* ರಾಷ್ಟ್ರದ 130 ಕೋಟಿ ಜನರ ಅಭಿವೃದ್ಧಿಗಾಗಿ ಬಿಜೆಪಿ ಪ್ರಯತ್ನಿಸುತ್ತಿದೆ
* ಬಿಎಸ್‌ಪಿ ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಶಾಸಕ ಮಹೇಶ್ ಈಗ ಬಿಜೆಪಿ ಸೇರಿದ್ದಾರೆ: ಕಟೀಲ್
* ಮಹೇಶ್ ಬಿಜೆಪಿ ಸೇರಿರುವುದು ಇನ್ನಷ್ಟು ಶಕ್ತಿ ಬಂದಂತಾಗಿದೆ: ಬೊಮ್ಮಾಯಿ
ಬೆಂಗಳೂರು(ಆ.06): ಕಳೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದಿಂದ ಚುನಾಯಿತರಾಗಿ ಬಳಿಕ ಆ ಪಕ್ಷದಿಂದ ಹೊರಬಂದಿದ್ದ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಗುರುವಾರ ನಗರದಲ್ಲಿನ ಪಕ್ಷದ ಕಚೇರಿ ಹೊರಭಾಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಹೇಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬರಮಾಡಿಕೊಂಡರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಈ ವೇಳೆ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಎಸ್‌ಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಶಾಸಕ ಮಹೇಶ್ ಅವರು ಈಗ ಬಿಜೆಪಿ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಆಡಳಿತ, ಬಿಜೆಪಿ ಚಿಂತನೆ, ವಿಚಾರಧಾರೆಗಳನ್ನು ಮೆಚ್ಚಿ ಬಿಜೆಪಿಗೆ ಸೇರಿದ್ದು ಅವರಿಗೆ ಸ್ವಾಗತ ಎಂದರು.
ಬಿಎಸ್‌ವೈ ಭೇಟಿ ಬಳಿಕ ಬಿಜೆಪಿ ಸೇರ್ಪಡೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಶಾಸಕ
ಅವರ ಮೂಲಕ ಬಿಜೆಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೇರೆ ಬೇರೆ ಪಕ್ಷಗಳ ಹತ್ತಾರು ಜನರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಕೇಂದ್ರದಲ್ಲಿ ಮೋದಿ ಅವರ ಏಳು ವರ್ಷಗಳ ಅಭಿವೃದ್ಧಿ ಕಾರ್ಯ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಮೆಚ್ಚಿಕೊಂಡು ಅನೇಕರು ಬಿಜೆಪಿ ಸೇರಲು ಉತ್ಸುಕತೆ ತೋರಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರರಿಗೆ ನ್ಯಾಯ ನೀಡುವ ಕಾರ್ಯವನ್ನು ಬಿಜೆಪಿಯ ಕೇಂದ್ರ ಸರಕಾರ ಮಾಡಿದೆ. ಇದನ್ನು ಗಮನಿಸಿ ದಲಿತ ಸಮುದಾಯವು ಈಗ ಬಿಜೆಪಿಯತ್ತ ಸಹಜವಾಗಿಯೇ ಆಕರ್ಷಿತವಾಗುತ್ತಿದೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಮಹೇಶ್ ಅವರ ಸೇರ್ಪಡೆಯ ಶುಭ ಕ್ಷಣ ಈಗ ಬಂದಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಬರುವುದರ ಮುನ್ಸೂಚನೆ ಇದಾಗಿದೆ. ರಾಜ್ಯದಲ್ಲಿ ದಲಿತ ಸಮೂಹ ಬಿಜೆಪಿ ಪರವಾಗಿದೆ ಎಂಬ ಸಂದೇಶ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಲುಪಲು ನಮ್ಮ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಿದೆ. ಮಹೇಶ್ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹೇಶ್ ಅವರು ಬಿಜೆಪಿ ಸೇರಿರುವುದು ಇನ್ನಷ್ಟು ಶಕ್ತಿ ಬಂದಂತಾಗಿದೆ. ಕಳೆದ ಎರಡು ವರ್ಷಗಳಿಂದ ಮಹೇಶ್ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು, ಅವರ ಆಗಮನದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರನ್ನು ಇನ್ನಷ್ಟು ಸಂಘಟನೆ ಮಾಡಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷ ಸೇರ್ಪಡೆಯಾಗಿ ಮಾತನಾಡಿದ ಮಹೇಶ್, ರಾಷ್ಟ್ರದ 130 ಕೋಟಿ ಜನರ ಅಭಿವೃದ್ಧಿಗಾಗಿ ಬಿಜೆಪಿ ಪ್ರಯತ್ನಿಸುತ್ತಿದೆ. ಆ ವಿಚಾರವನ್ನು ಗಮನಿಸಿ ನಾನು ಬಿಜೆಪಿ ಸೇರುತ್ತಿದ್ದೇನೆ. ಇದಕ್ಕೆ ಮತ್ತೊಂದು ಪ್ರೇರಕ ಶಕ್ತಿ ಡಾ.ಅಂಬೇಡ್ಕರ್ ಅವರು. ಬಿಜೆಪಿ ಈಗ ಪ್ರಬುದ್ಧ ಮನಸ್ಥಿತಿಯೊಂದಿಗೆ ರಾಷ್ಟ್ರವನ್ನು ಸಮಗ್ರ ಅಭಿವೃದ್ಧಿ ಕಡೆ ಒಯ್ಯುತ್ತಿದೆ. ಅದೂ ನನ್ನ ಬಿಜೆಪಿ ಸೇರ್ಪಡೆಗೆ ಕಾರಣ ಎಂದು ಹೇಳಿದರು.
ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಸಿದ್ದರಾಜು, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಇದ್ದರು.