
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಂಗಂದೂರು ಸೇತುವೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಿಲ್ಲ ಎಂಬ ಸುದ್ದಿಗೆ ಸ್ಪಷ್ಟನೆ ನೀಡಿದ್ದು, ಆಹ್ವಾನವನ್ನು ತಡವಾಗಿ ನೀಡಲಾಗಿದೆ, ಈ ಕಾರಣದಿಂದ ಸಿಎಂ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ಇಂಡಿ ಕ್ಷೇತ್ರದ ಶಾಸಕರ ಕಾರ್ಯಕ್ರಮವಿತ್ತು. ಅದನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ದಿನಾಂಕಗಳು ಕ್ಲ್ಯಾಶ್ ಆಗಿದ್ದರಿಂದ, ಸೇತುವೆ ಉದ್ಘಾಟನೆಗೆ ಹೋಗಲಾಗುತ್ತಿಲ್ಲ. ಆದರೆ, ಸರ್ಕಾರದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೇತುವೆ ಬಗ್ಗೆ ರಾಜಕೀಯ ಜವಾಬ್ದಾರಿಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, “ಸಿಂಗಂದೂರು ಸೇತುವೆ ಯಾವುದೇ ಒಂದು ಪಕ್ಷದ ಸಾಧನೆಯಲ್ಲ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎಲ್ಲಾ ಸರ್ಕಾರಗಳ ಪಾತ್ರವಿದೆ. ಆಸ್ಕರ್ ಫರ್ನಾಂಡಿಸ್ ಅವರ ಕಾಲದಲ್ಲಿಯೇ ಸೇತುವೆಗೆ ರೂಪುರೇಷೆ ಸಿದ್ಧವಾಗಿತ್ತು. ಇದು ಇಡೀ ಕರ್ನಾಟಕದ ಅಭಿವೃದ್ಧಿಗೆ ಸೇರಿದೆ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಜಾರಕಿಹೊಳಿ, “ಸಿಎಂಗೆ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡಿಲ್ಲವೆಂಬ ಆರೋಪಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ವಿಚಾರವನ್ನು ಅವರು ತಾವೇ ಸ್ಪಷ್ಟಪಡಿಸಬೇಕು” ಎಂದು ತಿರುಗೇಟು ನೀಡಿದರು.
ಆಪರೇಷನ್ ಕಮಲ ಸಂಬಂಧಿತ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಈ ವಿಷಯವನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ಶಾಸಕರೊಬ್ಬರಾದ ವಿಜಯಾನಂದ ಕಾಶಪ್ಪನವರ್ ಏನು ಹೇಳಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು” ಎಂದು ಹೇಳಿದರು.
ಬಹುಕಾಲದ ನಿರೀಕ್ಷೆಯ ಯೋಜನೆಯಾದ 423 ಕೋಟಿ ರು. ವೆಚ್ಚದಲ್ಲಿ ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡಿರುವ ಶರಾವತಿ ಹಿನ್ನೀರಿನ 2125 ಮೀಟರ್ ಉದ್ದದ ಅಂಬಾರಗೋಡ್ಲು-ಕನಸವಳ್ಳಿ ಸಿಗಂದೂರು ಸಂಪರ್ಕ ಸೇತುವೆಯನ್ನು ಜು.14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಕಲ್ಪ ಹಾಗೂ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರರವರ ವಿಶೇಷ ಶ್ರಮದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ತಾಂತ್ರಿಕವಾಗಿ ದೇಶದ ಎರಡನೇ ಅತಿ ಉದ್ದದ ಮತ್ತು ತಾಂತ್ರಿಕವಾಗಿ ಆಕರ್ಷಣೀಯ ಸೇತುವೆಯಾಗಿದ್ದು, ಈ ಪ್ರದೇಶ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯಿದೆ ಎಂದು ಶನಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಜು.14 ರಂದು ಬೆಳಗ್ಗೆ 10.30 ಗಂಟೆಗೆ ಸೇತುವೆ ಉದ್ಘಾಟನೆಯ ನಂತರ ಸಚಿವ ನಿತಿನ್ ಗಡ್ಕರಿಯವರು ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳದ್ದಾರೆ. ಈ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಕೂಡ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