
ತುಮಕೂರು (ಫೆ.16): ನನಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿಗಿರಿ ಬಿಡುತ್ತೇನೆ. ಇದನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ಧಾಂತ ಇದೆ. ಅದಕ್ಕೆ ನಾನು ಬದ್ಧ. 2023ರ ಮೇ 18ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸುತ್ತೊಲೆಯಲ್ಲಿಯೇ ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ ಎಂದರು. ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷಗಳಿಗೆ ಒಪ್ಪಂದ ಆಗಿದೆ ಎಂಬ ಬಗ್ಗೆ 2023ರ ಮೇ 18ರಂದು ಬಿಡುಗಡೆ ಮಾಡಿದ ಪತ್ರದಲ್ಲಿ ಉಲ್ಲೇಖಿಸಿಲ್ಲ. 5 ವರ್ಷ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.
ಇದನ್ನೂ ಓದಿ: ಡಿಕೆಶಿ vs ರಾಜಣ್ಣ: ಉದಯಗಿರಿ ಪೊಲೀಸರ ಪರ ನಿಂತ ಡಿಕೆ ಶಿವಕುಮಾರ | ಪೊಲೀಸರ ವೈಫಲ್ಯ ಎಂದಿದ್ದ ರಾಜಣ್ಣ!
ಹಾಸನ ಉಸ್ತುವಾರಿಯಿಂದ ಮುಕ್ತಿ
ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಈ ಉದ್ದೇಶದಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಲು ಕೋರಿದ್ದೇನೆ. ಹಾಸನಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.
ಇದನ್ನೂ ಓದಿ: Karanataka Politics: ಡಿಕೆಶಿ ರೀತಿ ನಮಗೂ ಎರಡು ಹುದ್ದೆ ನೀಡಿ: ರಾಜಣ್ಣ, ಜಾರಕಿಹೊಳಿ ಬೇಡಿಕೆ?
ಜಾತಿ ಗಣತಿ
ಚಾಮರಾಜನಗರದಲ್ಲಿ 2025ರ ಮಾರ್ಚ್ 17ರಂದು ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಜಾತಿ ಗಣತಿಯನ್ನು ಬಿಡಗುಡೆ ಮಾಡುವ ಸಂಭವವಿದೆ. ನ್ಯಾ.ನಾಗಮೋಹನ್ ದಾಸ್ ವರದಿ ಆಧರಿಸಿ ಒಳಮೀಸಲಾತಿ ಜಾರಿಗೆ ತರಲಿದ್ದೇವೆ ಎಂದು ರಾಜಣ್ಣ ನುಡಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