ZP-TP Election: ಪಂಚಾಯ್ತಿ ಚುನಾವಣೆ ಬಗ್ಗೆ ಮಹತ್ವದ ಮಾಹಿತಿ ಕೊಟ್ಟ ಸಚಿವ ಈಶ್ವರಪ್ಪ

By Girish GoudarFirst Published Mar 29, 2022, 6:35 AM IST
Highlights

*  ಜಿಪಂ, ತಾಪಂ ಮೀಸಲು ಚರ್ಚೆಗೆ 31ಕ್ಕೆ ಸರ್ವಪಕ್ಷ ಸಭೆ
*  ಪಂಚಾಯ್ತಿ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ
*  ಚುನಾವಣೆ ಮುಂದೂಡಿಕೆ ಉದ್ದೇಶವಿಲ್ಲ

ಬೆಂಗಳೂರು(ಮಾ.29): ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಕುರಿತು ಚರ್ಚಿಸಲು ಮಾ.31ರಂದು ಸರ್ವ ಪಕ್ಷ ಸಭೆ ಕರೆಯಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅನುದಾನ(Grants) ಬೇಡಿಕೆಗಳ ಮೇಲೆ ನಡೆದ ಚರ್ಚೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಾರಣಕ್ಕೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ(Election) ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಎದ್ದಿರುವ ಗೊಂದಲಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಮಾ.31 ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವ ಪಕ್ಷ ಸಭೆ ಕರೆದಿರುವುದಾಗಿ ಹೇಳಿದರು.

Latest Videos

ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುವ ವ್ಯಕ್ತಿ ನೀನು, ಈಶ್ವರಪ್ಪ-ಜಮೀರ್ ಮಾತಿನ ಜಟಾಪಟಿ

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhjuswamy), ಅಡ್ವೋಕೆಟ್‌ ಜನರಲ್‌, ಕಾನೂನು ತಜ್ಞರು, ಪ್ರತಿಪಕ್ಷಗಳ ನಾಯಕರು ಸೇರಿದಂತೆ ಮತ್ತಿತರರು ಅಂದಿನ ಸಭೆಗೆ ಭಾಗವಹಿಸಲಿದ್ದಾರೆ ಎಲ್ಲ ಅಭಿಪ್ರಾಯ ಪಡೆದು ಸರ್ಕಾರ ಅಂತಿಮವಾಗಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡಿ ಚುನಾವಣೆಗೆ ಹೋಗುವುದಿಲ್ಲ. ಈ ಸಮುದಾಯಕ್ಕೆ ಎಷ್ಟುಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದು ಸುಪ್ರೀಂ ಕೋರ್ಟ್‌ನಲ್ಲಿದೆ. ನಾವು ಸರ್ವ ಪಕ್ಷ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ(Reservation) ನೀಡಬೇಕು ಎಂಬುದರ ಬಗ್ಗೆ ಗೊಂದಲ ಉಂಟಾಗಿದೆ. ಸುಪ್ರೀಂ ಕೋರ್ಟ್‌ ಕೊಟ್ಟಿರುವ ಆದೇಶದ ಪ್ರಕಾರ ಈಗ ಕರ್ನಾಟಕದಲ್ಲಿ(Karnataka) ಕೊಟ್ಟಿರುವ ಬಿಸಿಎಂ ‘ಎ’ ಮತ್ತು ಬಿಸಿಎಂ ‘ಬಿ’ ಮೀಸಲಾತಿ ರದ್ದಾಗಲಿದ್ದು ಅವರು ಕೂಡ ಸಾಮಾನ್ಯ ವರ್ಗಕ್ಕೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ(Maharashtra) ಮೀಸಲಾತಿಯಲ್ಲಿ ಗೆದ್ದಿರುವುದನ್ನು ರದ್ದುಗೊಳಿಸಿದ್ದು ಮತ್ತೆ ಸಾಮಾನ್ಯ ವರ್ಗದಲ್ಲಿ ಅವರೆಲ್ಲ ಚುನಾವಣೆ ಎದುರಿಸಿ ಗೆಲ್ಲಬೇಕಿದೆ ಎಂದರು.

ಡಿಕೆಶಿಗೆ ಶಕ್ತಿಯಿದ್ರೆ ಸಿದ್ದರಾಮಯ್ಯರನ್ನು ವಜಾಗೊಳಿಸಲಿ: ಈಶ್ವರಪ್ಪ ಸವಾಲು

1994-95ರಲ್ಲಿ ಹಿಂದುಳಿದ ವರ್ಗದವರಿಗೆ(Backward Class) ಶೇ.33ರಷ್ಟು ಮೀಸಲಾತಿ ನೀಡಿ ಬಿಸಿಎಂ ‘ಎ’ ಮತ್ತು ಬಿಸಿಎಂ ‘ಬಿ’ ಮಾಡಿದ್ದೆವು. ಅದರಲ್ಲಿ ಶೇ.26.4 ರಷ್ಟು ಬಿಸಿಎಂ ‘ಎ’ ಮತ್ತು ಶೇ.6.6 ಬಿಸಿಎಂ ‘ಬಿ’ ಎಂದು ಮೀಸಲಾತಿ ಮಾಡಿದ್ದೆವು. ಅಂದು ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲಾಗಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್‌(Supreme Court0 ಆದೇಶದಂತೆ ಹಿಂದುಳಿದ ವರ್ಗದವರಿಗೆ ಇರುವ ಶೇ.33ರಷ್ಟು ಮೀಸಲಾತಿ ರದ್ದಾಗಿ ಸಾಮಾನ್ಯ ವರ್ಗಕ್ಕೆ ಹೋಗಬೇಕಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಹಿಂದುಳಿದ ವರ್ಗದವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಚುನಾವಣೆ ಮುಂದೂಡಿಕೆ ಉದ್ದೇಶವಿಲ್ಲ

ವಿಧಾನ ಪರಿಷತ್‌ನಲ್ಲೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ ಕುರಿತು ಮಾತನಾಡಿದ ಸಚಿವ ಈಶ್ವರಪ್ಪ ಪಂಚಾಯಿತಿ ಚುನಾವಣೆಯನ್ನು ಮುಂದೂಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ, ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿಯೇ ಚುನಾವಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸಲು ಸರ್ಕಾರ ಸಜ್ಜಾಗಿತ್ತು. ಆದರೆ ಸುಮಾರು 2600ಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದ ಕಾರಣ ಇವುಗಳನ್ನು ಇತ್ಯರ್ಥ ಮಾಡಲು ಹೊಸ ಆಯೋಗ ರಚಿಸಲಾಗಿದೆ. ಆಯೋಗ ಈಗಾಗಲೇ ತನ್ನ ಕೆಲಸ ಆರಂಭಿಸಿದೆ. ಈಗಲೇ ಚುನಾವಣೆ ನಡೆಸಲು ಮುಂದಾದರೆ ಒಬಿಸಿ ಬಿಟ್ಟು ಚುನಾವಣೆ ಮಾಡಬೇಕಾಗುತ್ತದೆ. ಹೀಗಾಗಿ ಒಬಿಸಿ ನಿಗದಿ ಪಡಿಸಿದ ನಂತರವೇ ಚುನಾವಣೆ ಮಾಡಲಾಗುವುದು ಎಂದು ಹೇಳಿದರು.
 

click me!