
ಬೆಂಗಳೂರು(ಮಾ.24): ಕೋವಿಡ್ ಸಾಂಕ್ರಮಿಕದ ಸಂಕಷ್ಟದಿಂದ ಇತ್ತೀಚೆಗೆ ಚೇತರಿಸಿಕೊಳ್ಳುತ್ತಿರುವ ಕೈಗಾರಿಕೆಗಳ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಧಿಸುವ ಸಮ್ಮತಿ ಶುಲ್ಕವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಸ್ತಾವನೆ ಮರುಪರಿಶೀಲಿಸುವಂತೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಜಂಟಿಯಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಪರಿಸರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶೆಟ್ಟರ್ ಅವರು ಈ ಸೂಚನೆ ನೀಡಿದರು.
ಕಳೆದ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಹೊರಡಿಸಿರುವ ಪ್ರಸ್ತಾವನೆಯಲ್ಲಿ ಸಮ್ಮತಿ ಶುಲ್ಕವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳನ್ನು ನಡೆಸಲು ಹಾಗೂ ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸಲು ತೊಂದರೆ ಆಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯದ ಹಲವಾರು ಕಂಪನಿಗಳು ಹಾಗೂ ಕೈಗಾರಿಕಾ ಸಂಘಗಳು ಮನವಿ ನೀಡಿದ್ದವು. ಯಾವುದೇ ಶುಲ್ಕ ಹೆಚ್ಚಿಸುವ ಸಂದರ್ಭದಲ್ಲಿ ಆಗಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ. ಕೋವಿಡ್ ನಂತರ ನಿಧಾನವಾಗಿ ಕೈಗಾರಿಕೆಗಳ ಚೇತರಿಸಿಕೊಳ್ಳುತ್ತಿವೆ. ಅಲ್ಲದೆ, ನೂತನ ಕೈಗಾರಿಕೆಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗುತ್ತಿವೆ. ಇಂತಹ ಸಂದರ್ಭಲ್ಲಿ ಅಗಾಧ ಪ್ರಮಾಣದಲ್ಲಿ ಶುಲ್ಕವನ್ನು ಹೆಚ್ಚಿಸುವುದು ಸರಿಯಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಸ್ತಾಪವನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು.
ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕೆಲಸ ನೀಡದಿದ್ದರೆ ಕಠಿಣ ಕ್ರಮ: ಶೆಟ್ಟರ್
ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬಹಳಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹಲವಾರು ಕೈಗಾರಿಕೆಗಳು ಬಂಡವಾಳ ಹೂಡಲು ಮುಂದಾಗುತ್ತಿರುವ ಸಂದರ್ಭದಲ್ಲಿ ಇಂತಹ ಪ್ರಸ್ತಾವನೆಗಳು ಬೇರೆ ರೀತಿಯ ಸಂದೇಶ ರವಾನಿಸುತ್ತವೆ. ಕೈಗಾರಿಕೆಗಳು ಹಾಗೂ ಬಂಡವಾಳ ಆಕರ್ಷಣೆ ಹೆಚ್ಚಿಸಲು ಈ ಶುಲ್ಕದ ಬಗ್ಗೆ ಮರುಪರಿಶೀಲಿಸಿ ರಾಜ್ಯದಲ್ಲಿ ಪ್ರಸ್ತುತ ಇರುವ ಕೈಗಾರಿಕೆಗಳಿಗೆ ಅನುಕೂಲವಾಗುವ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ ದವೆ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣಾ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