ಮುಷ್ಕರದಿಂದ ಸಾರಿಗೆ ನಿಗಮಗಳಿಗೆ 152 ಕೋಟಿ ಆದಾಯ ಖೋತಾ..!

By Kannadaprabha NewsFirst Published Apr 15, 2021, 9:11 AM IST
Highlights

ಮುಷ್ಕರದಿಂದಾಗಿ 8 ದಿನದಲ್ಲಿ ಆದಾಯ ಖೋತಾ| ನಿತ್ಯ ಟಿಕೆಟ್‌ನಿಂದ 19 ಕೋಟಿ ರು. ಆದಾಯ| ಈಗ ಈ ಆದಾಯವಿಲ್ಲದೇ ಭಾರಿ ಹಾನಿ| ಏಪ್ರಿಲ್‌ ತಿಂಗಳ ವೇತನ ಪಾವತಿಗೆ ಮತ್ತೆ ಸರ್ಕಾರದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ| 

ಬೆಂಗಳೂರು(ಏ.15): ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಈವರೆಗೆ ಒಟ್ಟು 152 ಕೋಟಿ ರು. ಆದಾಯ ನಷ್ಟವುಂಟಾಗಿದೆ.

ನಾಲ್ಕೂ ನಿಗಮಗಳಿಂದ ಪ್ರತಿದಿನ ಪ್ರಯಾಣ ಟಿಕೆಟ್‌ನಿಂದ 19 ಕೋಟಿ ರು.ಗೂ ಹೆಚ್ಚಿನ ಆದಾಯ ಬರುತ್ತದೆ. ಆದರೆ, ಮುಷ್ಕರ ಆರಂಭವಾದಾಗಿನಿಂದ ಬಸ್ಸುಗಳ ಓಡಾಟ ಸ್ತಬ್ಧವಾಗಿರುವುದರಿಂದ ನಿತ್ಯ ಆದಾಯ ಖೋತಾ ಆಗುತ್ತಿದೆ. ಕಳೆದ 8 ದಿನಗಳಿಂದ ನಾಲ್ಕೂ ನಿಗಮಗಳಿಗೆ ಒಟ್ಟಾರೆ 152 ಕೋಟಿ ರು. ಆದಾಯ ನಷ್ಟವಾಗಿದೆ. ಈ ಪೈಕಿ ಕೆಎಸ್‌ಆರ್‌ಟಿಸಿಗೆ 70 ಕೋಟಿ ರು., ಬಿಎಂಟಿಸಿಗೆ 20 ಕೋಟಿ ರು., ಈಶಾನ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 30.5 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಮಗಕ್ಕೆ 31.5 ಕೋಟಿ ರು. ಆದಾಯ ನಷ್ಟವಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನಿಲ್ಲದ ಸಾರಿಗೆ ಮುಷ್ಕರ: ಮತ್ತೆ 121 ನೌಕರರ ಅಮಾನತು

ಆರ್ಥಿಕ ಸಂಕಷ್ಟ:

ಕೊರೋನಾ ಸೋಂಕಿನ ಕಾರಣದಿಂದಾಗಿ ಸಾರಿಗೆ ನಿಗಮಗಳು ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದವು. ಇದೀಗ ನೌಕರರ ಮುಷ್ಕರದಿಂದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. 2020ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ನಾಲ್ಕೂ ನಿಗಮಗಳು 2 ಸಾವಿರ ಕೋಟಿ ರು.ಗೂ ಹೆಚ್ಚಿನ ಆರ್ಥಿಕ ನಷ್ಟಅನುಭವಿಸಿವೆ. ಕೊರೋನಾ ಮುನ್ನ ನಾಲ್ಕೂ ನಿಗಮಗಳ ಪೈಕಿ ಕೆಎಸ್ಸಾರ್ಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಾದ ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಒಟ್ಟು 2 ಸಾವಿರ ಕೋಟಿ ರು. ಗೂ ಹೆಚ್ಚಿನ ನಷ್ಟದಲ್ಲಿದ್ದವು. ಒಟ್ಟಾರೆ ನಾಲ್ಕೂ ನಿಗಮಗಳು 4 ಸಾವಿರ ಕೋಟಿ ರು. ಗೂ ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು.

ಹೀಗಾಗಿ 2020ರಲ್ಲಿ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಸಿಬ್ಬಂದಿಗೆ ವೇತನ ಪಾವತಿಸಲು ಸರ್ಕಾರದಿಂದ ನೆರವು ಪಡೆಯಲಾಗಿತ್ತು. ಇದೀಗ ಸಾರಿಗೆ ನೌಕರರ ಮುಷ್ಕರದಿಂದ ನಿಗಮಗಳು ಆದಾಯ ಖೋತಾ ಆಗಿದೆ. ಅದರ ಪರಿಣಾಮ ಬಸ್‌ಗಳ ನಿರ್ವಹಣೆ, ಅಧಿಕಾರಿಗಳ ವೇತನ ಪಾವತಿ ಸೇರಿ ಇನ್ನಿತರ ವೆಚ್ಚಕ್ಕೂ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿಯೇ 10 ಸಾವಿರ ಚಾಲಕ ಮತ್ತು ನಿರ್ವಾಹಕರನ್ನು ಹೊರತುಪಡಿಸಿ ಉಳಿದ 50 ಸಾವಿರ ಚಾಲಕ ಮತ್ತು ನಿರ್ವಾಹಕರಿಗೆ ಮಾರ್ಚ್‌ ತಿಂಗಳ ವೇತನ ಪಾವತಿ ಸಾಧ್ಯವಾಗಿಲ್ಲ. ಏಪ್ರಿಲ್‌ ತಿಂಗಳ ವೇತನ ಪಾವತಿಗೆ ಮತ್ತೆ ಸರ್ಕಾರದ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಯಾವುದಕ್ಕೆ ಎಷ್ಟು? ಸಂಸ್ಥೆ ಆದಾಯ ನಷ್ಟ

ಕೆಎಸ್‌ಆರ್‌ಟಿಸಿ 70 ಕೋಟಿ
ಬಿಎಂಟಿಸಿಗೆ 20 ಕೋಟಿ
ಈಶಾನ್ಯ ಸಾರಿಗೆ 30.5 ಕೋಟಿ
ವಾಯುವ್ಯ ಸಾರಿಗೆ 31.5 ಕೋಟಿ
 

click me!