Covid Crisis: ಕರ್ನಾಟಕದಲ್ಲಿ 4ನೇ ಅಲೆ ಭೀತಿ: ಸಚಿವ ಸುಧಾಕರ್‌ ಹೇಳಿದ್ದಿಷ್ಟು

By Girish Goudar  |  First Published Apr 21, 2022, 7:37 AM IST

*  ಇನ್ನೂ 4ನೇ ಅಲೆ ಕಾಲಿಟ್ಟಿಲ್ಲ
*  ಜನ ಕೋವಿಡ್‌ ನಿಯಮ ಪಾಲಿಸಬೇಕು
*  ಜನರು ನಿಯಮ ಪಾಲನೆ ಮರೆತಿದ್ದಾರೆ 
 


ಬೆಂಗಳೂರು(ಏ.21): ರಾಜ್ಯಕ್ಕೆ ಕೋವಿಡ್‌ ನಾಲ್ಕನೇ ಅಲೆ(Covid 4th Wave) ಇನ್ನೂ ಕಾಲಿಟ್ಟಿಲ್ಲ. ಆದರೆ ಕೋವಿಡ್‌ನ ಹೊಸ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕಳೆದೊಂದು ವಾರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನಿಸಿ ರಾಜ್ಯದಲ್ಲಿ(Karnataka) ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಇಲಾಖೆಯ(Department of Health) ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನಿಸುತ್ತದೆ ಎಂದರು.

Latest Videos

ಕೋವಿಡ್‌ 4ನೇ ಅಲೆಯ ಮುನ್ಸೂಚನೆ: ದೇಶದಲ್ಲಿ ಕೋವಿಡ್‌ ಪ್ರಸರಣ ವೇಗ 3 ತಿಂಗಳ ಗರಿಷ್ಠಕ್ಕೆ ಏರಿಕೆ

ಜನರ ಸುರಕ್ಷತಾ ದೃಷ್ಟಿಯಿಂದ ಮಾಸ್ಕ್‌ ಧರಿಸುವುದು ಹಾಗೂ ಕೋವಿಡ್‌ ಮೂರನೇ ಡೋಸ್‌ ಪಡೆಯಲು ಸೂಚಿಸಲಾಗಿದೆ. ಆದರೆ ಇದನ್ನು ಹೆಚ್ಚಿನವರು ಪಾಲಿಸುತ್ತಿಲ್ಲ. ಇನ್ನೂ 29-30 ಲಕ್ಷ ಜನರು ಎರಡನೇ ಡೋಸ್‌ ಪಡೆಯಬೇಕಿದೆ. ಮೊದಲ ಡೋಸ್‌ ಪಡೆದವರ ಪ್ರಮಾಣ ಶೇ. 100 ದಾಟಿದೆ. 12 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಿನವರು ಲಸಿಕೆ ಪಡೆಯಲು ಬಾಕಿ ಇದ್ದು ಪೋಷಕರು ಈ ಬಗ್ಗೆ ಗಮನ ನೀಡಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಕ್ರಮ ವಹಿಸಲಾಗಿದೆ. ಆದರೂ ಬೇರೆ ರಾಜ್ಯಗಳಲ್ಲಿ ಸೋಂಕು ಹೆಚ್ಚಾದಾಗ ಸಹಜವಾಗಿ ಹರಡುತ್ತದೆ. ಆದ್ದರಿಂದ ಜನರು ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.

ಭ್ರಷ್ಟಾಚಾರ ಹುಟ್ಟುಹಾಕಿದ ಪಕ್ಷ ಕಾಂಗ್ರೆಸ್‌:

ಕಾಂಗ್ರೆಸ್‌(Congress) ಇಡೀ ದೇಶದಲ್ಲಿ ಭ್ರಷ್ಟಾಚಾರವನ್ನು(Corruption) ಹುಟ್ಟುಹಾಕಿದ ಪಕ್ಷವಾಗಿದೆ. ಕಾಂಗ್ರೆಸ್ಸಿಗರು ಇದೇ ಭ್ರಷ್ಟಾಚಾರದ ಆರೋಪವನ್ನು ಮಾಡಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ವಿಫಲರಾದಂತೆಯೇ ಕರ್ನಾಟಕದಲ್ಲೂ ಅವರು ವಿಫಲರಾಗುವುದು ಖಚಿತ ಎಂದು ಸುಧಾಕರ್‌ ಹೇಳಿದ್ದಾರೆ.

61 ಕೋವಿಡ್‌ ಕೇಸು, 49 ಮಂದಿ ಗುಣ

ರಾಜ್ಯದಲ್ಲಿ ಬುಧವಾರ 61 ಮಂದಿಯಲ್ಲಿ ಕೋವಿಡ್‌(Covid-19) ಸೋಂಕು ದೃಢಪಟ್ಟಿದ್ದು 49 ಮಂದಿ ಚೇತರಿಸಿಕೊಂಡಿದ್ದಾರೆ. ಯಾವುದೇ ಸಾವು ವರದಿಯಾಗಿಲ್ಲ.

ದೆಹಲಿಯಲ್ಲಿ ಮತ್ತೆ ಮಾಸ್ಕ್ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ₹500 ದಂಡ

ರಾಜ್ಯದಲ್ಲಿ ಕಳೆದ 12 ದಿನಗಳಿಂದ ಕೋವಿಡ್‌ ಸಾವು ವರದಿಯಾಗಿಲ್ಲ ಎಂಬುದು ಗಮನಾರ್ಹ. ಕೋವಿಡ್‌ ದೈನಂದಿನ ಪರೀಕ್ಷೆಯಲ್ಲಿ ತುಸು ಹೆಚ್ಚಳವಾಗಿದ್ದು ಬುಧವಾರ 9,704 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ. ಶೇ. 0.62ರ ಪಾಸಿಟಿವಿಟಿ ದರ ದಾಖಲಾಗಿದೆ. ಕಳೆದ ನಾಲ್ಕು ದಿನಗಳಿಂದ ಕೋವಿಡ್‌ನಿಂದ ಚೇತರಿಸಿಕೊಂಡವರಿಗಿಂತ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,499ಕ್ಕೆ ಏರಿಕೆ ಕಂಡಿದೆ. ಏ. 8 ರಂದು ಗದಗದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ವರದಿಯಾದ ಬಳಿಕ ಕೋವಿಡ್‌ನಿಂದ ಮೃತಪಟ್ಟಪ್ರಕರಣ ವರದಿಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.46 ಲಕ್ಷ ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,057 ಮಂದಿ ಮರಣವನ್ನಪ್ಪಿದ್ದಾರೆ.

62 ಸಾವಿರ ಮಂದಿಗೆ ಲಸಿಕೆ:

ಬುಧವಾರ 62,387 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 10,835 ಮಂದಿ ಮೊದಲ ಡೋಸ್‌, 37,222 ಮಂದಿ ಎರಡನೇ ಡೋಸ್‌ ಮತ್ತು 16,408 ಮಂದಿ ಮೂರನೇ ಡೋಸ್‌ ಲಸಿಕೆ(Vaccine)  ಪಡೆದಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 10.54 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

click me!