
ಸಂಪತ್ ತರೀಕೆರೆ
ಬೆಂಗಳೂರು(ಜೂ.29): ರಾಜ್ಯ ರಾಜಕಾರಣದಲ್ಲಿ ವಿಭಿನ್ನ ತಂತ್ರಗಾರಿಕೆಯ ಯಶಸ್ವಿ ರಾಜಕಾರಣಿಗಳ ಪೈಕಿ ಅಗ್ರಶ್ರೇಣಿಯ ಹೆಸರು ಕೆ.ಎಚ್. ಮುನಿಯಪ್ಪ. ಏಳು ಬಾರಿ ಸಂಸದರಾಗಿ ಕೇಂದ್ರದಲ್ಲಿ ಹಲವು ಸಚಿವ ಖಾತೆ ನಿಭಾಯಿಸಿ ಜತೆಗೆ ರೈಲ್ವೆಯಂತಹ ಮಹತ್ವದ ಖಾತೆಯನ್ನು ನಿಭಾಯಿಸಿ ಸೈ ಎನಿಸಿಕೊಂಡವರು ಮುನಿಯಪ್ಪ. ಇಂತಹ ಮುನಿಯಪ್ಪ ಅವರು ರಾಜ್ಯ ರಾಜಕಾರಣದಲ್ಲಿ ನಡೆಸಿದ ಮೊದಲ ಪ್ರಯತ್ನದಲ್ಲೇ ಯಶ ಕಂಡು ಸಚಿವರೂ ಆಗಿದ್ದಾರೆ.
ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿಗಳ ಈಡೇರಿಕೆ ವಿಷಯದಲ್ಲಿ ದೊಡ್ಡ ಸವಾಲಾಗಿ ಕಾಡಿದ್ದು ಅನ್ನಭಾಗ್ಯ. ಇಂತಹ ಸವಾಲಿನ ಗ್ಯಾರಂಟಿಯನ್ನು ನನಸು ಮಾಡುವ ಹೊಣೆ ಮುನಿಯಪ್ಪ ಅವರ ಹೆಗಲೇರಿದೆ. ಅಕ್ಕಿ ಕೊಡದೆ ಕೈ ಕೊಟ್ಟ ಕೇಂದ್ರ, ಇದರ ಬೆನ್ನಲ್ಲೇ ರಾಷ್ಟ್ರಾದ್ಯಂತ ಅಕ್ಕಿ ದರದ ಹೆಚ್ಚಳ, ಅಗತ್ಯವಿದ್ದಷ್ಟು ಅಕ್ಕಿಯ ಲಭ್ಯತೆಯಿಲ್ಲದಿರುವಂತಹ ಸಮಸ್ಯೆಗಳು ಎದುರಾಗಿವೆ. ತಮ್ಮ ಹಿರಿತನ ಹಾಗೂ ಆಡಳಿತದ ಅನುಭವದ ಮೂಸೆಯಲ್ಲಿ ಅಕ್ಕಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಹಣ ನೀಡುವ ತಂತ್ರಗಾರಿಕೆಯನ್ನು ಮುನಿಯಪ್ಪ ಪ್ರಯೋಗಿಸಿದ್ದಾರೆ. ಈ ತಂತ್ರಕ್ಕೆ ಕಾರಣವೇನು? ಅಕ್ಕಿ ಏಕೆ ಸಿಗುತ್ತಿಲ್ಲ. ಪೂರ್ವ ಸಿದ್ಧತೆಯ ಕೊರತೆಯಿತ್ತೆ. ಮುಂದೆ ಈ ಯೋಜನೆ ಏನಾಗಲಿದೆ ಎಂಬುದರಿಂದ ಹಿಡಿದು ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿ ಆಗುವುದು ಯಾವಾಗ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ .
ತಿಂಗಳಿಗೆ 5 kg ಅಕ್ಕಿ+170 ರೂ.ಸಿದ್ದು ಹೊಸ ಪ್ಲ್ಯಾನ್: ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿ+ ದುಡ್ಡು..!
* ಅಕ್ಕಿ ಕೊಡುತ್ತೇವೆ ಅಂದಿದ್ದಿರಿ. ಈಗ ಹಣ ನೀಡಲು ಮುಂದಾಗಿದ್ದೀರಿ, ಏಕೆ?
