ಮನೆ ಹೋಯ್ತು; ಮಗಳ ಮದುವೆ ಹೇಗೆ ಮಾಡ್ಲಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪತ್ನಿ ಕಣ್ಣೀರು

By Kannadaprabha NewsFirst Published Aug 14, 2020, 7:33 AM IST
Highlights

ಈಗ ನಾವೆಲ್ಲಿಗೆ ಹೋಗಬೇಕು ಶಾಸಕರ ಪತ್ನಿ ಕಣ್ಣೀರು| ದೇವರಮನೆಯೇ ಗಲಭೆಕೋರರ ಗುರಿ| ಪುಣ್ಯಕೋಟಿ ವಿಗ್ರಹ ಧ್ವಂಸ|ಮನೆಯಲ್ಲಿದ್ದ ಹಣ, ಚಿನ್ನ ಲೂಟಿ|ಯಾವ ತಪ್ಪು ಮಾಡಿದ್ದೇವೆಂದು ನಮಗೆ ಈ ಶಿಕ್ಷೆ?|

ಬೆಂಗಳೂರು(ಆ.14): ನಾವು ಏನು ಪಾಪ ಮಾಡಿದ್ದೆವು ಎಂದು ನಮಗೆ ಈ ಶಿಕ್ಷೆ?... ನಾವು ಈಗ ಎಲ್ಲಿರಬೇಕು?... ಎಲ್ಲಿಗೆ ಹೋಗಬೇಕು?... ಮಗಳ ಮದುವೆಗೆ ತಯಾರಿ ನಡೆಸಿದ್ದೆವು. ಇದೀಗ ಮನೆಯೇ ಇಲ್ಲದೆ ಮಗಳ ಮದುವೆ ಹೇಗೆ ಮಾಡಬೇಕು?... ನಲವತ್ತು ವರ್ಷಗಳಿಂದ ನೆಲೆಸಿದ್ದ ಕನಸಿನ ಮನೆ ಸುಟ್ಟು ಕರಕಲಾಗಿರುವುದನ್ನು ನೋಡುತ್ತಿದ್ದಂತೆ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಪತ್ನಿ ಗೋಳಾಡಿದ ರೀತಿ ಇದು.

"

ಮನೆಯ ಸ್ಥಿತಿ ನೋಡುತ್ತಿದ್ದಂತೆ ಪತ್ನಿಯ ಜತೆಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಪುತ್ರಿ ಪ್ರಿಯಾಂಕ ಸಹ ಬಿಕ್ಕಿ ಬಿಕ್ಕಿ ಅತ್ತರು. ದಾಂಧಲೆ ಮಾಡಿದವರಿಗೆ ಹಿಡಿ ಶಾಪ ಹಾಕಿದರು. ಪುಂಡರ ಏಕಾಏಕಿ ದಾಳಿಯಿಂದ ಬೆಚ್ಚಿ ಮನೆಯಿಂದ ಹೊರಗೆ ಹೋಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಪತ್ನಿ ಹಾಗೂ ಪುತ್ರಿ ಪ್ರಿಯಾಂಕ, ಸಹೋದರಿ ಅಶ್ವತ್ಥಮ್ಮ ಅವರು ಎರಡು ದಿನಗಳ ಬಳಿಕ ಗುರುವಾರ ಮನೆ ವೀಕ್ಷಿಸಲು ಬಂದಾಗ ಕಂಡು ಬಂದ ದೃಶ್ಯಗಳಿವು. ತಮ್ಮ ಮನೆಯ ಜಾಗದಲ್ಲಿ ಸುಟ್ಟಅವಶೇಷಗಳನ್ನು ಕಂಡಾಗ ಶ್ರೀನಿವಾಸಮೂರ್ತಿ ಪತ್ನಿ ಅವರು ದುಃಖ ತಡೆಯಲಾಗದೆ ಕಣ್ಣೀರಾದರು.

ದೇವರ ಕೋಣೆಯೇ ಗುರಿ:

ಮಂಗಳವಾರ ರಾತ್ರಿ ಪೆಟ್ರೋಲ್‌ ಸುರಿದ ಶ್ರೀನಿವಾಸ್‌ ಅವರ ಮನೆಗೆ ಬೆಂಕಿ ಇಟ್ಟ ಪುಂಡರು ಮನೆಯಲ್ಲಿದ್ದ ಹಣ ಹಾಗೂ ಚಿನ್ನ ದೋಚಿದ್ದಾರೆ. ದೇವರ ಕೋಣೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಪುಂಡರ ಕೋಮು ದ್ವೇಷಕ್ಕೆ ಪುಣ್ಯ ಕೋಟಿ ವಿಗ್ರಹ ಛಿದ್ರವಾಗಿದೆ. ದಾಳಿಯಿಂದಾಗಿ ದೇವರ ಕೋಣೆಯಲ್ಲಿದ್ದ ಪುಣ್ಯ ಕೋಟಿ ವಿಗ್ರಹ, ದೀಪಗಳು, ಪೂಜೆಯ ವಸ್ತುಗಳು ಪುಡಿ, ಪುಡಿಯಾಗಿವೆ. ಗೋವಿನ ವಿಗ್ರಹದ ತಲೆಯನ್ನೇ ಪುಂಡರು ಒಡೆದು ಹಾಕಿದ್ದಾರೆ.

