ರಾಜ್ಯದಲ್ಲಿ ತಾಲೂಕು ಪಂಚಾಯತ್‌ಗಳನ್ನೇ ರದ್ದು ಮಾಡುವ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮೂರು ಹಂತದ ಆಡಳಿತ ನಡೆಸುವುದು ಸೂಕ್ತವಲ್ಲವೆಂದು ಈ ಬಗ್ಗೆ ಚರ್ಚೆ ನಡೆದಿದೆ.
ವಿಧಾನಸಭೆ (ಫೆ.05): ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಘೋಷಣೆಯಾಗುವ ಹೊತ್ತಿನಲ್ಲಿಯೇ ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಬೇಕು ಎಂಬ ಪ್ರಸ್ತಾಪ ಮತ್ತೆ ಮುನ್ನೆಲೆಗೆ ಬಂದಿದ್ದು, ಸದನದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಗುರುವಾರ ಶೂನ್ಯ ವೇಳೆ ಬಿಜೆಪಿ ಸದಸ್ಯ ಕುಮಾರ್ ಬಂಗಾರಪ್ಪ ವಿಷಯ ಪ್ರಸ್ತಾಪಿಸಿ, ತಾಲೂಕು ಪಂಚಾಯಿತಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸಿಗುವ ಮಹತ್ವ ತಾಲೂಕು ಪಂಚಾಯಿತಿಗೆ ಸಿಗುತ್ತಿಲ್ಲ. ಹೀಗಾಗಿ ಮೂರು ಹಂತದ ಪಂಚಾಯಿತಿ ವ್ಯವಸ್ಥೆಯನ್ನು ಎರಡು ಹಂತಕ್ಕೆ ಇಳಿಸುವುದು ಸೂಕ್ತ ಎಂದರು. ಇದಕ್ಕೆ ಪಕ್ಷಾತೀತವಾಗಿ ಹಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿವೆ. ಈ ಬಗ್ಗೆ ನಾವೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.
undefined
ಸಿಎಂ ಜೊತೆ ಮಾತನಾಡಿದ್ದೇನೆ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ: ಕುಮಾರ್ ಬಂಗಾರಪ್ಪ ...
ಎಲ್ಲಾ ಶಾಸಕರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿದೆ. ನಂತರ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಇಟ್ಟು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ನಂತರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕೆಲವು ರಾಜ್ಯದಲ್ಲಿ ಎರಡು ಹಂತ ಪಂಚಾಯಿತಿ ವ್ಯವಸ್ಥೆ ಇದೆ. ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ತಾಲೂಕು ಪಂಚಾಯಿತಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎರಡು ಹಂತದ ಪಂಚಾಯಿತಿ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಭಾವನೆ ಬಹುತೇಕರಲ್ಲಿದೆ. ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ತಾಲೂಕು ಪಂಚಾಯಿತಿ ಸದಸ್ಯರು ಸ್ಪರ್ಧಿಸಿದ್ದಾರೆ. ಶಾಸಕರು ಅಭಿಪ್ರಾಯ ತಿಳಿಸಿದ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಯಾವ ರಾಜ್ಯದಲ್ಲಿ 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಮೂರು ಹಂತದ ಪಂಚಾಯಿತಿ ವ್ಯವಸ್ಥೆಯಿಂದ ವಿನಾಯಿತಿ ಇದೆ ಎಂದು ಹೇಳಿದರು.
ಜೆಡಿಎಸ್ ಸದಸ್ಯ ವೆಂಕಟರಾವ್ ನಾಡಗೌಡ ಮಾತನಾಡಿ, ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ತಾಲೂಕು ಪಂಚಾಯಿತಿಯಿಂದ ಹೆಚ್ಚಿನ ಅನುಕೂಲವಾಗುತ್ತಿಲ್ಲ. ಹೀಗಾಗಿ ಎರಡೇ ಹಂತಗಳ ಪಂಚಾಯಿತಿ ವ್ಯವಸ್ಥೆಗೆ ಜಾರಿಗೊಳಿಸುವುದು ಸೂಕ್ತ ಎಂದು ತಿಳಿಸಿದರು.
- ತಾಲೂಕು ಪಂಚಾಯ್ತಿ ಚುನಾವಣೆಗೂ ಮುನ್ನ ಸಂಸ್ಥೆಯನ್ನೇ ಮುಚ್ಚುವ ಮಾತುಕತೆ!
- ಜಿಪಂ, ಗ್ರಾಪಂಗೆ ಇರುವ ಮಹತ್ವ ತಾಪಂಗೆ ಇಲ್ಲ, ಮುಚ್ಚಿಬಿಡಿ: ಕುಮಾರ್ ‘ಬಂ’
- ಪಕ್ಷಾತೀತವಾಗಿ ಹಲವು ಸದಸ್ಯರಿಂದ ಬೆಂಬಲ
- ಕೆಲ ರಾಜ್ಯಗಳಲ್ಲಿ 2 ಪಂಚಾಯ್ತಿ ವ್ಯವಸ್ಥೆಯಿದೆ, ನಾವೂ ಪರಿಶೀಲಿಸುತ್ತೇವೆ: ಈಶ್ವರಪ್ಪ