ತುರ್ತು ಪರಿಸ್ಥಿತಿ ಸಂದರ್ಭ ಆಥವಾ ಅಕ್ಕಿ ಕೊರತೆ ಕಂಡು ಬಂದರೆ, ಆಹಾರ ಭದ್ರತೆ ಕಾಯ್ದೆಯಲ್ಲಿ ದವಸ ಧಾನ್ಯಗಳನ್ನು ಕೊಡಲಾಗದಂತ ಪರಿಸ್ಥಿತಿ ನಿರ್ಮಾಣವಾದರೆ ಹಣ ಕೊಡಲು ಅವಕಾಶವಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಇದು ಜುಲೈ 1ರಿಂದಲೇ ಅನ್ನಭಾಗ್ಯ ಯೋಜನೆ ಜಾರಿಗೆ ತೊಡಕಾಗಿದೆ. ಹೀಗಾಗಿ ಆಹಾರ ಭದ್ರತೆ ಕಾಯ್ದೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅಕ್ಕಿ ಬದಲು ಹಣ ನೀಡಬಹುದೆಂದು ಇರುವ ಅವಕಾಶ ಬಳಕೆಯಾಗುತ್ತಿದೆ. ಅಕ್ಕಿ ಲಭ್ಯವಾದ ಕೂಡಲೇ ಅಕ್ಕಿ ಕೊಡುತ್ತೇವೆ.
* ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವೇನು? ಪ್ಲಾನಿಂಗ್ ಕೊರತೆಯೇ?
ನೋಡಿ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನರೇಗಾ, ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದೆವು. ದೇಶದ ಕೆಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಅಸ್ತಿತ್ವದಲ್ಲಿ ಇದ್ದವು. ಆದರೂ ನಾವೇನು ಬೇಧಭಾವ ಮಾಡಿರಲಿಲ್ಲ. ಯಾವ ರಾಜ್ಯ ಸರ್ಕಾರಗಳು ಎಷ್ಟುಬೇಡಿಕೆ ಸಲ್ಲಿಸಿದ್ದವೋ ಅಷ್ಟುಪಡಿತರ ಆಹಾರ ಧಾನ್ಯ ಪೂರೈಕೆ ಮಾಡಿದ್ದೆವು. ಒಕ್ಕೂಟ ವ್ಯವಸ್ಥೆಯಲ್ಲಿ ಆಡಳಿತ ಯಾರೇ ಮಾಡಬಹುದು. ಆದರೆ ಪಡೆಯುವ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿರುವವರು. ಹೀಗಾಗಿ ನಮ್ಮ ಯುಪಿಎ ಸರ್ಕಾರದಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಭಾವಿಸಿದ್ದೆವು. ಆದರೆ, ಈಗಿನ ಕೇಂದ್ರ ಸರ್ಕಾರ ನಡೆ ಸಮರ್ಥನೀಯವಲ್ಲ. ಒಪ್ಪುವಂತದ್ದೂ ಅಲ್ಲ. ಇಂತಹ ತೀರ್ಮಾನ ಭಾರತದ ಇತಿಹಾಸದಲ್ಲಿ ಇದೇ ಮೊದಲು.
* ಕೇಂದ್ರ ಕೊಡುತ್ತಿಲ್ಲ ಸರಿ. ಆದರೆ, ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯವಿದೆಯಲ್ಲ?
ಅನ್ನಭಾಗ್ಯಕ್ಕೆ ಯೋಜನೆಗೆ ಕೇಂದ್ರ ಅಕ್ಕಿ ಕೊಡಲ್ಲ ಎನ್ನುತ್ತಿದ್ದಂತೆ ಮಾರುಕಟ್ಟೆಯಲ್ಲಿಯೂ ದರ ಹೆಚ್ಚಳ ಮಾಡಲಾಗಿದೆ. ಯಾವುದೇ ರಾಜ್ಯದಲ್ಲಿ 35, 36 ರು.ದರಕ್ಕೆ ಅಕ್ಕಿ ಸಿಗುತ್ತಿಲ್ಲ. ಛತ್ತೀಸ್‌ಗಢದಿಂದ ಅಕ್ಕಿ ಪೂರೈಸುವಂತೆ ಕೇಳಿದ್ದಕ್ಕೆ ಸಾಗಣಿಕೆ ವೆಚ್ಚ ಸೇರಿ ಪ್ರತಿ ಕೆಜಿಗೆ 37 ರು. ಕೊಡುವಂತೆ ಕೇಳಿದ್ದರು. ತೆಲಂಗಾಣ 42 ರು.ಕೇಳಿತ್ತು. ಬೇರೆ ರಾಜ್ಯಗಳಲ್ಲಿ ಪ್ರತಿ ಕೆಜಿ ಅಕ್ಕಿಗೆ 50 ರು., 60 ರು. 80 ರು. ಕೇಳುತ್ತಿದ್ದಾರೆ. ಎಫ್‌ಸಿಐ ಬೆಲೆ 34 ರು ಮತ್ತು ಸಾಗಣಿಕೆ ವೆಚ್ಚ ಸೇರಿ 36 ರು.ಗೆ ಅಕ್ಕಿ ಸಿಗುತ್ತಿತ್ತು. ಹೀಗಾಗಿ ಕೇಂದ್ರ ಸ್ವಾಮ್ಯಕ್ಕೆ ಒಳಪಟ್ಟಂತ ಈ ಮೂರು ಏಜೆನ್ಸಿಗಳಿಗೆ ಅಕ್ಕಿಗಾಗಿ ಮನವಿ ಮಾಡಿದ್ದೇವೆ. ಆಹಾರ ನಿಗಮದ (ಎಫ್‌ಸಿಐ) ದರಕ್ಕೆ ಏಜೆನ್ಸಿಗಳು ಅಕ್ಕಿ ಕೊಟ್ಟರೆ ಸಹಕಾರಿಯಾಗಲಿದೆ.
* ಮೂರು ಏಜೆನ್ಸಿಗಳ ಮೂಲಕ ಅಕ್ಕಿ ತರಿಸಿಕೊಳ್ಳುವ ಪ್ರಯತ್ನ ಯಾವ ಹಂತದಲ್ಲಿದೆ?
ಎಫ್‌ಸಿಐ ಜೂನ್ 12ರಂದು ಅಕ್ಕಿ ಕೊಡುತ್ತೇವೆ ಎಂದು ಮಾತುಕೊಟ್ಟು, ಜೂನ್ 13ಕ್ಕೆ ಅಕ್ಕಿ ಕೊಡಲು ಆಗುವುದಿಲ್ಲ ಎಂದಿದೆ. ಕೇಂದ್ರ ಸರ್ಕಾರ ಕೂಡ ಅಕ್ಕಿ ಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಹಾಗಾಗಿ ಕೇಂದ್ರ ಸ್ವಾಮ್ಯದ ಎನ್‌ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ್‌ನಿಂದ ಅಕ್ಕಿ ಪೂರೈಕೆಗೆ ಮನವಿ ಮಾಡಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಅಕ್ಕಿ ದರ, ಎಷ್ಟುಅಕ್ಕಿ ಪೂರೈಸುತ್ತವೆ ಎಂಬುದರ ವರದಿ ಕೊಡಲಿವೆ. ಈ ವರದಿಗಾಗಿ ಕಾಯುತ್ತಿದ್ದೇವೆ.
* ಕೇಂದ್ರ ಸ್ವಾಮ್ಯದ ಏಜೆನ್ಸಿಗಳಿಂದಲೇ ಏಕೆ ಅಕ್ಕಿ ಖರೀದಿ ಮಾಡಬೇಕು ಎಂಬ ಹಠವೇಕೆ?
ಕೇಂದ್ರ ಸ್ವಾಮ್ಯದ ಮೂರು ಏಜೆನ್ಸಿಗಳಲ್ಲಿ ಮೇಲ್ವಿಚಾರಣೆ ಉತ್ತಮವಾಗಿದೆ. ಗುಣಮಟ್ಟದ ಅಕ್ಕಿ ಸಿಗುತ್ತದೆ. ಯಾವುದೇ ಅಕ್ರಮಕ್ಕೆ ಅವಕಾಶ ಇರುವುದಿಲ್ಲ. ಎಲ್ಲದಕ್ಕೂ ಲೆಕ್ಕಾಚಾರ ಇರುತ್ತದೆ. ಅಕ್ಕಿ ಖರೀದಿಯಲ್ಲೂ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ಒಂದು ವೇಳೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವುದರಿಂದ ಗುಣಮಟ್ಟದ ಕೊರತೆಯಾಗಬಹುದು. ಇದರಿಂದ ಸರ್ಕಾರಕ್ಕೂ ಕೆಟ್ಟಹೆಸರು ಬರುತ್ತದೆ. ದರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪರವಾಗಿಲ್ಲ. ರಾಜ್ಯದ ಜನರಿಗೆ ಒಳ್ಳೆಯ ಅಕ್ಕಿ ಕೊಡುವುದೇ ಸರ್ಕಾರದ ಗುರಿ.
* ಸರಿ, ಹಣದ ಬದಲು ಅಕ್ಕಿ ಯಾವಾಗ ಜನರಿಗೆ ಸಿಗಬಹುದು?
ಕೇಂದ್ರ ಸರ್ಕಾರ ಹಣಕ್ಕೆ ಅಕ್ಕಿ ಕೊಟ್ಟಿದ್ದರೆ ಜೂನ್ 1ರಿಂದಲೇ ಯೋಜನೆ ಜಾರಿ ಮಾಡುವ ಉದ್ದೇಶ ಹೊಂದಿಲಾಗಿತ್ತು. ಆದರೆ, ಕೇಂದ್ರ ಅಕ್ಕಿ ಕೊಡಲಿಲ್ಲ. ಹೀಗಾಗಿ ಆಗಸ್ಟ್ ತಿಂಗಳಲ್ಲಿ ಅಕ್ಕಿ ಕೊಡಬೇಕೆಂಬ ಪ್ರಯತ್ನದಲ್ಲಿ ಇದ್ದೇವೆ. ಅದಾಗದಿದ್ದರೆ ಅಕ್ಕಿ ಸಿಗುವವರೆಗೂ ಹಣ ಕೊಡುವುದನ್ನು ಮುಂದುವರೆಸುತ್ತೇವೆ. ಲಭ್ಯವಾದ ಕೊಡಲೇ ಅಕ್ಕಿ ನೀಡುತ್ತೇವೆ.
* ಅಕ್ಕಿ ಜೊತೆಗೆ ಇತರ ಧಾನ್ಯಗಳನ್ನು ಕೊಡಬಹುದಲ್ಲ?
ಹೌದು, ಎಂಟು ಕೆಜಿ ಅಕ್ಕಿ ಮತ್ತು ಎರಡು ಕೆಜಿ ರಾಗಿ ಇಲ್ಲವೇ ಎರಡು ಕೆಜಿ ಜೋಳ ಕೊಡುವ ಚಿಂತನೆಯೂ ಇದೆ. ನಮ್ಮಲ್ಲಿ ಒಂದು ವರ್ಷಕ್ಕೆ ಆಗುವಷ್ಟುರಾಗಿ ದಾಸ್ತಾನು ಇದೆ. ಆದರೆ, ಜೋಳ ಸ್ವಲ್ಪ ಕಡಿಮೆ ಇದೆ. ಹಾಗಾಗಿ ಜುಲೈ ತಿಂಗಳಲ್ಲಿ 5 ಕೆಜಿ ಅಕ್ಕಿ ಬದಲಿಗೆ ಹಣ ಕೊಡುತ್ತೇವೆ.
* ಈ ಯೋಜನೆಗೆ ಎಷ್ಟು ವೆಚ್ಚವಾಗಬಹುದು?
ಸುಮಾರು ಪ್ರತಿ ತಿಂಗಳು 800ರಿಂದ 900 ಕೋಟಿ ರು. ವೆಚ್ಚವಾಗಬಹುದು. ವರ್ಷಕ್ಕೆ 10 ಸಾವಿರ ಕೋಟಿ ರು.ಖರ್ಚಾಗಬಹುದು. ಏಜೆನ್ಸಿಗಳಿಂದ ಅಕ್ಕಿ ತೆಗೆದುಕೊಂಡರೂ ಇಷ್ಟೇ ಮೊತ್ತ ಆಗಬಹುದು ಎಂದು ಅಂದಾಜಿದೆ. ಏಜೆನ್ಸಿಗಳು ಅಕ್ಕಿ ಪೂರೈಸುವುದಿಲ್ಲ ಎಂಬ ಪರಿಸ್ಥಿತಿ ಬಂದರೆ ಆಗ ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಮೂಲಕ ಖರೀದಿ ಮಾಡಬೇಕಾಗುತ್ತದೆ. ಅಂತಹ ಚಿಂತನೆ ಸದ್ಯಕ್ಕಿಲ್ಲ.
* ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗಲಿದೆ ಎಂಬುದು ಬಿಜೆಪಿ ಆರೋಪ?
ಬಿಜೆಪಿಯವರು 15 ಲಕ್ಷ ರು.ಗಳನ್ನು ಪ್ರತಿಯೊಬ್ಬರ ಜೇಬಿಗೆ ಹಾಕುತ್ತೇವೆ ಎಂದಿದ್ದರು. ಇಲ್ಲಿವರೆಗೂ ಕೊಟ್ಟಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆಂದರು. ಮಾಡಿದ್ದಾರೆಯೇ? ದೊಡ್ಡ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರು.ಸಾಲ ಮನ್ನಾ ಮಾಡಿದರು. ಆದರೆ ಈ ದೇಶದ ಅನ್ನದಾತ ರೈತರ ಸಾಲ ಮನ್ನಾ ಮಾಡಲಿಲ್ಲ. ಪಂಜಾಬ್, ಹರಿಯಾಣದ ರೈತರು ವರ್ಷಾನುಗಟ್ಟಲೆ ರಸ್ತೆಯಲ್ಲಿ ಕುಳಿತ್ತಿದ್ದರು. ಅವರಲ್ಲಿ ಸಾಕಷ್ಟುಜನ ತೀರಿಕೊಂಡರು. ಅವರ ಬಗ್ಗೆ ಕನಿಕರ ತೋರಲಿಲ್ಲ. ಬಿಜೆಪಿಗರ ಮನಸ್ಥಿತಿ ಬದಲಾಗಲಿಲ್ಲ. ಬಿಜೆಪಿ ರೈತರು, ಕೂಲಿ ಕಾರ್ಮಿಕರು, ಮಹಿಳೆಯರ ಪರವಾಗಿಲ್ಲ. ಆದರೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 72 ಸಾವಿರ ಕೋಟಿ ರು.ಸಾಲ ಮನ್ನಾ ಮಾಡಿದ್ದೆವು. ನಾವು ಸಣ್ಣ ಮತ್ತು ಅತೀ ಸಣ್ಣ ರೈತರ ಆತ್ಮಹತ್ಯೆ ತಡೆದಿದ್ದೇವೆ. ಅಲ್ಲದೆ ಈ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂಬ ಬಿಜೆಪಿ ಆರೋಪದಲ್ಲಿ ತಥ್ಯವಿಲ್ಲ. ಈ ಯೋಜನೆಗೆ ಅಗತ್ಯವಿರುವ ಮೊತ್ತವನ್ನು ಭರಿಸುವ ಸಾಮರ್ಥ್ಯ ರಾಜ್ಯ ಆರ್ಥಿಕ ವ್ಯವಸ್ಥೆಗೆ ಇದೆ.
* ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಬೇಕಾದರೆ 15 ಕೆ.ಜಿ. ಅಕ್ಕಿ ಕೊಡಬೇಕು ಅಂತಾರಲ್ಲ ಬಿಜೆಪಿ ನಾಯಕರು?
ಆಹಾರ ಭದ್ರತೆ ಕಾಯ್ದೆಯಡಿ ಐದು ಕೆಜಿ ಕೊಡಬೇಕೆಂದು ನಿಯಮ ಮಾಡಿದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಯಾರೇ ಪ್ರಧಾನಮಂತ್ರಿ ಆಗಿದ್ದರೂ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆಹಾರ ಭದ್ರತೆ ಕಾಯ್ದೆ ಪ್ರಕಾರ ಅಕ್ಕಿ ಕೊಡಲೇಬೇಕು. ಇಂತಹ ನಿಯಮವನ್ನು ಯುಪಿಎ ತಂದಿತ್ತು. ಅದರಂತೆ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಹೆಚ್ಚುಗಾರಿಕೆಯೇನೂ ಇಲ್ಲ.
