
ಬೆಂಗಳೂರು[ಜ.28]: ‘ಆಂಜನೇಯನ ಎದೆ ಬಗೆದರೆ ಶ್ರೀರಾಮ ಕಂಡಂತೆ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರ ಜಪ ಕಾಣುತ್ತದೆ’ ಎಂದು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ.
ನಾನು ನಿತ್ಯ ಅವರ ಜಪ ಮಾಡಿಕೊಂಡು ಬಂದವನು. ಅವರ ಆಶೀರ್ವಾದದಿಂದಲೇ ಸಚಿವನಾಗಿದ್ದು, ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಅವರು ಘೋಷಿಸಿದ್ದಾರೆ.
ಬೆಂಗಳೂರು ನೈಸ್ ರಸ್ತೆಯ ಸೋಂಪುರ ಗೇಟ್ ಬಳಿಯ ಜಟ್ಟಿಗರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಯಾವಾಗಲೂ ಸಿದ್ದರಾಮಯ್ಯರನ್ನು ಜಪ ಮಾಡಿಕೊಂಡು ಬಂದಿದ್ದೇನೆ. ಕೇವಲ ನಮ್ಮ ಸಮಾಜ ಮಾತ್ರವಲ್ಲ, ಹಿಂದುಳಿದ ವರ್ಗಗಳ ಸಮಗ್ರ ಅಭಿವೃದ್ಧಿಗೆ ಅವರು ಸಾಕಷ್ಟುದುಡಿದಿದ್ದಾರೆ. ಹೀಗಾಗಿ ನನಗೆ ರಾಜಕೀಯದಲ್ಲಿ ಮೆಚ್ಚಿನ ನಾಯಕರು ಅವರು. ಇಂದಿಗೂ ಆಂಜನೇಯನ ಎದೆ ಬಗೆದರೆ ಶ್ರೀರಾಮ ಕಂಡಂತೆ, ನನ್ನ ಎದೆ ಬಗೆದರೆ ಸಿದ್ದರಾಮಯ್ಯನವರ ಜಪ ಕಾಣುತ್ತದೆ ಎಂದು ಹೇಳಿದರು.
ನನಗೆ ಒಮ್ಮೆಯಾದರೂ ಸಚಿವನಾಗಬೇಕು ಎಂಬ ಕನಸು ಇತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಕನಸು ನನಸು ಮಾಡಿದ್ದಾರೆ. ಸಚಿವ ಸ್ಥಾನದ ಜತೆಗೆ ವಸತಿ ಖಾತೆಯಂತಹ ಮಹತ್ವದ ಖಾತೆ ಕೊಡಿಸಿದ್ದಾರೆ. ನಾನು 2018ರ ವಿಧಾನಸಭೆ ಚುನಾವಣೆ ವೇಳೆಯೇ ನಾನು ಸಚಿವನಾಗಬೇಕು, ಇಲ್ಲದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂಬ ದೃಢ ನಿರ್ಧಾರ ತೆಗೆದುಕೊಂಡಿದ್ದೆ. ಈಗ ಕೊನೆಗೂ ಸಚಿವನಾಗಿದ್ದೇನೆ. ಹಾಗಾಗಿ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