Anti Conversion Bill: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಒಂದಷ್ಟು ಮಾಹಿತಿ ಬಿಚ್ಚಿಟ್ಟ ಕಾನೂನು ಸಚಿವ

By Suvarna News  |  First Published Dec 12, 2021, 11:25 PM IST

* ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಮತಾಂತರ ನಿಷೇಧ ಕಾಯ್ದೆ
* ಚಳಿಗಾಲದ ಅಧಿವೇಶನದಲ್ಲಿ  ಮತಾಂತರ ನಿಷೇಧ ಮಸೂದೆ ಪ್ರಸ್ತಾಪ ಸಾಧ್ಯತೆ
* ಮತಾಂತರ ನಿಷೇಧ ಕಾಯ್ದೆ ಬಗ್ಗೆ ಒಂದಷ್ಟು ಮಾಹಿತಿ ಬಿಚ್ಚಿಟ್ಟ ಕಾನೂನ 


ತುಮಕೂರು,(ಡಿ.12) : ರಾಜ್ಯದಲ್ಲಿ  ಮತಾಂತರ ನಿಷೇಧ ಕಾಯ್ದೆ(Anti Conversion Bill) ಭಾರಿ ಸದ್ದು ಮಾಡುತ್ತಿದ್ದು, ಜಾರಿಗೆ ತರುವ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ನಾಳೆ(ಡಿ.13) ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ (Winter Session)  ಮತಾಂತರ ನಿಷೇಧ ಮಸೂದೆ ಪ್ರಸ್ತಾಪವಾಗಲಿದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಇನ್ನು ಮತಾಂತರ ನಿಷೇಧ ಕಾಯ್ದೆ ಬಂದರೆ ಏನೆಲ್ಲಾ ಕಾನೂನುಗಳು ಬದಲಾಗಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ. ಇನ್ನು ಈ ಬಗ್ಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ (JC Madhuswamy) ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ.

Tap to resize

Latest Videos

Anti Conversion Bill: ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಈ ಕಾಯ್ದೆಯಲ್ಲಿರೋ ಅಂಶಗಳೇನು.?

ತುಮಕೂರು(Tumakuru) ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದಲ್ಲಿ ಇಂದು (ಭಾನುವಾರ) ಸುದ್ದಿಗಾರರ ಜತೆ ಮಾತನಾಡಿದ ಅವರು, ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನು ಕೂಡ ನೋಂದಣಿ ಮಾಡುವಂಥ ಪದ್ಧತಿಯನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ತರುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದರು.

ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡ್​ಗೆ ವಿವಾಹಿತರ ವಿವರ ಹಾಕುತ್ತೇವೆಯೋ ಹಾಗೆಯೇ ಮತಾಂತರಗೊಂಡವರ ವಿವರವನ್ನೂ ನೋಟಿಸ್​ ಬೋರ್ಡ್​​ಗೆ ಹಾಕಿ ಆಕ್ಷೇಪಣೆಗೆ ಸಮಯಾವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂಥವರ ಅರ್ಜಿ ಪುರಸ್ಕರಿಸಲಾಗುತ್ತದೆ. ಅದೇ ರೀತಿ ಮತಾಂತರ ಪ್ರಕ್ರಿಯೆ ಕೂಡ ಬರುವಂತೆ ಮಾಡಲಾಗುವುದು ಎಂದು ಹೇಳಿದರು.

Religious Conversion: ಮತಾಂತರ ನಿಷೇಧ ಕಾಯ್ದೆ ಮಂಡನೆ ಸುಳಿವು ಬಿಟ್ಟುಕೊಟ್ಟ ಸಿಎಂ ಬೊಮ್ಮಾಯಿ

ಯಾರಿಗೂ ನೋವು ಆಗದ, ಅಡಚಣೆ ಆಗದ ರೀತಿಯಲ್ಲಿ ಕಾಯ್ದೆ ಇರಬೇಕು ಎಂದು ಯೋಚಿಸಿದ್ದೇನೆ. ಆ ನಿಟ್ಟಿನಲ್ಲಿ ಪರಾಮರ್ಶೆ ನಡೆದಿದೆ. ಬಲವಂತ ಹಾಗೂ ಆಮಿಷವೊಡ್ಡಿ ಮಾಡುವ ಮತಾಂತರ ಈಗಾಗಲೇ ನಿಷೇಧ ಇದ್ದು ಮತಾಂತರ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಎನ್ನುವುದು ಚರ್ಚೆ ನಡೆಯಬೇಕಿದೆ ಎಂದರು.

 ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ಮತಾಂತರ ಆಗುವವನೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲ ಎಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದು ಎಂದು ತಿಳಿಸಿದರು.

ಜತೆಗೆ, ಒಮ್ಮೆ ಮತಾಂತರಗೊಂಡ ವ್ಯಕ್ತಿ ಮೂಲ ಜಾತಿ,-ಧರ್ಮವನ್ನು ಕಳೆದುಕೊಳ್ಳುತ್ತಾನೆ. ಪರಿಶಿಷ್ಟ ಜಾತಿಯ ವ್ಯಕ್ತಿ ಕ್ರಿಶ್ಚಿಯನ್​ಗೆ ಮತಾಂತರಗೊಂಡರೆ ಆತ ಅಲ್ಪಸಂಖ್ಯಾತ ಎಂದಾಗುತ್ತಾನೆ‌. ಮತಾಂತರಗೊಂಡ ಬಳಿಕ ಆತನ ಮೂಲ ಜಾತಿ ಪ್ರಮಾಣಪತ್ರ ಬದಲಾಗುತ್ತದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.

ಹಲವು ಮಠಾಧೀಶರು ಮತ್ತು ಹಿಂದೂಪರ ಸಂಘಟನೆಗಳು ಮತಾಂತರ ನಿಷೇಧ ಕಾಯ್ಗೆ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದರೆ, ಮತಾಂತರ ನಿಷೇಧ ಕಾನೂನು ತರಬಾರದು ಎಂದು ಹಲವು ಕ್ರೈಸ್ತ ಮಿಷನರಿಗಳು, ಪಾದ್ರಿಗಳು ಸರ್ಕಾರವನ್ನು ಆಗ್ರಹಿಸುತ್ತಿವೆ. ಈ ಕುರಿತು ಮುಖ್ಯಮಂತ್ರಿಗಳನ್ನು ಸಹ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸಿಎಂ ಹೇಳಿದ್ದೇನು?
ಈ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತಾಂತರ ನಿಷೇಧ ಕಾಯ್ದೆ ಕರಡಿಗೆ ಒಪ್ಪಿಗೆ ನೀಡಿ ಅದನ್ನು ನಾವು ಅಧಿವೇಶನದಲ್ಲಿ ತರುತ್ತೇವೆ ಎಂದಿದ್ದಾರೆ. ಮತಾಂತರ ನಿಷೇಧ ಸಮಾಜಕ್ಕೆ ಒಳ್ಳೆಯದಲ್ಲ, ಮಾರಕ, ಕ್ರೈಸ್ತ, ಮುಸ್ಲಿಂ, ಬೌದ್ಧ, ಸಿಖ್ ಧರ್ಮದವರಿಗೆ ಈ ಬಗ್ಗೆ ಆತಂಕ ಬೇಡ ಎಂದು ಕೂಡ ಸಿಎಂ ಹೇಳಿದ್ದಾರೆ.

ಮತಾಂತರ ಸಮಾಜಕ್ಕೆ ಎಷ್ಟು ಮಾರಕ ಎಂಬ ಬಗ್ಗೆ ವ್ಯಾಖ್ಯಾನ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕ್ರೈಸ್ತ, ಮುಸಲ್ಮಾನ, ಸಿಖ್, ಬೌಧ್ಧ, ಹಿಂದೂ ಹೀಗೆ ಈ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ಗುರುತು ಪಡೆದಿರುವ ಧರ್ಮಗಳು. ಅವುಗಳಿಗೆ, ಆ ಜನಾಂಗದವರಿಗೆ ಯಾವುದೇ ಆತಂಕ ಬೇಡ, ಅವರ ಪ್ರಾರ್ಥನೆ, ಅವರ ಧರ್ಮ, ನಂಬಿಕೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ, ಆದರೆ ಬಡತನ, ಜನರ ಕಷ್ಟದ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು ಆಸೆ, ಆಮಿಷಗಳನ್ನೊಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಈ ಚರ್ಚೆಯ ಸ್ವರೂಪದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಕಾನೂನು ಜಾರಿಗೆ ಬಂದಿದೆ ಎಂದರು.

click me!