ಖಾಸಗಿ ಆಸ್ಪತ್ರೆಯಲ್ಲಿ ಇಲ್ಲದಿದ್ರೆ ತಕ್ಷಣ ಪೂರೈಕೆ| 2ನೇ ಅಲೆ ಇನ್ನೂ ವ್ಯಾಪಿಸಿಲ್ಲ| ಸ್ವಯಂನಿರ್ಬಂಧ ವಿಧಿಸಿಕೊಂಡರೆ ಕ್ಷೇಮ| ಜನ ಕೆಲವು ಕಾರ್ಯಕ್ರಮಗಳನ್ನು 2-3 ತಿಂಗಳು ಮುಂದೆ ಹಾಕುವುದರಿಂದ ಜೀವ ಹೋಗುವುದಿಲ್ಲ: ಸಚಿವ ಸುಧಾಕರ್|
ಬೆಂಗಳೂರು(ಏ.16): ರಾಜ್ಯದಲ್ಲಿ ರೆಮ್‌ಡಿಸಿವಿರ್ ಔಷಧಿ ಹಾಗೂ ಆಕ್ಸಿಜನ್ ಕೊರತೆ ಇಲ್ಲ. ರಾಜ್ಯದಲ್ಲಿ ಇನ್ನೂ ಎರಡನೇ ಅಲೆ ಸಂಪೂರ್ಣ ವ್ಯಾಪಿಸಿಲ್ಲ. ಹೀಗಾಗಿ ಜನರೇ ಎಚ್ಚೆತ್ತುಕೊಂಡು ಕಠಿಣ ನಿರ್ಬಂಧ ವಿಧಿಸಿಕೊಂಡರೆ ಕೊರೋನಾವನ್ನು ತಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಸರ್ಕಾರಿ ಸಂಸ್ಥೆಗಳಲ್ಲಿ ರೆಮ್‌ಡಿಸಿವಿರ್ ಕೊರತೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ರೆಮ್ ಡಿಸಿವರ್ ಇಂಜೆಕ್ಷನ್ ಕೊರತೆ ಇದೆ ಎನ್ನಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಕೊರತೆ ಇದ್ದಲ್ಲಿ ತಕ್ಷಣ ವ್ಯವಸ್ಥೆ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಅಕ್ಟೋಬರ್‌ನಿಂದ ಕೊರೋನಾ ಕಡಿಮೆಯಾಗಿರುವುದರಿಂದ ರೆಮ್‌ಡಿಸಿವಿರ್ ಇಡೀ ದೇಶದಲ್ಲಿ ತಯಾರಿಕೆ ಕಡಿಮೆ ಆಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಚುಚ್ಚುಮದ್ದು ಕೊರತೆ ಆಗಿಲ್ಲ, ಇದರಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಸೇರಿಕೊಂಡು ಒಟ್ಟಾಗಿ ಹೋರಾಟ ಮಾಡಿದರೆ ಕೊರೋನಾ ಎದುರಿಸಬಹುದು’ ಎಂದರು.
'ಕೊರೋನಾ ನಿಯಂತ್ರಣಕ್ಕೆ ಜನತೆ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಿ'
ಸಾವಿನ ಪ್ರಮಾಣ ಕಡಿಮೆಗೆ ಕಠಿಣ ಕ್ರಮ:
ಸಾವಿನ ಪ್ರಮಾಣ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಾವಿನ ಪ್ರಮಾಣವನ್ನು ಎಷ್ಟುಸೋಂಕಿತರಲ್ಲಿ ಎಷ್ಟುಜನರ ಸಾವಾಗಿದೆ ಎಂಬುದರ ಆಧಾರದ ಮೇಲೆ ಅಳೆಯಬೇಕು. ನಮ್ಮ ರಾಜ್ಯದಲ್ಲಿ ಸಾವಿನ ಪ್ರಮಾಣ ಅರ್ಧದಷ್ಟೂಇಲ್ಲ. ಸಾವಿನ ಪ್ರಮಾಣ ಸದ್ಯ ಶೇ.0.5 ಅಥವಾ 0.6 ರಷ್ಟು ಮಾತ್ರ ಇದೆ. ಇದನ್ನು ಇನ್ನಷ್ಟುಕಡಿಮೆ ಮಾಡುವ ಗುರಿ ಇದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು’ ಎಂದು ತಿಳಿಸಿದರು.
‘ವಲಯವಾರು ಕೊರೊನಾ ನಿಯಂತ್ರಣಕ್ಕೆ ಸಚಿವರು ಶ್ರಮ ಹಾಕುತ್ತಿದ್ದಾರೆ. ಜನರ ಸಹಭಾಗಿತ್ವ ಸಹ ಅಗತ್ಯ, ಅನೇಕ ರಾಜ್ಯಗಳಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ನಮ್ಮ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗುವುದು ಬೇಡ. ಇನ್ನು ಬೇರೆ ರಾಜ್ಯಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸಹ ಪರಿಶೀಲಿಸುತ್ತಿದ್ದೇವೆ. ಲಾಕ್‌ಡೌನ್, ಕರ್ಫ್ಯೂ ಬಗ್ಗೆ ಬೇರೆ ರಾಜ್ಯಗಳು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಗಮನಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸೇರಿದಂತೆ ಎಲ್ಲರೂ ಅವರ ವಲಯಗಳಲ್ಲಿ ಗಮನಿಸುತ್ತಿದ್ದಾರೆ. ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಜನರ ಸಹಕಾರ ಅಗತ್ಯ. ಜನ ಕೆಲವು ಕಾರ್ಯಕ್ರಮಗಳನ್ನು 2-3 ತಿಂಗಳು ಮುಂದೆ ಹಾಕುವುದರಿಂದ ಜೀವ ಹೋಗುವುದಿಲ್ಲ’ ಎಂದರು.
ಕುಂಭಮೇಳದಿಂದ ಬಂದವರಿಗೆ ಕೊರೋನಾ ಟೆಸ್ಟ್
ಹರಿದ್ವಾರದಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ಕೊರೋನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಯಾತ್ರಿಗಳು ರಾಜ್ಯಕ್ಕೆ ವಾಪಸಾದ ಬಳಿಕ ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿದ್ದು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಕೊರೊನಾ ಪರೀಕ್ಷೆ ವರದಿಯಲ್ಲಿ ನೆಗೆಟಿವ್ ಬಂದ ನಂತರವಷ್ಟೇ ನಂತರವಷ್ಟೇ ಯಾತ್ರಿಕರು ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಬೇಕೆಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ.