ಸಚಿವ ಸತೀಶ್ ಜಾರಕಿಹೊಳಿ ಇಡಿ ದಾಳಿ ಪ್ರಕರಣ: ಮೂರು PWD ಟೆಂಡರ್, 3000 ಕೋಟಿ ಕಿಕ್‌ಬ್ಯಾಕ್ ಬಯಲು!

Published : Sep 19, 2026, 02:54 PM IST
Minister Satish Jarkiholi

ಸಾರಾಂಶ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ಮೇಲೆ ಇಡಿ ನಡೆಸಿದ ದಾಳಿಯಲ್ಲಿ ಬಿವಿಇಪಿಎಲ್ ಕಂಪನಿಯಿಂದ 3,000 ಕೋಟಿ ರೂ.ಗೂ ಅಧಿಕ ಮೌಲ್ಯದ ಟೆಂಡರ್ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಲಂಚದ ಹಣವನ್ನು ಹವಾಲಾ ಮೂಲಕ ರವಾನಿಸಿ ಆಫ್ರಿಕಾದ ಚಿನ್ನದ ಗಣಿಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಡಿಜಿಟಲ್ ಪುರಾವೆಗಳು ಲಭ್ಯವಾಗಿವೆ.

ಬೆಂಗಳೂರು: ಕರ್ನಾಟಕ ಲೋಕೋಪಯೋಗಿ ಇಲಾಖೆ (PWD) ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿರುವ ಕಾರ್ಯಾಚರಣೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ದಾಳಿ ನಂತರ ಖಾಸಗಿ ಕಂಪನಿಯೊಂದರ ಹೆಸರನ್ನು ಇಡಿ ಉಲ್ಲೇಖ ಮಾಡಿತ್ತು. ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ (BVEPL) ಹೆಸರನ್ನು ಉಲ್ಲೇಖಿಸಿತ್ತು. ಈ ಬಿವಿಇಪಿಎಲ್‌ ಕಂಪನಿ ರಾಜ್ಯದ ಲೋಕೋಪಯೋಗಿ ಇಲಾಖೆಯ ಟೆಂಡರ್ ಪಡೆಯಲು ಸಚಿವರ ಆಪ್ತರಿಗೆ ಭಾರಿ ಪ್ರಮಾಣದ ಲಂಚ ನೀಡಿದೆ. ಈ ಲಂಚದ ಹಣವನ್ನೇ ವಿದೇಶಗಳಲ್ಲಿ ಆಸ್ತಿ ಖರೀದಿಸಲು ಬಳಸಲಾಗಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಭಾವ ವೈ.ಡಿ.ಮಂಜುನಾಥ್ ನಿಯಂತ್ರಣದಲ್ಲಿರುವ ಸಂಸ್ಥೆಗಳು ಮತ್ತು ಬ್ಯಾಂಕ್ ಖಾತೆಗಳ ಮೂಲಕ ಈ ಲಂಚದ ಹಣದ ವಹಿವಾಟು ನಡೆದಿರುವ ಡಿಜಿಟಲ್ ಪುರಾವೆಗಳು ಲಭ್ಯವಾಗಿವೆ ಎಂದು ಇ.ಡಿ. ಆಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಿವಿಇಪಿಎಲ್‌ ಕಂಪನಿ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಬೃಹತ್ ಮೊತ್ತದ ಕಾಮಗಾರಿಗಳನ್ನು ಹಂಚಿಕೆ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಿ, ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪವಿದ್ದು, BVEPL ಕಂಪನಿಯು ಕಮಿಷನ್ ನೀಡುವ ಮೂಲಕ PWD ಇಲಾಖೆಯಿಂದ ಸುಮಾರು ₹3,000 ಕೋಟಿಗೂ ಅಧಿಕ ಮೌಲ್ಯದ ರಸ್ತೆ ಅಭಿವೃದ್ಧಿ ಟೆಂಡರ್‌ಗಳನ್ನು ಪಡೆದುಕೊಂಡಿದೆ. ಈ ರೀತಿ ಸಂಗ್ರಹಿಸಲಾದ ಅಕ್ರಮ ಲಂಚದ ಹಣವನ್ನು ಅನಧಿಕೃತ ಮಾರ್ಗಗಳ ಮೂಲಕ (Hawala) ರವಾನಿಸಿ, ಆಫ್ರಿಕಾ ದೇಶಗಳ ಗಣಿ ಉದ್ಯಮ ಸೇರಿದಂತೆ ವಿದೇಶಿ ಆಸ್ತಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದನ್ನು ಇಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹಾಗಿದ್ರೆ PWD ಇಲಾಖೆಯಲ್ಲಿ BVEPL ಕಂಪನಿ ಪಡೆದ ಗುತ್ತಿಗೆಗಳೇಷ್ಟು? ಯಾವ ಯೋಜನೆಗೆ ಎಷ್ಟು ಕೋಟಿ ಬಿಡ್ ಮಾಡಿ ಪಡೆದುಕೊಂಡಿದೆ? ಎಂಬ ಸಂಪೂರ್ಣ ವಿವಿರ ಇಲ್ಲಿದೆ.

BVEPL ಕಂಪನಿ ಪಡೆದಿರುವ ಪ್ರಮುಖ ಗುತ್ತಿಗೆಗಳ ವಿವರ

ಟೆಂಡರ್ 1: ಮಾರ್ಚ್ 3 2026 ರಂದು 1,178 ಕೋಟಿಯ ಟೆಂಡರ್ BVEPL ಕಂಪನಿ ಹಂಚಿಕೆ. ಇದು ದೇವನಹಳ್ಳಿ-ವೇಮಗಲ್-ಕೋಲಾರವರೆಗೆ ರಸ್ತೆ ಅಭಿವೃದ್ಧಿ ಪಡಿಸುವ ಟೆಂಡರ್ ಆಗಿದೆ.BVEPL ಕಂಪನಿ 48.20 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪಡಿಸುವ ಟೆಂಡರ್ ತನ್ನದಾಗಿಸಿಕೊಂಡಿದೆ. PWD ಇಲಾಖೆಯಡಿ ಬರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಿಂದ ಟೆಂಡರ್ ಹಂಚಿಕೆ ಮಾಡಲಾಗಿದೆ.

