* ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಶುಲ್ಕ ತಡೆಗೆ ಕ್ರಮ
* ಜೂನ್ ಅಂತ್ಯಕ್ಕೆ 2.25 ಕೋಟಿ ಲಸಿಕೆ
* ಎಲ್ಲರೂ ಕೊರೋನಾ ಸುರಕ್ಷತಾ ಕ್ರಮ ಪಾಲಿಸಬೇಕು
ಬೆಂಗಳೂರು(ಜೂ.06): ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ವಿಧಿಸದಂತೆ ತಡೆಯಲು ಮುಂದಿನ ವಾರ ಚಿಕಿತ್ಸೆಗೆ ದರ ನಿಗದಿ ಮಾಡಲಾಗುವುದು. ಜತೆಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಸಹ ಚರ್ಚಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಮ ವರ್ಗದವರು, ಬಡವರ್ಗದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು ಎಲ್ಲರಿಗೂ ಕಪ್ಪು ಶಿಲೀಂಧ್ರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಿಂದೆಯೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ. ಒಬ್ಬರಿಗೆ 2-3 ಲಕ್ಷ ರು. ಖರ್ಚಾಗಲಿದ್ದು, ಸರ್ಕಾರವೇ ಭರಿಸುತ್ತಿದೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪರಿಶೀಲಿಸಿ ಚಿಕಿತ್ಸೆಗೆ ದರ ನಿಗದಿ ಮಾಡಲಾಗುವುದು. ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಉಚಿತವಾಗಿ ನೀಡಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಡಿ ಚಿಕಿತ್ಸೆ ನೀಡಬೇಕೆಂದು ಸಲಹೆ ಬಂದಿದೆ. ಈ ಕುರಿತು ಚರ್ಚಿಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಈವರೆಗೆ ಎಷ್ಟು ಬ್ಲ್ಯಾಕ್ ಫಂಗಸ್ ಕೇಸ್? ಎಷ್ಟುಸಾವು? ಗುಣಮುಖವೆಷ್ಟು?
ಸಾಕಷ್ಟು ಔಷಧವಿದೆ:
ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1,564 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ. ಕೇಂದ್ರ ಸರ್ಕಾರವು 9,750 ವೈಯಲ್‌ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಇದರಲ್ಲಿ 8,860 ವೈಯಲ್ ಶುಕ್ರವಾರ ಬಂದಿದ್ದು, ಈವರೆಗೆ ಒಟ್ಟು 18,650 ವೈಯಲ್ ರಾಜ್ಯಕ್ಕೆ ದೊರೆತಿದೆ. ಸರ್ಕಾರಿ ಆಸ್ಪತ್ರೆಗಳಿಗೆ 8,860 ವೈಯಲ್‌ಗಳನ್ನು ಬಳಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೇರಿ ಬೇರೆ ಕಡೆಗಳಿಗೆ 9,740 ವೈಯಲ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜೂನ್ ಅಂತ್ಯಕ್ಕೆ 2.25 ಕೋಟಿ ಲಸಿಕೆ:
ರಾಜ್ಯದಲ್ಲಿ 70-75 ಲಕ್ಷ ಜನರಿಗೆ ಇದೇ ತಿಂಗಳಲ್ಲಿ ಲಸಿಕೆ ಹಾಕಲಾಗುವುದು. ರಾಜ್ಯದಲ್ಲಿ ಈವರೆಗೆ ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದು ಜೂನ್ ಅಂತ್ಯಕ್ಕೆ ರಾಜ್ಯದ 2.25 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ಆದಷ್ಟುಶೀಘ್ರದಲ್ಲೇ ಎಲ್ಲರಿಗೂ ಲಸಿಕೆ ದೊರೆಯಲಿದೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಒಂದೂವರೆ ಕೋಟಿ ಕೊರೋನಾ ಲಸಿಕೆ ಉಚಿತವಾಗಿಯೇ ನೀಡಿದ್ದೇವೆ. ಹೆಪಟೈಟಿಸ್-ಬಿ ಲಸಿಕೆ 1982ರಲ್ಲಿ ಪರಿಚಯವಾದರೂ, ಭಾರತಕ್ಕೆ 2002ರಲ್ಲಿ ಬಂತು. ಒಂದು ಲಸಿಕೆ ಬರಲು 20 ವರ್ಷ ಬೇಕಾಯಿತು. ಕೊರೋನಾ ಲಸಿಕೆ ದೇಶೀಯವಾಗಿಯೇ ತಯಾರಾಗಿದೆ. ಇದರಲ್ಲೂ ರಾಜಕಾರಣ ಮಾಡಿದರೆ ಜನರೇ ಛೀಮಾರಿ ಹಾಕುತ್ತಾರೆ ಎಂದರು. ಇದೇ ವೇಳೆ ಜೂನ್ ಅಂತ್ಯಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬಹುದು. ಆದರೆ ಎಲ್ಲರೂ ಕೊರೋನಾ ಸುರಕ್ಷತಾ ಕ್ರಮ ಪಾಲಿಸಬೇಕು ಎಂದು ಮನವಿ ಮಾಡಿದರು.