'ಎಲ್ಲರಿಗೂ ಕೂಲಿ ಸಿಗೋಲ್ಲ..' ಡಿಕೆಶಿ ಪಕ್ಷ ನಿಷ್ಠೆ ಪೋಸ್ಟ್‌ಗೆ ಸತೀಶ್ ಜಾರಕಿಹೊಳಿ ಹೇಳಿದ್ದೇನು?

Published : Nov 27, 2025, 04:38 PM IST
Satish jarkiholi on karnataka power sharing row

ಸಾರಾಂಶ

ಡಿಕೆ ಶಿವಕುಮಾರ ಹೆಳಿಕೆ ಕುರಿತು ಸಚಿವ ಸತೀಶ್ ಜಾರಕಿಹೊಳಿ, 'ಕೂಲಿ ಸಿಗದವರು' ಬಹಳ ಮಂದಿ ಇದ್ದಾರೆ ಎನ್ನುವ ಮೂಲಕ ಪಕ್ಷದಲ್ಲಿನ ಅಸಮಾಧಾನ ಪರೋಕ್ಷ ವ್ಯಕ್ತಪಡಿಸಿದ್ದಾರೆ. ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ಬಂದಿಲ್ಲ. ತಮ್ಮ ಸಿಎಂ ಆಗುವ ಆಸೆ 2028ಕ್ಕೆ ಮೀಸಲು ಎಂದಿದ್ದಾರೆ.

ಹಾವೇರಿ (ನ.27): ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಗೊಂದಲಗಳು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಇತ್ತೀಚಿನ 'ಕೊಟ್ಟ ಮಾತು ಉಳಿಸಿಕೊಳ್ಳುವುದು ಅತ್ಯಂತ ದೊಡ್ಡ ಶಕ್ತಿ' ಎಂಬ ಪೋಸ್ಟ್ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಹಾವೇರಿಯಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಡಿಕೆಶಿ ಪೋಸ್ಟ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, 'ಈ ಪ್ರಶ್ನೆಗೆ ದೆಹಲಿಯಲ್ಲಿ ಬೆಂಗಳೂರಿನಲ್ಲಿ ಕೇಳಿದರೆ ಉತ್ತರ ಸಿಗಬಹುದು, ಹಾವೇರಿಯಲ್ಲಿ ಕೇಳಿದರೆ ಅದಕ್ಕೆ ಉತ್ತರ ಸಿಗಲ್ಲ ಎಂದು ಸತೀಶ್ ಜಾರಕಿಹೊಳಿ ಅವರು ನುಣುಚಿಕೊಂಡಿದ್ದಾರೆ.

ಕೂಲಿ ಸಿಗದವರ ಪರ ಜಾರಕಿಹೊಳಿ ದನಿ:

ಎಲ್ಲರಿಗೂ ಕೂಲಿ ಸಿಗಲ್ಲ. ಕೂಲಿ ಸಿಗದವರು ಬಹಳ ಮಂದಿ ಇದ್ದಾರೆ. ಎಲ್ಲರ ಪ್ರಯತ್ನದಿಂದ ಸರ್ಕಾರ ಬಂದಿದೆ. ಕೆಲವರಿಗೆ ಕೂಲಿ ಸಿಗುತ್ತೆ, ಕೆಲವರಿಗೆ ಸಿಗಲ್ಲ. ಆದಷ್ಟು ಬೇಗ ಈ ಗೊಂದಲ ಬಗೆಹರಿಯಬೇಕು ಎಂದು ಹೇಳುವ ಮೂಲಕ ಸರ್ಕಾರದ ಉನ್ನತ ಹುದ್ದೆ ಆಕಾಂಕ್ಷಿಗಳು ಹಾಗೂ ಅಸಮಾಧಾನಿತರ ಪರವಾಗಿ ಪರೋಕ್ಷವಾಗಿ ಮಾತನಾಡಿದ್ದಾರೆ.

ಪಕ್ಷದ ವರಿಷ್ಠರಿಗೆ ಜಾರಕಿಹೊಳಿ ಮನವಿ: ಗೊಂದಲ ಬಗೆಹರಿಸುವಂತೆ ನಾವೂ ರಿಕ್ವೆಸ್ಟ್ ಮಾಡಿದೀವಿ, ಎಲ್ಲರೂ ರಿಕ್ವೆಸ್ಟ್ ಮಾಡಿದಿವಿ. ಪಕ್ಷದ ವೇದಿಕೆಯಲ್ಲಿ ಎಲ್ಲಾ ಹೇಳ್ತೀವಿ, ಇಲ್ಲಿ ಹೇಳೋಕೆ ಆಗಲ್ಲ ಎಂದರು. ಇದೇ ವೇಳೆ ಪಕ್ಷದ ನಿಷ್ಠೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ವಿರೋಧವಾಗಿ ನಾನು ಮಾತಾಡಿಲ್ಲ. ಪಕ್ಷದ ಪರವಾಗಿನೇ ಮಾತಾಡಿರ್ತೀನಿ. ಎಲ್ಲರೂ ಒಂದೇ ಪಕ್ಷದಲ್ಲಿ ಇದ್ದೇವೆ, ಅವರ ಪರ ಅಂತ ಹೇಳೋಕೆ ಆಗಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಕೆಪಿಸಿಸಿ ಹುದ್ದೆ ಆಫರ್ ಸುಳ್ಳು: ಜಾರಕಿಹೊಳಿ

ಇನ್ನು ಶಿವಕುಮಾರ್ ಅವರಿಂದ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಫರ್ ಬಂದಿರುವ ವರದಿ ಬಂದಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಯನ್ನ ತಳ್ಳಿಹಾಕಿದ ಸತೀಶ್ ಜಾರಕಿಹೊಳಿ ಅವರು, ನನಗೆ ಕೆಪಿಸಿಸಿ ಹುದ್ದೆ ಬಗ್ಗೆ ಡಿಕೆ ಶಿವಕುಮಾರ್ ಅವರ ಜೊತೆ ಚರ್ಚೆ ಆಗಿಲ್ಲ. 2028ರ ಚುನಾವಣೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತ್ರ ಚರ್ಚೆ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ಪ್ರತಿಕ್ರಿಯೆ

ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಅವಿಶ್ವಾಸ ನಿರ್ಣಯ ಮಾಡಬಹುದು ಅದರಲ್ಲೇನಿದೆ? ಈಗಾಗಲೇ ಎರಡೂ ಮೂರು ಸಲ ಮಾಡಿದ್ದಾರೆ. ಅದರಿಂದ ಏನೂ ಪ್ರಯೋಜನ ಇಲ್ಲ, ನಮಗೆ ಮೆಜಾರಿಟಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಎಂ ಅಭ್ಯರ್ಥಿ ವಿಚಾರ 2028ಕ್ಕೆ ಮೀಸಲು

ತಮ್ಮ ಸಿಎಂ ಅಭ್ಯರ್ಥಿಯಾಗುವ ಆಸೆಯ ಕುರಿತು ಕೇಳಿದಾಗ, 'ಆಗಲೇ ಹೇಳಿದೀವಲ್ಲವಾ? ಸಿಎಂ ಅಭ್ಯರ್ಥಿ ಆಗುವ ಬಗ್ಗೆ 2028 ಕ್ಕಿದೆ ನಮ್ಮದು, ಈಗಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!