ಬೆಂಗಳೂರು ನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಸಚಿವರು ಕಣಕ್ಕಿಳಿಯುವುದಿಲ್ಲ. ಉಳಿದ 25 ಕ್ಷೇತ್ರಗಳ ಪೈಕಿ ಕೆಲ ಕ್ಷೇತ್ರಗಳಲ್ಲಿ ಸಚಿವರು ಕಣಕ್ಕಿಳಿಯುವ ಸೂಚನೆಯಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಒಪ್ಪಿ, ಸ್ಪರ್ಧಿಸಬೇಕಾಗುತ್ತದೆ.
ಮುಖಾಮುಖಿ: ಸಚಿವ ರಾಮಲಿಂಗಾರೆಡ್ಡಿ
ಸಂದರ್ಶನ- ಎಸ್.ಗಿರೀಶ್‌ಬಾಬು/ಗಿರೀಶ್ ಗರಗ
ಯಾವ ಪಕ್ಷದ ಸರ್ಕಾರವಿದ್ದರೂ ಸರಿ, ಬೆಂಗಳೂರಿಗೆ ರಾಮಲಿಂಗಾರೆಡ್ಡಿ ಅವರೇ ನಗರಾಭಿವೃದ್ಧಿ ಸಚಿವ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಇದು ತಮಗಾಗದವರು ಹಬ್ಬಿಸಿರುವ ವದಂತಿ ಎಂದು ಖುದ್ದು ರಾಮಲಿಂಗಾರೆಡ್ಡಿ ಹೇಳಿದರೂ ಈ ಮಾತು ನಗರದ ಮೇಲೆ ರೆಡ್ಡಿ ಅವರಿಗೆ ಇರುವ ಹಿಡಿತಕ್ಕೆ ಸಾಕ್ಷಿ. ಪಕ್ಷ ಭೇದದ ಹೊರತಾಗಿಯೂ ನಗರದ ಜನಪ್ರತಿನಿಧಿಗಳ ವಿಶ್ವಾಸ ಗಳಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಂತಹ ರಾಮಲಿಂಗಾರೆಡ್ಡಿ ಅವರೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನಗರಾಭಿವೃದ್ಧಿ ಸಚಿವರಾಗುತ್ತಾರೆ ಎಂದು ನಂಬಲಾಗಿತ್ತು. ಆದರೆ, ರೆಡ್ಡಿ ಅವರನ್ನು ಓವರ್‌ಟೇಕ್ ಮಾಡಿ ಡಿ.ಕೆ. ಶಿವಕುಮಾರ್ ಈ ಖಾತೆ ಹೊಣೆ ಹೊತ್ತಿದ್ದಾರೆ. ಇಷ್ಟಾದರೂ ತಮಗೆ ದಕ್ಕಿದ ಸಾರಿಗೆ ಹಾಗೂ ಮುಜರಾಯಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಗ್ಯಾರಂಟಿ ಯೋಜನೆಗಳ ಪೈಕಿ ಮುಖ್ಯವಾದ ‘ಶಕ್ತಿ’ ಯೋಜನೆಯ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ರಾಮಲಿಂಗಾರೆಡ್ಡಿ. ಶಕ್ತಿ ಯೋಜನೆ ನಂತರ ಸಾರಿಗೆ ಇಲಾಖೆ ಮುಂದಿರುವ ಸವಾಲುಗಳೇನು? ಶಕ್ತಿ ಯೋಜನೆಯು ಖಾಸಗಿ ಬಸ್‌ಗಳಿಗೂ ವಿಸ್ತರಣೆಯಾಗುತ್ತಾ? ಬಿಬಿಎಂಪಿ ಚುನಾವಣೆಗೆ ಪಕ್ಷದ ಸಿದ್ಧತೆ ಹೇಗಿದೆ? ನಿಜಕ್ಕೂ ಬಿಬಿಎಂಪಿ ಚುನಾವಣೆ ನಡೆಯುವುದೇ? ಲೋಕಸಭೆ ಚುನಾವಣೆಗೆ ಸಚಿವರು ಸ್ಪರ್ಧಿಗಳಾಗಲಿದ್ದಾರಾ? ಎಷ್ಟುಸ್ಥಾನ ಗೆಲ್ಲುವ ಗುರಿಯಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ತಯಾರಿ ಹೇಗಿದೆ, ಎಷ್ಟುಕ್ಷೇತ್ರ ಗೆಲ್ಲಬಹುದು?
