ರಮೇಶ್ ಕುಮಾರ್‌ಗೆ - ಸುಧಾಕರ್‌ ಚಾಟಿ : ಅನಾಗರಿಕರಾಗಿ ಚಪ್ಪಲಿ ಬೀಸಿದ್ದರು

By Kannadaprabha NewsFirst Published Mar 23, 2021, 10:26 AM IST
Highlights

ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ವಿರುದ್ಧ ಸಚಿವ ಸುಧಾಕರ್ ಚಾಟಿ ಬೀಸಿದ್ದಾರೆ. ಅನಾಗರಿಕರಂತೆ ವರ್ತಿಸಿದ್ದರೆಂದು ವಾಗ್ದಾಳಿ ನಡೆಸಿದರು. 

 ವಿಧಾನಸಭೆ (ಮಾ.23):  ನೈತಿಕತೆ, ಮೌಲ್ಯಗಳ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಿದ್ದರು ಎಂದು ಸುದ್ದಿವಾಹಿನಿ ಕಚೇರಿಗೆ ಹೋಗಿ ಚಪ್ಪಲಿ ಬೀಸಿದ್ದರು. ಆ ರೀತಿ ಅನಾಗರಿಕವಾಗಿ ವರ್ತಿಸಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ನಮ್ಮ ವಿರುದ್ಧ ದೃಢೀಕರಿಸದ ಸುಳ್ಳು ಮಾನಹಾನಿ ಸುದ್ದಿ ಪ್ರಕಟಿಸಬಾರದು ಎಂದು ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಮ್ಮ ವಿರುದ್ಧ ಬೇರೆಯವರ ಮೇಲೆ ಬಂದಂತೆ ಅತ್ಯಾಚಾರ, ಕೊಲೆ, ಭ್ರಷ್ಟಾಚಾರ ಯಾವುದೇ ಆರೋಪ ಬಂದಿಲ್ಲ. ಆದರೆ ಷಡ್ಯಂತ್ರ ನಡೆಯಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದರು.

ಹಿಂದೆ ನಾನು ಕಾಂಗ್ರೆಸ್‌ನಲ್ಲಿದ್ದಾಗ ಆ ಪಕ್ಷದ ಹಿರಿಯರೊಬ್ಬರು ಸುದ್ದಿವಾಹಿನಿ ಕಚೇರಿಗೆ ನುಗ್ಗಿ ಪತ್ರಕರ್ತರ ಮೇಲೆ ಚಪ್ಪಲಿ ಬೀಸಿದ್ದರು. ನಾಗರಿಕ ಸಮಾಜದಲ್ಲಿ ಆ ರೀತಿ ಅನಾಗರಿಕವಾಗಿ ನಡೆದುಕೊಳ್ಳಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಹೇಳಿದರು.

ಸೆಮಿ ಲಾಕ್ಡೌನ್‌ ಇಲ್ಲ: ಜನ ಎಚ್ಚೆತ್ತುಕೊಳ್ಳಲು 1 ವಾರ ಕಾಲಾವಕಾಶ!

ಬಳಿಕ ಸದನಕ್ಕೆ ಪ್ರವೇಶಿಸಿದ ರಮೇಶ್‌ಕುಮಾರ್‌, ಚಪ್ಪಲಿ ಬಿಚ್ಚಿಟ್ಟಿದ್ದ ಸದಸ್ಯ ನಾನೇ. 2014ರ ಆಗಸ್ಟ್‌ 12 ರಂದು ಖಾಸಗಿ ಸುದ್ದಿವಾಹಿನಿಯಲ್ಲಿ ‘ಭೂಮಿ ಕದ್ದ ರಮೇಶ್‌ಕುಮಾರ್‌’ ಎಂಬ ಹೆಡ್‌ಲೈನ್‌ ಬಂದಿತ್ತು. ಈ ವೇಳೆ ಸುದ್ದಿವಾಹಿನಿಯವರನ್ನು ವಿಚಾರಿಸಿ ಕಳ್ಳ ಎಂಬುದಕ್ಕೆ ಆಧಾರ ಕೇಳಿದಾಗ ಸುದ್ದಿವಾಹಿನಿಗೆ ಬರಲು ಆಮಂತ್ರಿಸಿದರು. ಆಗ ಅಂದಿನ ಪೊಲೀಸ್‌ ಆಯುಕ್ತರಿಗೆ ಮಾಹಿತಿ ನೀಡಿಯೇ ಸುದ್ದಿವಾಹಿನಿ ಕಚೇರಿಗೆ ಹೋಗಿದ್ದೆ. ರಿಸೆಪ್ಷನ್‌ ಬಳಿ 45 ನಿಮಿಷ ಕಾದರೂ ಯಾರೂ ಬರಲಿಲ್ಲ. ಹೀಗಾಗಿ ಇಡೀ ರಾಜ್ಯ ನೋಡುತ್ತಿದೆ. ನನ್ನ ತಪ್ಪಿದ್ದರೆ ಇದರಲ್ಲಿ ಹೊಡೆಯಿರಿ ಎಂದು ಹೇಳಿ ನನ್ನ ಶೂಗಳನ್ನು ಅಲ್ಲಿ ಬಿಟ್ಟಿದ್ದೆ. ಕೆಲವು ವಸ್ತುಗಳು ಇರುವುದೇ ಬಳಸಲು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಕೆ. ಸುಧಾಕರ್‌, ನಾನು ನಿಮ್ಮ ವಿರುದ್ಧ ಆರೋಪ ಮಾಡಿಲ್ಲ. ನಿಮ್ಮ ಬಗ್ಗೆ ಪರಾಮರ್ಶಿಸದೆ ಸುದ್ದಿ ಪ್ರಕಟಿಸಿದ ಪರಿಣಾಮವನ್ನು ಹೇಳಿದೆ ಅಷ್ಟೇ. ಅದೇ ರೀತಿ ನಮ್ಮ ವಿರುದ್ಧವೂ ಪೂರ್ವಾಪರ ಪರಿಶೀಲಿಸದೆ ಸುದ್ದಿ ಪ್ರಕಟಿಸಬಾರದು ಎಂದು ತಡೆಯಾಜ್ಞೆ ತಂದಿದ್ದೇವೆ ಎಂದು ಸಮರ್ಥಿಸಿಕೊಂಡರು.

click me!