ಪಾಸಿಟಿವಿಟಿ 5%ಗಿಂತ ಕೆಳಗಿಳಿದರೆ ರಾಜ್ಯದಲ್ಲಿ ಅನ್ಲಾಕ್‌: ಬಿಎಸ್‌ವೈ

By Kannadaprabha NewsFirst Published Jun 6, 2021, 7:19 AM IST
Highlights

* ಕರ್ನಾಟಕದಲ್ಲೂ ಹಂತ ಹಂತವಾಗಿ ಅನ್‌ಲಾಕ್‌: ಸಿಎಂ

* ಪಾಸಿಟಿವಿಟಿ 5%ಗಿಂತ ಕೆಳಗಿಳಿದರೆ ಅನ್ಲಾಕ್‌

* ತಜ್ಞರ ಜೊತೆ ಚರ್ಚಿಸಿ ನಿರ್ಬಂಧ ಸಡಿಲಿಕೆ

ಬೆಂಗಳೂರು(ಜೂ.06): ಕೋವಿಡ್‌ ಸೋಂಕಿನ ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಗಿಳಿದ ನಂತರ ಹಂತ ಹಂತವಾಗಿ ಸೆಮಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಸುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಕ್‌ಡೌನ್‌ನ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವ ಬಗ್ಗೆ ತಜ್ಞರ ಜತೆ ಚರ್ಚಿಸಿ 4-5 ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಿರ್ಬಂಧಗಳನ್ನು ಯಾವ ರೀತಿಯಲ್ಲಿ ಸಡಿಲಿಕೆ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನು, ಕೋವಿಡ್‌ನ ಮೂರನೇ ಅಲೆ ನಿಯಂತ್ರಣಕ್ಕೆ ನಾರಾಯಣ್‌ ಹೆಲ್ತ್‌ ಮುಖ್ಯಸ್ಥ ಡಾ.ದೇವಿಶೆಟ್ಟಿಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯು ಇನ್ನು ಒಂದು ವಾರದಲ್ಲಿ ವರದಿ ನೀಡಲಿದೆ. ತಜ್ಞರ ವರದಿ ಸರ್ಕಾರದ ಕೈಸೇರಿದ ಬಳಿಕ ಅದರಲ್ಲಿ ನೀಡಿರುವ ಸಲಹೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಮೂರನೇ ಅಲೆ ತಡೆಗೆ ಸರ್ಕಾರವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧವಿದೆ. ತಜ್ಞರು ನೀಡುವ ಸಲಹೆಗಳ ಕುರಿತು ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಚರ್ಚೆ ನಡೆಸಿದ ಬಳಿಕ ಕ್ರಮ ಕೈಗೊಂಡು ರಾಜ್ಯವನ್ನು ಕೋವಿಡ್‌ ಮುಕ್ತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಕೊರೋನಾ ಮೊದಲ ಅಲೆಯಲ್ಲಿ ಲಾಕ್‌ಡೌನ್‌ನ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಕೆ ಮಾಡಿ ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರಲಾಯಿತು. ಅದೇ ರೀತಿಯಲ್ಲಿ ಎರಡನೇ ಅಲೆಯಲ್ಲಿಯೂ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಗೊಳಿಸುವ ಚಿಂತನೆ ನಡೆಸಲಾಗಿದೆ. ಒಂದು ವೇಳೆ ಎಲ್ಲಾ ನಿರ್ಬಂಧಗಳನ್ನು ತೆಗೆದರೆ ಕೋವಿಡ್‌ ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ಇದನ್ನು ತಡೆಯಲು ಹಂತ ಹಂತವಾಗಿ ಸಡಿಲಿಕೆ ಮಾಡುವ ಚಿಂತನೆ ಸರ್ಕಾರದ್ದಾಗಿದೆ ಎನ್ನಲಾಗಿದೆ.

click me!