28 ಲೋಕಸಭಾ ಕ್ಷೇತ್ರಗಳ ಪೈಕಿ 20ರಲ್ಲಿ ಗೆಲ್ಲುವುದು ನಮ್ಮ ಗುರಿ. ಅದಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸುತ್ತೇವೆ.
ಹಾಲಿ ಸಚಿವರೇ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರಂತೆ?
ಬೆಂಗಳೂರು ನಗರ ಜಿಲ್ಲೆಯ ಕ್ಷೇತ್ರಗಳಲ್ಲಿ ಸಚಿವರು ಕಣಕ್ಕಿಳಿಯುವುದಿಲ್ಲ. ಉಳಿದ 25 ಕ್ಷೇತ್ರಗಳ ಪೈಕಿ ಕೆಲ ಕ್ಷೇತ್ರಗಳಲ್ಲಿ ಸಚಿವರು ಕಣಕ್ಕಿಳಿಯುವ ಸೂಚನೆಯಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಒಪ್ಪಿ, ಸ್ಪರ್ಧಿಸಬೇಕಾಗುತ್ತದೆ.
ಮುಖಾಮುಖಿ ಸಂದರ್ಶನ: ಎಚ್‌ಡಿಕೆ ಕಾಲದ ವರ್ಗಾವಣೆ ಮಾಹಿತಿ ಹೊರಬರಲಿ - ಚಲುವರಾಯಸ್ವಾಮಿ
ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಷ್ಟುಗೆಲ್ಲಬಹುದು?
ಕಳೆದ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದರು. ಈಗ ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಬಗ್ಗೆ ಜನರಿಗೆ ಒಲವು ಬಂದಿದೆ. ಬೆಂಗಳೂರು ಕೇಂದ್ರದಲ್ಲಿ ನಮಗೆ ಉತ್ತಮ ಅವಕಾಶವಿದೆ. ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಬಿಜೆಪಿ ಜತೆ ಪೈಪೋಟಿಯಿದೆ.
ಯಾವ ಪಕ್ಷದ ಸರ್ಕಾರವಿದ್ದರೂ ರಾಮಲಿಂಗಾರೆಡ್ಡಿ ಅವರೇ ಬೆಂಗಳೂರು ಉಸ್ತುವಾರಿ ಸಚಿವ! ಈ ಮಾತು ಒಪ್ಪುವಿರಾ?
ಇದು ನಮಗೆ ಆಗದವರು ಹಬ್ಬಿಸಿರುವ ವದಂತಿ. ಬಿಜೆಪಿಯಲ್ಲಿ ಅಶೋಕ್ ಕಂಡರೆ ಆಗದವರು ಇದ್ದಾರೆ. ಅದೇ ರೀತಿನ ನಮ್ಮಲ್ಲೂ ನನ್ನ ಕಂಡರೆ ಆಗದವರು ಇಬ್ಬರ ಬಗ್ಗೆಯೂ ಇಂತಹ ವದಂತಿ ಹಬ್ಬಿಸಿದ್ದಾರೆ. ಅಂತಹ ಅಂಡರ್‌ಸ್ಟಾಡಿಂಗ್ ಇದ್ದಿದ್ದರೆ ನನ್ನ ವಿರುದ್ಧ ಸ್ಟ್ರಾಂಗ್ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಲಾಗುತ್ತಿತ್ತೆ? ಈ ಬಾರಿ ಶ್ರೀಧರ್ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದರು. ಅವರು ವೀಕ್ ಅಲ್ವಲ್ಲಾ. ಹಿಂದೆ ಸುಬ್ಬಾರೆಡ್ಡಿ, ಚಂದ್ರಶೇಖರ್, ವಿಜಯಕುಮಾರ್ ಅಂತಹವರೆಲ್ಲ ಸ್ಪರ್ಧಿಸಿದ್ದರು. ಅವರನ್ನೆಲ್ಲ ದುರ್ಬಲ ಅಭ್ಯರ್ಥಿ ಎಂದು ಕರೆಯಲಾಗುತ್ತಾ? ಸುಮ್ಮನೆ ಹೊಟ್ಟೆಕಿಚ್ಚಿಗೆ ನನ್ನ ಬಗ್ಗೆ ಹೇಳುತ್ತಾರೆ ಅಷ್ಟೇ.
ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ನೀವೇ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗುತ್ತೀರಾ ಎಂಬ ಭಾವನೆಯಿತ್ತು?
ಅದು ನಿಜ. ಚುನಾವಣೆ ಸಂದರ್ಭದಲ್ಲೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಎಂದು ನನ್ನನ್ನು ಸಂಬೋಧಿಸುತ್ತಿದ್ದರು. ಸರ್ಕಾರ ಬಂದಾಗ ಆರಂಭದಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರು ನೋಡ್ಕೋಳಿ ಎಂದು ಮೌಖಿಕವಾಗಿ ಹೇಳಿದ್ದರು. ಹೀಗಾಗಿ ಆ ಬಯಕೆ ಇತ್ತು. ಆದರೆ, ಅನಂತರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ನಾನು ಮೊದಲು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗುತ್ತೇನೆ. ಆಮೇಲೆ ನೀವು ಆಗುವಿರಂತೆ ಎಂದು ಹೇಳಿದ್ರು.
ಅಂದ್ರೆ, ಎರಡೂವರೆ ವರ್ಷದ ನಂತರ ನೀವು ಆಗಿ ಅಂತಾನಾ? ಅಧಿಕಾರ ಹಂಚಿಕೆ ಆಗುತ್ತಾ?
ಅದೆಲ್ಲ ನನಗೆ ಗೊತ್ತಿಲ್ಲ. ದೆಹಲಿ ಮಟ್ಟದಲ್ಲಿ ಏನು ಚರ್ಚೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಈಗ ನನ್ನ ಹಿರಿತನಕ್ಕೆ ಒಳ್ಳೆ ಖಾತೆ ಕೊಡಬೇಕಿತ್ತು.
ಡಿ.ಕೆ. ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾದ ನಂತರ ಅಧಿಕಾರಿಗಳಿಗೆ ಸ್ವಾತಂತ್ರ್ಯವೇ ಇಲ್ಲ ಅಂತ ಆರೋಪವಿದೆ?
ಅದರ ಬಗ್ಗೆ ನನಗೆ ಗೊತ್ತಿಲ್ಲ. ನೀವು ಅದನ್ನು ಉಪ ಮುಖ್ಯಮಂತ್ರಿಗಳ ಬಳಿಯೇ ಕೇಳಬೇಕು. ಉಸ್ತುವಾರಿ ಸಚಿವರಾಗಿರುವುದರಿಂದ ಶಿವಕುಮಾರ್ ಅವರಿಗೆ ಬಿಬಿಎಂಪಿ ಬಗ್ಗೆ ಕಾಳಜಿ ಇರುವುದು ಸಹಜ.
ಬಿಬಿಎಂಪಿ ಗುತ್ತಿಗೆದಾರರ ಬಿಲ್ ಪಾವತಿಗೆ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪವಿದೆ?
ಗುತ್ತಿಗೆದಾರರು ಮಾಡಿರುವ ಕೆಲಸದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ತನಿಖೆ ನಡೆಸುವುದರಲ್ಲಿ ತಪ್ಪೇನಿದೆ? ಗುತ್ತಿಗೆದಾರರ ಬಾಕಿ ಬಿಲ್ ಬೇಗ ಪಾವತಿಯಾಗಬೇಕು ಎಂಬುದು ನಿಜ. ಆದರೆ, ತನಿಖೆಯಾಗಬೇಕಲ್ಲ? ಇನ್ನು ಕಮಿಷನ್ ಕೇಳುತ್ತಿದ್ದಾರೆ ಎಂಬುದೆಲ್ಲ ಸುಳ್ಳು.
ಪದೇಪದೇ ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡುತ್ತಿದ್ದೀರಿ. ಲೋಕಸಭೆ ಚುನಾವಣೆ ಎದುರಿಗಿಟ್ಟುಕೊಂಡು ಬೇರೆ ಚುನಾವಣೆ ಸಾಧ್ಯವೆ?
ಈ ವರ್ಷದ ಡಿಸೆಂಬರ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವುದು ಪಕ್ಕಾ. ಅದರ ಜತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳನ್ನೂ ನಡೆಸುತ್ತೇವೆ. ಕರಾವಳಿ ಭಾಗ ಹೊರತುಪಡಿಸಿದರೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರವಾದ ವಾತಾವರಣವಿದೆ. ಹೀಗಾಗಿ ಬಿಬಿಎಂಪಿ, ಜಿಪಂ-ತಾಪಂ ಚುನಾವಣೆ ನಡೆಸುತ್ತೇವೆ. ಅದರಿಂದ ರಾಜ್ಯದ ಎಲ್ಲ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ.