ಟೆಂಡರ್ 2: ಹೊಸಕೋಟೆ ಟು ಮಾಲೂರು ಕಾರಿಡಾರ್ ನಿರ್ಮಾಣಕ್ಕೆ ಸುಮಾರು 1100 ಕೋಟಿ ಟೆಂಡರ್ ಪಡೆಯಲಾಗಿದೆ. 2025 ಅಕ್ಟೋಬರ್ ರ 17 ರಂದು BVEPL ಕಂಪನಿ ಜೊತೆಗೆ PWD ಟೆಂಡರ್ ಅಗ್ರಿಮೆಂಟ್ ಮಾಡಿಕೊಂಡಿದ್ದು, 25.615 ಕಿ.ಮೀ ಉದ್ದದ ರಸ್ತೆ ಹಾಗೂ ಎಲಿವೇಟೆಡ್ ಫ್ಲೈಓವರ್ ನಿರ್ಮಾಣಕ್ಕೆ ಈ ಟೆಂಡರ್ ಪಡೆದಿದೆ. PWD ಇಲಾಖೆಯ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ ಟೆಂಡರ್ ಹಂಚಿಕೆಯಾಗಿದೆ.

ಟೆಂಡರ್ 3: ರಾಯಚೂರು ಟು ಲಿಂಗಸೂರು ವರೆಗೆ ರಸ್ತೆ ಅಭಿವೃದ್ಧಿ ಟೆಂಡರ್ BVEPL ಕಂಪನಿಗೆ ಹಂಚಿಕೆಯಾಗಿದೆ. ಒಟ್ಟು 77.03 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ 1696 ಕೋಟಿ ಟೆಂಡರ್ BVEPL ಕಂಪನಿಗೆ ಹಂಚಿಕೆ ಮಾಡಲಾಗಿದ್ದು. ಇದು ಕೂಡ PWD ಇಲಾಖೆಯಡಿ ಬರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಿಂದ ಟೆಂಡರ್ ಹಂಚಿಕೆಯಾಗಿದೆ

ಇಡಿ ವೇಳೆ ಪತ್ತೆಯಾಗಿತ್ತು ಹಲವು ಅಕ್ರಮ

ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿ ಕಂಪನಿಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಜಾರಿ ನಿರ್ದೇಶನಾಲಯ ತನಿಖೆಯ ವೇಳೆ ಪತ್ತೆಯಾಗಿತ್ತು. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈ.ಲಿ. ಸೇರಿ ವಿವಿಧ ಗುತ್ತಿಗೆ ಕಂಪನಿಗಳು ಭಾರೀ ಪ್ರಮಾಣದ ಲಂಚ ಪಾವತಿಸಿದ್ದು, ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿತ್ತು.

ಸತೀಶ್‌ ಜಾರಕಿಹೊಳಿ ಕುಟುಂಬದ ಸದಸ್ಯರಾದ ಚಿಕ್ಕೋಡಿ ಸಂಸದೆಯಾಗಿರುವ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ವೈ.ಡಿ ಮಂಜುನಾಥ್ ಅವರ ಪತ್ನಿ ಮತ್ತು ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು (ಪಾಲು) ಹೊಂದಿರುವುದು ಪತ್ತೆಯಾಗಿತ್ತು. ಇವುಗಳಲ್ಲಿ ಕಾಂಗೋದ ಎಲ್‌ಡೊರಾಡೊ ಮೈನಿಂಗ್‌ ರಿಸೋರ್ಸಸ್‌ ಹಾಗೂ ಜಾಂಬಿಯಾದಲ್ಲಿರುವ ನವ ಔರಂ ಮೈನಿಂಗ್‌ ಲಿಮಿಟೆಡ್‌ ಸೇರಿ ಹಲವು ಸಂಸ್ಥೆಗಳೂ ಸೇರಿವೆ.

ಇದಲ್ಲದೆ, ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮೆ.ಮ್ಯಾಗ್ನಿಟ್ಯೂಡ್‌ ಸ್ಟಾರ್‌ ಎಸ್‌ಎಆರ್‌ಎಲ್‌ ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಶೇ.40 ಪಾಲು ಹೊಂದಿರುವುದು ಪತ್ತೆಯಾಗಿದೆ. ಆಫ್ರಿಕಾದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಮತ್ತು ಅಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಹಾಗೂ ಇತರ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿತ್ತು. ಪ್ರಸ್ತುತ PWD ಇಲಾಖೆಯ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಇ.ಡಿ. ತನಿಖೆ ತೀವ್ರಗೊಂಡಿದ್ದು, ಮುಂಬರುವ ದಿನಗಳಲ್ಲಿ ಎಲ್ಲಿ ಹೋಗಿ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಪ್ರಧಾನಿ ಮೋದಿ ವಿರುದ್ದ ಬಿಕೆ ಹರಿಪ್ರಸಾದ್ ವಾಗ್ದಾಳಿ
ಕಾಲೇಜು ವಿದ್ಯಾರ್ಥಿಗಳಿಗೆ ಸೆಲ್ಫಿ ವಿಡಿಯೋ, ರೀಲ್ಸ್‌ ಬ್ಯಾನ್, ಕರ್ನಾಟಕ ಸರ್ಕಾರದಿಂದ ಮಹತ್ವದ ಆದೇಶ