ಸೀಡಿ ಗ್ಯಾಂಗ್‌ಗೆ ಕನಕಪುರ ಉದ್ಯಮಿ ರಕ್ಷಣೆ, ಆತಿಥ್ಯ?

By Kannadaprabha NewsFirst Published Mar 24, 2021, 7:51 AM IST
Highlights

ಸೀಡಿ ಗ್ಯಾಂಗ್‌ಗೆ ಕನಕಪುರ ಉದ್ಯಮಿ ರಕ್ಷಣೆ, ಆತಿಥ್ಯ?| ಪ್ರಕರಣ ಬಯಲಾಗುತ್ತಿದ್ದಂತೆ ಉದ್ಯಮಿ ನಾಪತ್ತೆ| ಹೊರರಾಜ್ಯದಲ್ಲಿದ್ದುಕೊಂಡೇ ಎಲ್ಲ ರೀತಿ ನೆರವು

ಬೆಂಗಳೂರು(ಮಾ.24): ಮಾಜಿ ಸಚಿವರ ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ಬಲೆಗೆ ಸಿಲುಕದೆ ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿರುವ ವಿವಾದಿತ ಯುವತಿ ಹಾಗೂ ಸಿ.ಡಿ. ಸ್ಫೋಟದ ತಂಡಕ್ಕೆ ಆತಿಥ್ಯದ ಹೊಣೆಯನ್ನು ರಾಮನಗರ ಜಿಲ್ಲೆ ಕನಕಪುರ ಮೂಲದ ಗ್ರಾನೈಟ್‌ ಉದ್ಯಮಿಯೊಬ್ಬ ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಲೈಂಗಿಕ ವಿವಾದ ಬಯಲಾದ ಬಳಿಕ ಗ್ರಾನೈಟ್‌ ಉದ್ಯಮಿ, ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಶಿವಕುಮಾರ್‌ ಅಲಿಯಾಸ್‌ ಕೇಶವ್‌ ಸಹ ನಾಪತ್ತೆಯಾಗಿದ್ದಾನೆ. ಸಿ.ಡಿ. ಸ್ಫೋಟದ ಮಾಸ್ಟರ್‌ ಮೈಂಡ್‌ ಎನ್ನಲಾದ ನರೇಶ್‌ಗೌಡನಿಗೆ ಹಣಕಾಸು ನೆರವು ನೀಡಿದ ಶಂಕೆ ಮೇರೆಗೆ ಉದ್ಯಮಿ ಮನೆ ಮೇಲೆ ಎಸ್‌ಐಟಿಯು ದಾಳಿ ಕೂಡ ನಡೆಸಿತ್ತು. ಈಗ ಹೊರ ರಾಜ್ಯದಲ್ಲಿದ್ದುಕೊಂಡೇ ನರೇಶ್‌ ತಂಡಕ್ಕೆ ಗ್ರಾನೈಟ್‌ ಉದ್ಯಮಿ ನೆರವು ಮುಂದುವರೆಸಿದ್ದಾನೆ. ಆತಿಥ್ಯದ ಉಸ್ತುವಾರಿಗೆ ತನ್ನ ಕಾರು ಚಾಲಕ ಪರಶಿವಮೂರ್ತಿ ಎಂಬಾತನನ್ನು ನಿಯೋಜಿಸಿದ್ದಾನೆ ಎನ್ನಲಾಗುತ್ತಿದೆ.

ನಗದು ರೂಪದಲ್ಲೇ ವ್ಯವಹಾರ:

ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ನರೇಶ್‌ಗೌಡ ತಂಡ ಹಾಗೂ ಆತನಿಗೆ ಆಶ್ರಯದಾತರು ಹಣಕಾಸು ವ್ಯವಹಾರವನ್ನು ನಗದು ರೂಪದಲ್ಲಿ ನಡೆಸಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ. ಎಟಿಎಂ ಕಾರ್ಡ್‌ ಬಳಸಿದರೆ ಪೊಲೀಸರಿಗೆ ಮಾಹಿತಿ ಸಿಗಬಹುದು ಎಂಬ ಆತಂಕದಿಂದ ಜಾಗ್ರತೆ ವಹಿಸಿರುವ ಆರೋಪಿಗಳು, ತಮ್ಮ ಸಾರಿಗೆ ಹಾಗೂ ವಸತಿ, ಖರ್ಚು- ವೆಚ್ಚಗಳಿಗೆ ನಗದು ರೂಪದಲ್ಲಿ ವ್ಯಯಿಸುತ್ತಿದ್ದಾರೆ. ಸಿ.ಡಿ. ಸ್ಫೋಟದ ಬಳಿಕ ತಮಗೆ ತೊಂದರೆ ಎದುರಾಗಬಹುದು ಎಂದು ಅಂದಾಜಿಸಿಯೇ ಪೂರ್ವಯೋಜಿತವಾಗಿ ಹಣಕಾಸು ವ್ಯವಸ್ಥೆಯನ್ನು ಅವರು ಮಾಡಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!