ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆಯೂ ಪಾಳಿಯಲ್ಲಿ ಕಾರ್ಯ ನಿರ್ವಹಣೆ
ಬೆಂಗಳೂರು(ಆ.07): ರಾಜ್ಯದಲ್ಲಿ ಮಂಕಿಪಾಕ್ಸ್ ಸೋಂಕು ತಪಾಸಣೆ, ನಿಗಾ ಹೆಚ್ಚಿಸಿದ್ದು, ಈವರೆಗೂ ಒಬ್ಬರಲ್ಲಿಯೂ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ವಿಶ್ವ ವ್ಯಾಸ್ಕುಲರ್ ದಿನ ಅಂಗವಾಗಿ ವ್ಯಾಸ್ಕುಲರ್ ಸರ್ಜನ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಜಾಗೃತಿ ವಾಕಥಾನ್‌ನಲ್ಲಿ ಮಾತನಾಡಿದ ಅವರು, ಮಂಕಿ ಪಾಕ್ಸ್ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮುಖ್ಯವಾಗಿ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆಯೂ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಗೆಯ ಪಾಳಿಯನ್ನು ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲೂ ಈ ಪ್ರಕರಣ ಕಂಡುಬಂದರೂ, ರಾಜ್ಯದಲ್ಲಿ ಈವರೆಗೆ ಪ್ರಕರಣ ಕಂಡುಬಂದಿಲ್ಲ. ಇಥಿಯೋಪಿಯಾದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಪಾಕ್ಸ್ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಮಂಕಿ ಪಾಕ್ಸ್ ಅಲ್ಲ, ಸ್ಮಾಲ್ ಪಾಕ್ಸ್ ಎಂದು ದೃಢಪಟ್ಟಿದೆ ಎಂದರು.
Monkeypox: ಭಾರತದಲ್ಲಿ 9ನೇ ಪ್ರಕರಣ ಪತ್ತೆ, ದೆಹಲಿಯಲ್ಲಿ 4ನೇ ಕೇಸ್!
ಚರ್ಮದಲ್ಲಿ ದದ್ದು ಸೇರಿದಂತೆ ಹಲವಾರು ಲಕ್ಷಣಗಳಿಂದ ಮಂಕಿಪಾಕ್ಸ್ ಗೊತ್ತಾಗುತ್ತದೆ. ಸೋಂಕಿತ ಪ್ರದೇಶದಿಂದ ಆಗಮಿಸಿದವರಲ್ಲಿ ಮೂರು ನಾಲ್ಕು ದಿನಗಳಾದ ನಂತರ ಪತ್ತೆಯಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಬಂದಾಗ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ತಿಳಿಸಿದರು.
ಅರಿವು ಅಗತ್ಯ:
ರಕ್ತಪರಿಚಲನೆ ವ್ಯವಸ್ಥೆಯ ಸಮಸ್ಯೆಗಳು ಬೇರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಡುತ್ತವೆ. ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ರಕ್ತಪರಿಚಲನೆ ಸಮಸ್ಯೆಯಿಂದ ಕಾಲನ್ನು ಕಳೆದುಕೊಳ್ಳುವ ಸ್ಥಿತಿ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ರಕ್ತನಾಳದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಲಘು ವ್ಯಾಯಾಮವನ್ನು ಮಾಡುವಂತೆ ಎಲ್ಲರಿಗೂ ಉತ್ತೇಜಿಸಬೇಕು. ವಿಶೇಷವಾಗಿ ಮಧುಮೇಹಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.