷ್ಣಗಿರಿಯ ಕಾಫಿ ಎಸ್ಟೇಟ್‌ಗೆ ಎಂದಿನಂತೆ ತೆರಳಿದ್ದರು. ತೋಟದಲ್ಲಿ ಸುತ್ತಾಡುತ್ತಿದ್ದಂತ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಸಾವಿರಕ್ಕೂ ಹೆಚ್ಚು ಹೆಜ್ಜೇನುಗಳು ದಾಳಿ ನಡೆಸಿ ಕಚ್ಚಿದ ಪರಿಣಾಮ, ದಾಳಿಗೆ ಒಳಗಾದಂತ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ತೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
undefined
SSLC ಪರೀಕ್ಷೆ ವೇಳೆ ಜೇನುನೊಣ ದಾಳಿ, ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!
ಅಕಾಲಿಕ ನಿಧನಕ್ಕೆ ಗಣ್ಯರು ಸಂತಾಪ
ಭೋಜೇಗೌಡರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಜನತಾಪಕ್ಷ,ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿದ್ದು, ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಕಾಫಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಒಳ್ಳೆಯ ರಾಜಕಾರಣಿಯಾಗಿದ್ದ ಎಂ.ಎಸ್.ಭೋಜೇಗೌಡ ಅವರು ಕಾಫಿ ಮಂಡಳಿ ಅಧ್ಯಕ್ಷರಾಗಿದ್ದಾಗ ಕಾಫಿಬೆಳೆಗಾರರಿಗೆ ಏನೇನು ಕೆಲಸಗಳಾಗಬೇಕೆಂಬುದನ್ನು ಅರಿತು ಕಾರ್ಯನಿರ್ವಹಿಸಿದ್ದರು.ಇವರ ಅಕಾಲಿಕ ನಿಧನಕ್ಕೆ ವಿವಿಧ ಪಕ್ಷಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಸಿ.ಟಿ ರವಿ ಪತ್ನಿ ಪಲ್ಲಿವಿ ಸಿ.ಟಿ ರವಿ ,ಕಾಂಗ್ರೇಸ್ ಮಾಜಿ ಜಿಲ್ಲಾಧ್ಯಕ್ಷ ಎಮ್ ಎಲ್ ಮೂರ್ತಿ,ಪ್ರಕಾಶ್ , ಸಿಪಿಐ ಪಕ್ಷದ ರಾಧಸುಂದರೇಶ್ , ಅಪಾರ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಆಗಮಿಸಿದರು.
2ನೇ ಬಾರಿ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದ ಎಂ.ಎಸ್. ಭೋಜೇಗೌಡ
ಕಾಫಿ ಮಂಡಳಿ ಅಧ್ಯಕ್ಷರಾಗಿ 2 ಭಾರೀ ಭೋಜೇಗೌಡ ಸೇವೆ ಸಲ್ಲಿಸಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಕಾಫಿ ಬೆಳೆಗಾರರ ಪರ ಹಲವು ಕೆಲಸ ಕಾರ್ಯಗಳನ್ನು ಮಾಡಿದ್ದರು.ಮಳೆಯಿಂದ ಕಾಫಿ ಬೆಳೆಗೆ ನಷ್ಟ ಉಂಟಾದ ಸಮಯದಲ್ಲಿ ಕೇಂದ್ರದಲ್ಲಿ ಧ್ವನಿ ಎತ್ತಿದ್ದರು. ಅಲ್ಲದೆ ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿರುವ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಗಾರರಿಗೆ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ತಮ್ಮದೇ ರೀತಿ ಹೋರಾಟ ನಡೆಸುತ್ತಿದ್ದರು. 2ನೇ ಭಾರೀ ಗೆ ಕಾಫಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಭೋಜೇಗೌಡರ ಅಧಿಕಾರದ ಅವಧಿ ಇದೇ ಮಾರ್ಚ್ ನಲ್ಲಿ ಅಂತ್ಯವಾಗಿತ್ತು.
ರಾಜಕೀಯದಲ್ಲಿ ಅಜಾತಶತ್ರು ಎಂ ಎಸ್ ಭೋಜೇಗೌಡ
ರಾಜಕೀಯದಲ್ಲಿ ಅಜಾತಶತ್ರು ಎನ್ನಿಸಿಕೊಂಡಿದ್ದವರು ಎಂ ಎಸ್ ಭೋಜೇಗೌಡ ಮೂರು ಪಕ್ಷದಲ್ಲೂ ಗೆಳಯರ ಬಳಗವನ್ನು ಹೊಂದಿದ್ದರು. ರಾಜಕೀಯದಲ್ಲಿ ಮೂರು ಪಕ್ಷಗಳ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಇವರು. ಜನತಾ ಪಕ್ಷದ ಮೂಲಕ ರಾಜಕೀಯ ಆರಂಭಿಸಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಕಾಂಗ್ರೇಸ್ ಪಕ್ಷಕ್ಕೆ ಸೇರಿ ಅಲ್ಲಿಯೂ ಒಮ್ಮೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ತದನಂತರ ಬಿಜೆಪಿ ಪಕ್ಷ ಸೇರಿದ ಇವರು ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿದ್ದರು.ಅಲ್ಲದೆ ಚಿಕ್ಕಮಗಳೂರು ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಸಿ ಸೋಲು ಅನುಭೋವಿಸಿದರು.