ರಾಜ್ಯದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳ ಬೆಲೆಯೂ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದರಿಂದ ಕೊರೋನಾ ಬಗ್ಗೆ ವದಂತಿ ಹಬ್ಬಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು [ಮಾ.06]: ಕೊರೋನಾ ಬಗ್ಗೆ ವದಂತಿ ಹಬ್ಬಿಸುವವರ ಹಾಗೂ ವೈರಸ್ ಬಗ್ಗೆ ಜನರಲ್ಲಿರುವ ಆತಂಕವನ್ನು ಲಾಭವಾಗಿ ಮಾಡಿಕೊಳ್ಳಲು ಮಾಸ್ಕ್ ಬೆಲೆ ಏರಿಕೆ ಮಾಡುವ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸೋಂಕಿಗೆ ಸಂಬಂಧಿಸಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೋನಾ ವೈರಸ್ ಕುರಿತು ಜನರ ಭೀತಿಯನ್ನು ಲಾಭವಾಗಿಸಿಕೊಳ್ಳಲು ಕೆಲವರು ಮಾಸ್ಕ್ ಮತ್ತು ಅಗತ್ಯ ಔಷಧಗಳ ಕೊರತೆ ಸೃಷ್ಟಿಸಿ, ಹಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ನೇರವಾಗಿ 104 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಎಂದರು.
ಗಾಜಿಯಾಬಾದ್ ವ್ಯಕ್ತಿಗೆ ಕೊರೋನಾ: 30ಕ್ಕೆ ಏರಿದ ಸೋಂಕು ಪೀಡಿತರ ಸಂಖ್ಯೆ!...
ರಾಜ್ಯದಲ್ಲಿ ಕೊರೋನಾ ಶಂಕೆ ಹಿನ್ನೆಲೆಯಲ್ಲಿ 321 ಮಂದಿಗೆ ಪರೀಕ್ಷೆ ನಡೆಸಿದ್ದು, ಈವರೆಗೆ ಯಾರಿಗೂ ಸೋಂಕು ದೃಢಪಟ್ಟಿಲ್ಲ. ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗಿದ್ದ ಐದು ಮಂದಿಯ ಮಾದರಿ ಪರೀಕ್ಷೆಯಲ್ಲೂ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಬೆಂಗಳೂರು ಸೇರಿ ರಾಜ್ಯದಲ್ಲಿರುವ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ:
ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಶಂಕಿತರು, ಸೋಂಕಿತರು ಹಾಗೂ ಅವರ ಒಡನಾಟ ಹೊಂದಿರುವವರು ಮಾತ್ರ ಎನ್95 ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಉಳಿದಂತೆ ಸಾಮಾನ್ಯರು ಮೂರು ಪದರಗಳ ಸರ್ಜಿಕಲ್ ಮಾಸ್ಕ್ ಬಳಸಿದರೆ ಸಾಕು. ಇದರ ಜತೆಗೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅನಗತ್ಯವಾಗಿ ಭಯಭೀತರಾಗುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
104ಗೆ ದೂರು ನೀಡಿ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಸದ್ಯ ಎಲ್ಲೂ ಮಾಸ್ಕ್ ಕೊರತೆ ಇಲ್ಲ. 4 ಲಕ್ಷ ಸರ್ಜಿಕಲ್ ಮಾಸ್ಕ್ ಹಾಗೂ 40 ಸಾವಿರ ಎನ್-95 ಮಾಸ್ಕ್‌ಗಳು ಲಭ್ಯವಿದೆ. ಜನೌಷಧ ಕೇಂದ್ರಗಳಲ್ಲಿ ಮಾಸ್ಕ್‌ಗಳನ್ನು ಒದಗಿಸುವ ವಿಚಾರವಾಗಿ ಕೇಂದ್ರ ಸರ್ಕಾರದ ಜತೆ ಮಾತನಾಡುತ್ತೇವೆ. ಆದರೆ ಪರಿಸ್ಥಿತಿ ಲಾಭ ಪಡೆದು ಮಾಸ್ಕ್‌ಗಳಿಗೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ತಿಳಿದು ಬಂದಿದೆ. ಅಂಥವರ ಬಗ್ಗೆ ಮಾಹಿತಿ ದೊರೆತಲ್ಲಿ ಆರೋಗ್ಯ ಇಲಾಖೆ ಸಹಾಯವಾಣಿ 104ಕ್ಕೆ ಕರೆ ಮಾಡಿ ದೂರು ನೀಡಿ. ಅವರ ವಿರುದ್ಧ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.