Exclusive;ಹಠಕ್ಕೆ ಬಿದ್ದ ಉದ್ರಿಕ್ತರಿಂದ ಬೆಂಗಳೂರು ಗಲಭೆ; ನವೀನ್ ಪೋಸ್ಟ್ ನೆಪ ಮಾತ್ರ!

ಬೂದಿಯಲ್ಲಿ ದೊರೆತ ಮಾಂಗಲ್ಯ ಸರ:

ಕುಟುಂಬ ಸದಸ್ಯರು ಮನೆಗೆ ಬರುವ ಮೊದಲು ಶ್ರೀನಿವಾಸ್‌ ಸಹೋದರ ಮುನೇಗೌಡ ಮನೆ ಪರಿಶೀಲಿಸಿ ಬಂದರು. ಬಳಿಕ ಶ್ರೀನಿವಾಸ್‌ ಮನೆಯಲ್ಲಿ ಅಪಾರ ಪ್ರಮಾಣದ ಹಣ, ಒಡವೆ ಲೂಟಿಯಾಗಿತ್ತು. ಮನೆಯಲ್ಲಿದ್ದ 5 ಲಕ್ಷ ರೂ. ಹಣ ಹಾಗೂ ಒಡವೆಯನ್ನು ದೋಚಿದ್ದಾರೆ. ತಾಯಿಯ ಮಾಂಗಲ್ಯ ಸರವನ್ನು ತಮ್ಮ ಪುತ್ರಿ ಬೂದಿಯಿಂದ ಹೆಕ್ಕಿ ತೆಗೆದಿದ್ದಾರೆ ಎಂದು ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದರು.

ಇಷ್ಟು ಕೋಪವೇನಿತ್ತು?:ಅಖಂಡ

ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ಇಲ್ಲಿನ ಮುಸ್ಲಿಂ ಹಾಗೂ ಹಿಂದೂಗಳು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೆವು. ನನ್ನ ಮನೆ ಒಡೆದು ಹಾಕುವಷ್ಟು ಕೋಪ ಏನಿತ್ತು? ಎಂದು ಪ್ರಶ್ನಿಸಿದರು. ಘಟನೆ ನಡೆದ ದಿನ ನಾವು ಮನೆಯಲ್ಲಿ ಇರಲಿಲ್ಲ. ಒಂದು ವೇಳೆ ನಾವು ಮನೆಯಲ್ಲಿ ಇದ್ದಿದ್ದರೆ ನಾವು ಏನಾಗುತ್ತಿದ್ದೆವು ಎಂಬುದು ಗೊತ್ತಿಲ್ಲ. ಕಿಡಿಗೇಡಿಗಳು ಪೂರ್ವ ನಿಯೋಜಿತವಾಗಿ ದುಷ್ಕೃತ್ಯ ಎಸಗಿದಂತೆ ಗೊತ್ತಾಗುತ್ತಿದೆ. ನನ್ನ ಸಹೋದರಿ ಪುತ್ರ ಪೋಸ್ಟ್‌ ಮಾಡಿದರೆ ಕಾನೂನು ಹೋರಾಟ ಮಾಡಬಹುದಿತ್ತು. ಏಕಾಏಕಿ ಮನೆ ಧ್ವಂಸ ಮಾಡಿ ಗದ್ದಲ ಎಬ್ಬಿಸುವುದು ಎಷ್ಟುಸರಿ? ಎಂದು ಪ್ರಶ್ನಿಸಿದರು.

ದೃಶ್ಯಾವಳಿ ನೋಡಿದರೆ ಕಿಡಿಗೇಡಿಗಳು ನನ್ನ ಕ್ಷೇತ್ರದ ಜನರಲ್ಲ. ಯಾರೋ ಹೊರಗಿನವರು ಬಂದು ಕೃತ್ಯ ಮಾಡಿರುವುದು ಸ್ಪಷ್ಟವಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ ಸಹೋದರಿ ಅಶ್ವತ್ಥಮ್ಮ, ‘ನಮ್ಮ ಪ್ರದೇಶದಲ್ಲಿನ ಮುಸ್ಲಿಮರು ಗಲಾಟೆ ಮಾಡಿಲ್ಲ. ಹೊರಗಡೆಯಿಂದ ಬಂದವರೇ ಇದಕ್ಕೆಲ್ಲಾ ಕಾರಣ ಎಂದರು. ಘಟನೆ ಸ್ಥಳಕ್ಕೆ ಮಾಜಿ ಸಚಿವ ಶಿವರಾಜ ತಂಡಗಡಿ, ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ ಭೇಟಿ ನೀಡಿದ್ದರು.
 

click me!