* ಗ್ಯಾರಂಟಿ ಯೋಜನೆಯ ಟಾರ್ಗೆಟ್ ಲೋಕಸಭಾ ಚುನಾವಣೆ?
ಲೋಕಸಭೆ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಗ್ಯಾರಂಟಿ ಯೋಜನೆಗಳು ಬಡತನ ರೇಖೆಗಿಂತ ಕೆಳಗಿರುವವರ ಜೀವನ ಸುಧಾರಣೆ ಬಗ್ಗೆ ಕಾಂಗ್ರೆಸ್‌ಗೆ ಬದ್ಧತೆ. ಹೀಗಾಗಿ ಗ್ಯಾರಂಟಿ ಯೋಜನೆಯೇ ಹೊರತು ಚುನಾವಣೆ ದೃಷ್ಟಿಯಿಂದ ಅಲ್ಲ. ವಾಸ್ತವವಾಗಿ ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ಜನ ಭ್ರಮ ನಿರಸನಗೊಂಡಿದ್ದಾರೆ. ರಾಜ್ಯದಲ್ಲಿ ಚುನಾವಣೆ ಪೂರ್ವದಲ್ಲಿ ಬಿಜೆಪಿ ವಿರುದ್ಧ ಜನಾಭಿಪ್ರಾಯವಿದ್ದಂತೆ ಈಗ ಕೇಂದ್ರ ಸರ್ಕಾರದ ಬಗ್ಗೆ ಇದೆ. ಹೀಗಾಗಿ ನಾವು ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುತ್ತೇವೆ.
* 7 ಬಾರಿ ಸಂಸದರಾದವರು ನೀವು. ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಇರಾದೆಯಿದೆಯೇ?
ನನಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸು ಇರಲಿಲ್ಲ. ಆದರೆ, ಹೈಕಮಾಂಡ್ ವಿಧಾನಸಭೆಗೆ ಸ್ಪರ್ಧಿಸು ಎಂದು ಹೇಳಿತು. ಸ್ಪರ್ಧಿಸಿದೆ. ಸಚಿವನಾಗು ಎಂದಿದೆ. ಆಗಿದ್ದೇನೆ. ಲೋಕಸಭೆಗೆ ಸಂಬಂಧಿಸಿದಂತೆ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾನು ಮಾಡುತ್ತೇನೆ. ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿ.
* ದಲಿತ ಮುಖ್ಯಮಂತ್ರಿ ಚರ್ಚೆ ಆಗಾಗ ಮುನ್ನೆಲೆಗೆ ಬರುತ್ತಿದೆ. ತಮ್ಮ ಅಭಿಪ್ರಾಯವೇನು?
ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚಿಂತನೆಯನ್ನು ಹೈಕಮಾಂಡ್ ಕೂಡ ಹೊಂದಿದೆ. ಆದರೆ, ಅದಕ್ಕೆ ಸಂದರ್ಭ ಒದಗಿ ಬಂದಿಲ್ಲ. ಸಮಯ ಬಂದಾಗ ಅದು ಆಗುತ್ತದೆ.
ಅನ್ನಭಾಗ್ಯ ಯೋಜನೆ: ಅಕ್ಕಿ ಬದಲು ಹಣ ಕೊಟ್ರೆ ಹೋರಾಟ, ವಿತರಕರ ಎಚ್ಚರಿಕೆ
* ಕೇಂದ್ರದಲ್ಲಿ ಸಚಿವರಾಗಿದ್ದವರು ನೀವು? ಈಗ ರಾಜ್ಯದಲ್ಲೂ ಸಚಿವರು, ಏನು ವ್ಯತ್ಯಾಸ ಕಾಣುತ್ತಿದೆ?
ಭಾರತ ಸರ್ಕಾರದ ಸಚಿವಾಲಯದಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ ವ್ಯವಸ್ಥೆಯೇ ಬೇರೆ, ಇಲ್ಲಿಯದ್ದೇ ಬೇರೆ. ಕೆಲಸ ಮಾಡುವವರಿಗೆ ಎಲ್ಲಿದ್ದರೂ ಒಂದೇ. ರಾಜ್ಯದಲ್ಲಿ ನಿಗದಿತ ವ್ಯಾಪ್ತಿ ಇರುತ್ತದೆ. ಆದರೆ ರಾಷ್ಟ್ರ ರಾಜಕಾರಣ ