ಲಾಕ್‌ಡೌನ್‌ ಸಂಕಷ್ಟ: ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರಕ್ಕೆ ಮತ್ತೆ ಅವಕಾಶ

By Kannadaprabha NewsFirst Published Sep 25, 2020, 3:03 PM IST
Highlights

ಪ್ರಸ್ತುತ ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಂದ 2.46 ಲಕ್ಷ ಅರ್ಜಿ ಬಂದಿದೆ. ಇವುಗಳಲ್ಲಿ 2.14 ಲಕ್ಷ ಜನರಿಗೆ ಪರಿಹಾರ ನೀಡಲಾಗಿದೆ. ನಮಗೆ ಅರ್ಜಿಯೇ ಬಂದಿಲ್ಲ ಎಂದರೆ ಮನೆ-ಮನೆಗೆ ಹೋಗಿ ಕೊಡಲು ಆಗುವುದಿಲ್ಲ. ಅರ್ಹರು ಅರ್ಜಿ ಸಲ್ಲಿಸದಿದ್ದರೆ ಅವರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ಸಚಿವ ಮಾಧುಸ್ವಾಮಿ| 

ಬೆಂಗಳೂರು(ಸೆ.25): ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಿಸಿದ್ದ ತಲಾ 5 ಸಾವಿರ ರು. ಪರಿಹಾರ ಬಹುತೇಕರಿಗೆ ತಲುಪಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌಲಭ್ಯ ಪಡೆಯದ ಅರ್ಹರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ.

ಪ್ರಸ್ತುತ ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಂಂದ 2.46 ಲಕ್ಷ ಅರ್ಜಿ ಬಂದಿದೆ. ಇವುಗಳಲ್ಲಿ 2.14 ಲಕ್ಷ ಜನರಿಗೆ ಪರಿಹಾರ ನೀಡಲಾಗಿದೆ. ನಮಗೆ ಅರ್ಜಿಯೇ ಬಂದಿಲ್ಲ ಎಂದರೆ ಮನೆ-ಮನೆಗೆ ಹೋಗಿ ಕೊಡಲು ಆಗುವುದಿಲ್ಲ. ಅರ್ಹರು ಅರ್ಜಿ ಸಲ್ಲಿಸದಿದ್ದರೆ ಅವರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಡಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ. 

ಕೊರೋನಾ ಸಂಕಷ್ಟ: 4008 ಕೋಟಿ ಪೂರಕ ಅಂದಾಜಿಗೆ ಒಪ್ಪಿಗೆ

ವಿಧಾನಸಭೆಯಲ್ಲಿ ಪೂರಕ ಅಂದಾಜುಗಳ ಧನ ವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ವೇಳೆ, ವಿರೋಧಪಕ್ಷದ ಸದಸ್ಯರ ಜೊತೆಗೆ ಆಡಳಿತ ಪಕ್ಷದ ಸದಸ್ಯರೂ ಸಹ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ತಲುಪಿಲ್ಲ ಎಂದು ಆರೋಪಿಸಿದರು.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮುಖ್ಯಮಂತ್ರಿಗಳು ಏಪ್ರಿಲ್‌ ತಿಂಗಳಲ್ಲಿ ಪರಿಹಾರ ಘೋಷಿಸುವಾಗ 7.56 ಲಕ್ಷ ಚಾಲಕರಿಗೆ ತಲಾ 5 ಸಾವಿರ ರು. ಪರಿಹಾರ ನೀಡುವುದಾಗಿ ಹೇಳಿದ್ದರು. ಆದರೆ, ಇದೀಗ ಕೇವಲ 2.14 ಲಕ್ಷ ಜನರಿಗೆ ಮಾತ್ರ ನೀಡಿರುವುದಾಗಿ ಹೇಳುತ್ತಿದ್ದಿರಿ. ಉಳಿದವರಿಗೆ ಏಕೆ ನೀಡಿಲ್ಲ? ನಿಯಮಾವಳಿ ರೂಪಿಸುವಾಗ ಬ್ಯಾಡ್ಜ್‌ ಕಡ್ಡಾಯ, ಮಾಲಿಕರಾಗಿದ್ದು, ಚಾಲಕರಾಗಿದ್ದವರಿಗೆ ನೀಡಲು ಬರುವುದಿಲ್ಲ ಎಂದೆಲ್ಲಾ ನಿಯಮ ರೂಪಿಸಿದ್ದೀರಿ. ಸಂಕಷ್ಟಕ್ಕೆ ಒಳಗಾದ 6 ತಿಂಗಳಾದರೂ ಈವರೆಗೂ ಪರಿಹಾರ ನೀಡಿಲ್ಲ. ಇಂತಹ ಪ್ರಕರಣಗಳಲ್ಲಿ ಉದಾರತೆ ತೋರಿ ಎಲ್ಲಾ ಚಾಲನಾ ಪರವಾನಗಿ ಹೊಂದಿರುವ ಟ್ಯಾಕ್ಸಿ, ಆಟೋ ಚಾಲಕರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ರಘುಪತಿ ಭಟ್‌ ಅವರೂ ಸಹ ದನಿಗೂಡಿಸಿದರು.
 

click me!