
ಬೆಂಗಳೂರು(ಆ.20): ಜೆಡಿಎಸ್‌ನಲ್ಲಿ ಮುಖ್ಯಮಂತ್ರಿಯಾಗಬೇಕು ಎಂದರೆ ವರಿಷ್ಠ ಎಚ್.ಡಿ.ದೇವೇಗೌಡ ಮನೆಯಲ್ಲಿ ಹುಟ್ಟಬೇಕು, ಕಾಂಗ್ರೆಸ್‌ನಲ್ಲಿ ಪ್ರಧಾನಿಯಾಗಬೇಕಾದರೆ ನೆಹರು ಕುಟುಂಬದಲ್ಲಿ ಹುಟ್ಟಬೇಕು. ಆದರೆ, ಬಿಜೆಪಿಯಲ್ಲಿ ಆ ರೀತಿ ಆಗುವುದಿಲ್ಲ. ಸಾಮಾನ್ಯ ಕಾರ್ಯಕರ್ತರು ಮುಖ್ಯಮಂತ್ರಿ, ಪ್ರಧಾನಿಯಾಗುತ್ತಾರೆ. ಇದು ಬಿಜೆಪಿಗೂ ಇತರ ಪಕ್ಷಗಳಿಗೂ ಇರುವ ವ್ಯತ್ಯಾಸ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ಜನಾಶೀರ್ವಾದ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕದಂತಹ ದೇಶವು ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಹೆಣಗಾಡುತ್ತಿರುವಾಗ, ನರೇಂದ್ರ ಮೋದಿ ಸರ್ಕಾರವು ಕೋವಿಡ್‌ನಂತಹ ಕಠಿಣ ಸವಾಲನ್ನು ದಿಟ್ಟವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸಿದೆ ಎಂದರು. ರಾಜ್ಯದಲ್ಲಿ ಮೂರನೆ ಅಲೆ ಎದುರಾದರೆ ಅದನ್ನು ಎದುರಿಸಲು ಎಲ್ಲಾ ಅಗತ್ಯ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂದರು.
ಬೆಂಗಳೂರಲ್ಲಿ ವೈದ್ಯರು ಪ್ರತಿ ಮನೆಗೂ ಹೋಗಿ ಪರೀಕ್ಷೆ ನಡೆಸುವ ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ. ಈ ಮೂಲಕ ಬೆಂಗಳೂರಿನ 29 ಲಕ್ಷ ಮನೆಗಳನ್ನು ತಲುಪುತ್ತೇವೆ. ಈಗಾಗಲೇ 60 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದು, 17 ಲಕ್ಷ ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದರು.
ಬಿಜೆಪಿ ಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಶರಣಪ್ರಕಾಶ ಪಾಟೀಲ್
ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಹೆಸರಲ್ಲಿ ಹುಕ್ಕಾಬಾರ್ ಆರಂಭಿಸುವ ಕುರಿತಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆಯು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಚರ್ಚೆ ಆರಂಭ ಮಾಡಿದ್ದು ಕಾಂಗ್ರೆಸ್ಸಿಗರೇ. ಶೌಚಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ವಾಜಪೇಯಿ ಹೆಸರಿಡಿ ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ರವಿ ಆ ರೀತಿ ಹೇಳಿದ್ದಾರೆ. ಕಾಂಗ್ರೆಸ್ಸಿಗರು ಸರಿಯಾಗಿ ಮಾತನಾಡಿದ್ದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ಬರುತ್ತಿತ್ತು. ಮೊದಲು ಕಾಂಗ್ರೆಸ್ಸಿಗರು ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದರು.
"
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ದೇಶಕ್ಕೆ ದೊಡ್ಡ ದಿಕ್ಸೂಚಿಯಾಗಲಿದೆ. ಈವರೆಗೆ ವಿದ್ಯಾರ್ಥಿಗಳಿಗೆ ವಿರುದ್ಧ ನೀತಿ ಇತ್ತು. ಆದರೆ, ಇನ್ಮುಂದೆ ವಿದ್ಯಾರ್ಥಿಗಳಿಗೆ ಪೂರಕವಾದ ನೀತಿ ಜಾರಿಯಾಗಲಿದೆ. ಶಿಕ್ಷಣ ಮತ್ತು ಕೌಶಲ್ಯದ ಮೂಲಕ ಸಬಲೀಕರಣ ಸಾಧ್ಯವಾಗಲಿದೆ. ಗುಣಮಟ್ಟದ ಶಿಕ್ಷಣ ನೀಡುವರೆವಿಗೂ ಸಮಾಜದ ಪ್ರಗತಿ ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನಾವು ಬಹಳ ದೂರ ಇದ್ದೇವೆ. ವಿಶ್ವಮಟ್ಟದ ಸಂಸ್ಥೆಗಳಲ್ಲಿ ಬೆರಳೆಣಿಕೆ ಸಂಸ್ಥೆಗಳು ಮಾತ್ರ ಭಾರತದ್ದಿವೆ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ನಮಗೆ ದೊಡ್ಡ ಶಕ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಹೊಸದಾಗಿ ಸಚಿವರಾದವರನ್ನು ಲೋಕಸಭೆಯಲ್ಲಿ ಪ್ರಧಾನಿಗಳು ಪರಿಚಯಿಸುವುದು ಸಂಪ್ರದಾಯ. ಆದರೆ, ಆ ಅವಕಾಶ ಮಾಡಿಕೊಡದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಜನಾಶೀರ್ವಾದ ಯಾತ್ರೆ ಮಾಡಲಾಗಿದೆ. ಸದನದಲ್ಲಿ ಕೋವಿಡ್, ಗಡಿ ವಿಚಾರ ಪ್ರಸ್ತಾಪಿಸದೆ ಅಧಿವೇಶನದ ಸಮಯ ವ್ಯರ್ಥ ಮಾಡಿದ್ದಾರೆ. ಜಗತ್ತೇ ಮೆಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದ್ದಾರೆ. ಅದನ್ನು ಸಹಿಸದೆ ಕಾಂಗ್ರೆಸ್ ಕಲಾಪವನ್ನು ಹಾಳು ಮಾಡಿದೆ. ದೇಶದ ಜನ ಕಾಂಗ್ರೆಸ್ ಪಕ್ಷವನ್ನು ನಂಬುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗಲ್ಲ, ಮುಳುಗಿರುವ ಹಡಗು ಎಂದು ಲೇವಡಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