ಬಿಬಿಎಂಪಿ ಚುನಾವಣೆಗೆ ಸರ್ಕಾರದಿಂದ ಮತ್ತು ಪಕ್ಷದಿಂದ ಸಿದ್ಧತೆ ಏನೇನಾಗಿದೆ?
ವಾರ್ಡ್ ಮರುವಿಂಗಡಣೆ ಮಾಡುತ್ತಿದ್ದೇವೆ. ನಂತರ ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟಿಸುತ್ತೇವೆ. ಚುನಾವಣೆಗೆ ಪಕ್ಷದಿಂದ ಈವರೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.
ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಕಡಿಮೆ ಮಾಡಿರುವ ಹಿಂದಿನ ಉದ್ದೇಶವೇನು?
ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಬೇಕೆಂದೇ ವಾರ್ಡ್‌ಗಳನ್ನು ಹೆಚ್ಚಿಸಲಾಗಿದೆ. ನಿಗದಿತ ಜನಸಂಖ್ಯೆ ಇಲ್ಲದಿದ್ದರೂ ವಾರ್ಡ್‌ಗಳನ್ನು ರಚಿಸಲಾಗಿತ್ತು. ಪ್ರಮುಖವಾಗಿ ಬಿಬಿಎಂಪಿ ಹೊರಭಾಗದ ಕ್ಷೇತ್ರಗಳಲ್ಲಿ ಸಂಖ್ಯೆ ಹೆಚ್ಚಿತ್ತು. ಅದನ್ನು ಕಡಿತಗೊಳಿಸಿ 225 ವಾರ್ಡ್‌ಗಳನ್ನು ರಚಿಸಲಾಗುವುದು.
ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಕೊರತೆಯಿಂದ ಈಗಲೇ ‘ಆಪರೇಷನ್ ಹಸ್ತ’ ಮಾಡುತ್ತಿದ್ದೀರಾ?
ಕಾಂಗ್ರೆಸ್ ಎಲ್ಲೆಲ್ಲಿ ದುರ್ಬಲವಾಗಿದೆಯೋ ಅಲ್ಲಿ ಬೇರೆ ಪಕ್ಷದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಹಳೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಅದೇ ಹೊರಭಾಗದಲ್ಲಿ ಬಿಜೆಪಿ ಉತ್ತಮವಾಗಿದೆ. 2013ರಲ್ಲಿ ನಮ್ಮ ಪಕ್ಷದವರೇ ಅಲ್ಲೆಲ್ಲ ಶಾಸಕರಾಗಿದ್ದರು. ಅವರೆಲ್ಲ ಪಕ್ಷಾಂತರ ಮಾಡಿದ್ದರಿಂದ ಸ್ವಲ್ಪ ದುರ್ಬಲವಾಗಿದೆ ಅಷ್ಟೇ.
ಶಕ್ತಿ ಯೋಜನೆಗೆ ಜನರ ಪ್ರತಿಕ್ರಿಯೆ ಹೇಗಿದೆ?
ಶಕ್ತಿ ಯೋಜನೆ ಆರಂಭಕ್ಕೂ ಮುನ್ನ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ 83 ಲಕ್ಷ ಪ್ರಯಾಣಿಕರಿದ್ದರು. ಈಗ ಅದು 1.10 ಕೋಟಿಗೆ ಏರಿಕೆಯಾಗಿದೆ. ಮಹಿಳಾ ಪ್ರಯಾಣಿಕರ ಜತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಈವರೆಗೆ 34 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಪ್ರಯೋಜನ ಪಡೆದಿದ್ದಾರೆ. ಯೋಜನೆಯಿಂದ ರಾಜ್ಯದ ಜನರು ಸಂತಸಗೊಂಡಿದ್ದಾರೆ.
ನಿಗಮಗಳಲ್ಲಿ ಬಸ್‌ಗಳ ಕೊರತೆಯಿದೆ, ಅವುಗಳ ಹೆಚ್ಚಳಕ್ಕೇನು ಕ್ರಮ?
2018ರಲ್ಲಿ ನಾನು ಸಾರಿಗೆ ಸಚಿವನಾಗಿ ಹೊರಬಂದಾಗ ಎಷ್ಟುಬಸ್‌ಗಳಿದ್ದವೋ ಈಗಲೂ ಅಷ್ಟೇ ಬಸ್‌ಗಳಿವೆ. ಜನಸಂಖ್ಯೆಗೆ ಅನುಗುಣವಾಗಿ ಬಸ್‌ಗಳನ್ನು ಖರೀದಿಸಿಲ್ಲ. ಈಗ ನಾವು 5 ಸಾವಿರ ಬಸ್‌ಗಳ ಖರೀದಿಗೆ ನಿರ್ಧರಿಸಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಅದಕ್ಕಾಗಿ ರಾಜ್ಯ ಸರ್ಕಾರ 500 ಕೋಟಿ ರು. ಅನುದಾನ ನೀಡುತ್ತಿದೆ. ಜತೆಗೆ ಹಳೇ ಬಸ್‌ಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ.
