Prabhu Chauhan: 'ಇದು ರಾಜಕೀಯ ಪ್ರೇರಿತ' ಶಾಸಕ ಚವ್ಹಾಣ್‌ ಜಾತಿ ವಿವಾದ, ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Kannadaprabha News   | Kannada Prabha
Published : May 22, 2026, 06:48 AM IST
MLA Chavan Caste Dispute Supreme Court Delivers Major Judgment

ಸಾರಾಂಶ

ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಅವರ ಜಾತಿ ಮತ್ತು ಮೂಲ ನಿವಾಸವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಈ ದೂರು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ,  ಸ್ಥಳೀಯರು, ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಹೈಕೋರ್ಟ್‌ ತೀರ್ಪನ್ನು ಎತ್ತಿಹಿಡಿದಿದೆ.

ನಿರಾಳ - ಜಾತಿ, ಮೂಲನಿವಾಸಿ ವಿವಾದ ಬಗ್ಗೆ ದೂರು ರಾಜಕೀಯ ಪ್ರೇರಿತ: ಕೋರ್ಟ್‌

 ಔರಾದ್‌ (ಮೇ.22): ಮಾಜಿ ಸಚಿವ, ಔರಾದ್‌ ಶಾಸಕ ಪ್ರಭು ಚವ್ಹಾಣ್‌ ವಿರುದ್ಧ ಮೂಲನಿವಾಸ ಸ್ಥಳ ಹಾಗೂ ಜಾತಿ ಮೂಲ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್‌, ಇವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಚುನಾವಣೆಯಲ್ಲಿ ಅಕ್ರಮವಾಗಿ ಸ್ಪರ್ಧಿಸಿದ್ದಾರೆ ಎಂಬ ವಾದವನ್ನು ತಳ್ಳಿ ಹಾಕಿದೆ.

ಪ್ರಕರಣವೇನು?:

ಶಾಸಕ ಪ್ರಭು ಚವ್ಹಾಣ್‌ ಅವರು ಮಹಾರಾಷ್ಟ್ರ ಮೂಲದವರು. ಮಹಾರಾಷ್ಟ್ರದಲ್ಲಿ ಲಂಬಾಣಿ ಸಮಾಜವು ವಿಮುಕ್ತ ಜಾತಿ (ವಿಜೆ-ಎ) ಮೀಸಲಾತಿ ಹೊಂದಿದೆ. ಆದರೆ, ಇವರು ಬೀದರ್‌ ಜಿಲ್ಲೆಯ ಬೋಂತಿ ತಾಂಡಾ ಮೂಲದವರೆಂದು ರಹವಾಸಿ ಪತ್ರ ಪಡೆದು, ಲಂಬಾಣಿ ಸಮಾಜ ಇಲ್ಲಿ ಹೊಂದಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಸೌಲಭ್ಯದ ಮೇಲೆ 2008ರಿಂದ ಔರಾದ್‌ ಕ್ಷೇತ್ರದ ಶಾಸಕರಾಗುತ್ತಿದ್ದಾರೆ. ಮೀಸಲು ಸೌಲಭ್ಯ ದುರ್ಬಳಕೆ ಮಾಡಿಕೊಂಡ ಇವರ ಶಾಸಕತ್ವ ಅನರ್ಹಗೊಳಿಸಬೇಕೆಂದು ನರಸಿಂಗ ತುಕಾರಾಮ ಎಂಬುವರು ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಪೀಠ, ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ತುಕಾರಾಮ ಅವರು, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಸತೀಶಚಂದ್ರ ಶರ್ಮಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಈ ಮೇಲ್ಮನವಿ ಅರ್ಜಿಯನ್ನು (2026ರ ಮೇ 6ರಂದು) ವಜಾಗೊಳಿಸಿದೆ.

ಚವ್ಹಾಣ್‌ ಅವರ ಜಾತಿ ಮೂಲ ಮತ್ತು ಮೂಲ ನಿವಾಸದ ಬಗ್ಗೆ ಕ್ಯಾತೆ ತೆಗೆದು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ್‌ ಮತ್ತು ಬೀದರ್‌ನ ರವೀಂದ್ರ ಕಲ್ಲಯ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು 2023ರ ಮೇ 1ರಂದು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು.

ನಾನು ಕನ್ನಡಿಗ: ಚವ್ಹಾಣ್‌

ನಾನು ಕನ್ನಡಿಗ, ಕರ್ನಾಟಕದವನು. ಇಲ್ಲೇ ಹುಟ್ಟಿ, ಬೆಳೆದಿದ್ದೇನೆ. ವಿನಾಕಾರಣ ನನ್ನ ಜಾತಿ, ನಿವಾಸದ ಮೂಲ ಕೆದಕಿ ವಿವಾದ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್‌ ಎರಡು ಸಲ ನನ್ನ ಪರವಾಗಿ ತೀರ್ಪು ಕೊಟ್ಟಿದೆ. ಇದೀಗ ಸುಪ್ರೀಂಕೋರ್ಟ್‌ ಸಹ ಮತ್ತೊಮ್ಮೆ ನನ್ನ ವಿರುದ್ಧದ ಅರ್ಜಿ ವಜಾಗೊಳಿಸಿದೆ. ಇದು ಸತ್ಯಮೇವ ಜಯತೆ ಎಂದು ಶಾಸಕ ಚವ್ಹಾಣ್ ಪ್ರತಿಕ್ರಿಯಿಸಿದ್ದಾರೆ.

ಚವ್ಹಾಣ್‌ ಅವರ ಜನ್ಮಸ್ಥಳ, ವಿದ್ಯಾಭ್ಯಾಸ, ಎಸ್‌ಸಿ ಜಾತಿ ಪ್ರಮಾಣಪತ್ರ ಸ್ವೀಕಾರ, ಮತದಾರರ ಪಟ್ಟಿಯಲ್ಲಿನ ಹೆಸರು... ಹೀಗೆ ಎಲ್ಲದರ ಪರಿಶೀಲನೆ ನಡೆಸಿದ ವೇಳೆ ಇವರು ಸ್ಥಳೀಯರು ಹಾಗೂ ಲಂಬಾಣಿ ಎಸ್‌ಸಿ ಸಮಾಜದವರು ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಹೈಕೋರ್ಟ್‌ನ ಕಲಬುರಗಿ ಪೀಠ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ. ಈ ಮೇಲ್ಮನವಿ ರಾಜಕೀಯ ಪ್ರೇರಿತವಾಗಿದ್ದು, ಪ್ರತೀಕಾರದ ಹೊರತಾಗಿ ಬೇರೆ ಉದ್ದೇಶವೇನನ್ನೂ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2nd PUC Exam 2 Result : ಶೇ.40.36 ಮಾತ್ರ ಉತ್ತೀರ್ಣ, ನಿಮ್ಮ ಫಲಿತಾಂಶ ಚೆಕ್ ಮಾಡಿ, ಇಲ್ಲಿದೆ ಸಂಪೂರ್ಣ ಅಪ್ಡೇಟ್!
ನಾಳೆ ಬೆಂಗಳೂರಲ್ಲಿ ಅಂ.ರಾ. ಕ್ರಿಕೆಟ್ ಸ್ಟೇಡಿಯಂಗೆ ಸಿಎಂ ಚಾಲನೆ; ವಿಶ್ವದರ್ಜೆಯ ಕ್ರೀಡಾಂಗಣದ ವಿಶೇಷತೆಗಳೇನು?