ಶಕ್ತಿ ಯೋಜನೆ ಅನುದಾನ ನೀಡಲು ಸರ್ಕಾರ ವಿಳಂಬ ಮಾಡುತ್ತಿರುವುದೇಕೆ?
ಅನುದಾನ ನೀಡಲು ಆರ್ಥಿಕ ಇಲಾಖೆ ಕೆಲವೊಂದು ವಿವರಣೆಯನ್ನು ಕೇಳಿತ್ತು. ಹೀಗಾಗಿ ವಿಳಂಬವಾಗಿತ್ತು. ಯೋಜನೆ ಹೊಸದಾಗಿರುವ ಕಾರಣ ಕೊಂಚ ಸಮಸ್ಯೆಯಾಗುತ್ತಿದೆ. ವ್ಯವಸ್ಥೆ ಸರಿ ಹೊಂದುವವರೆಗೆ ಸಮಸ್ಯೆ ಇರುತ್ತದೆ. ಆನಂತರ ಮಾಸಿಕ ತನ್ನಿಂದ ತಾನೇ ಹಣ ಪಾವತಿಯಾಗಲಿದೆ.
ನಿಗಮಗಳ ಸಿಬ್ಬಂದಿಗೆ ವೇತನ ಪಾವತಿ ವಿಳಂಬವಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆಯಲ್ಲ?
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಆರೋಪ ಮಾಡಿದ್ದರು. ಆದರೆ, ನಿಗದಿತ ತಾರೀಖಿನಂದೇ ವೇತನ ಪಾವತಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಸರಿಯಾಗಿ ವೇತನ ಪಾವತಿಸಿಲ್ಲ. ತಮಗೆ ಇಷ್ಟಬಂದಾಗ ವೇತನ ಪಾವತಿಸಲಾಗುತ್ತಿತ್ತು. ಅದನ್ನೆಲ್ಲ ದಾಖಲೆ ಸಹಿತ ತಿಳಿಸಿದ್ದೇನೆ.
ನಷ್ಟದಲ್ಲಿರುವ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವೇ?
ಸಾರಿಗೆ ನಿಗಮಗಳಿಂದ ಸೇವೆ ನೀಡಲಾಗುತ್ತಿರುವ ಮಾರ್ಗಗಳ ಪೈಕಿ ಶೇ.40ರಷ್ಟುಮಾರ್ಗಗಳಿಂದ ನಷ್ಟವಾಗುತ್ತಿದೆ. ಉಳಿದಂತೆ ಶೇ.35ರಷ್ಟುಮಾರ್ಗದಿಂದ ಬರುವ ಆದಾಯ ಖರ್ಚಿಗೆ ಸರಿ ಹೊಂದುತ್ತಿದೆ. ಶೇ.25ರಷ್ಟುಮಾರ್ಗಗಳು ಮಾತ್ರ ಲಾಭ ತಂದುಕೊಡುತ್ತಿವೆ. ಅವು ದೂರದ ಮಾರ್ಗಗಳಾಗಿವೆ. ಅವುಗಳನ್ನು ಹೆಚ್ಚಿಸಬೇಕಿದೆ. ಅದಕ್ಕಾಗಿಯೇ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ.
ಶಕ್ತಿ ಯೋಜನೆ ತಮಗೂ ಅನ್ವಯವಾಗುವಂತೆ ಮಾಡಿ ಎಂದು ಖಾಸಗಿ ಬಸ್ ಮಾಲೀಕರ ಆಗ್ರಹವಿದೆಯಲ್ಲ?
ಶಕ್ತಿ ಯೋಜನೆ ಜಾರಿ ನಂತರ ಖಾಸಗಿ ಬಸ್‌ಗಳ ಪ್ರಯಾಣಿಕರು ಸರ್ಕಾರಿ ಬಸ್‌ಗಳಿಗೆ ಬರುತ್ತಿದ್ದಾರೆ. ಹೀಗಾಗಿ ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ಕೋರಲಾಗುತ್ತಿದೆ. ಜತೆಗೆ, ಶಕ್ತಿ ಯೋಜನೆ ನಂತರ ತಮಗೆ ಸಮಸ್ಯೆಯಾಗಿದೆ ಎಂಬ ಬಗ್ಗೆ ಆಟೋ ಮಾಲೀಕರ ಅಹವಾಲು ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ.
ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಕೀಳಾಗಿ ಕಾಣಲಾಗುತ್ತಿದೆಯಲ್ಲ?
ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಕ್ಕೆ ಸರ್ಕಾರ ಹಣ ನೀಡುತ್ತದೆ. ಹೀಗಾಗಿ ಅವರು ಉಚಿತವಾಗಿ ಪ್ರಯಾಣಿಸುತ್ತಿಲ್ಲ. ಮಹಿಳಾ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಮೋಟಾರು ವಾಹನ ತೆರಿಗೆ ಹೆಚ್ಚಿಸಿ ಸಾರಿಗೆ ಉದ್ಯಮಕ್ಕೆ ಹೊರೆ ಹಾಕಲಿಲ್ಲವೇ?
ಮೋಟಾರು ವಾಹನ ತೆರಿಗೆಯಷ್ಟೇ ಅಲ್ಲ ಅಬಕಾರಿ ಸುಂಕ, ಕಂದಾಯ ವಸೂಲಿ ಗುರಿಯನ್ನು ಹೆಚ್ಚಿಸಲಾಗಿದೆ. ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ ಸಂಭಾಳಿಸುವ ಸಲುವಾಗಿ ಈ ಕ್ರಮ ಕೈಗೊಂಡಿದ್ದಾರಷ್ಟೇ. ಮೋಟಾರು ವಾಹನ ತೆರಿಗೆ ಹೆಚ್ಚಳದಿಂದ ಯಾವುದೇ ಹೊರೆಯಾಗುವುದಿಲ್ಲ.
ಮುಜರಾಯಿ ದೇವಸ್ಥಾನಗಳ ಅರ್ಚಕರ ತಸ್ತೀಕ್ ಹಣ ನೀಡಲು ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪವಿದೆ?
ಅರ್ಚಕರಿಗೆ ತಸ್ತೀಕ್ ಹಣವನ್ನು ಆರ್ಥಿಕ ಇಲಾಖೆಯು ಕಂದಾಯ ಇಲಾಖೆ ಮೂಲಕ ಪಾವತಿಸಲಾಗುತ್ತದೆ. ತಸ್ತೀಕ್ ಹಣ ಬಿಡುಗಡೆಯಲ್ಲಿನ ಸಮಸ್ಯೆ ನಿವಾರಿಸಲು ಅರ್ಚಕರ ಖಾತೆಗೆ ನೇರವಾಗಿ ಹಣ ಪಾವತಿಸುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
ಶಕ್ತಿ ಯೋಜನೆಯಿಂದಾಗಿ ದೇವಸ್ಥಾನಗಳ ಆದಾಯ ಹೆಚ್ಚುತ್ತಿದೆ. ಅದರ ಬಳಕೆ ಯಾವ ರೀತಿ ಮಾಡಲಾಗುತ್ತದೆ?
ದೇವಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಎಲ್ಲ ದೇವಸ್ಥಾನಗಳಿಗೂ ಪ್ರತ್ಯೇಕ ಮಾಸ್ಟರ್‌ಪ್ಲ್ಯಾನ್ ಮಾಡಲಾಗುವುದು. ಎಲ್ಲ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಸಮಯ ನಿಗದಿ, ಕೊಠಡಿಗಳನ್ನು ಕಾಯ್ದಿರಿಸುವ ಸಲುವಾಗಿ ಆನ್‌ಲೈನ್ ಸೇವೆ ಆರಂಭಿಸಲಾಗುತ್ತಿದೆ.
ನಮಗೆ ಸಿದ್ಧಾಂತಕ್ಕಿಂತ ರಾಜ್ಯದ ಹಿತ ಮುಖ್ಯ; ಮೈತ್ರಿ ಆಯ್ಕೆ ಮುಕ್ತವಾಗಿರಿಸಿದ್ದೇವೆ: ಎಚ್‌ಡಿಕೆ
ಹೊಸದಾಗಿ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಯೋಜನೆ ಇದೆಯೇ?
ಆ ರೀತಿಯ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ. ಆಡಳಿತ ಮಂಡಳಿಗಳು ದೇವಸ್ಥಾನವನ್ನು ನಡೆಸಿಕೊಂಡು ಹೋಗುತ್ತಿವೆ. ಈ ವಿಚಾರದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ.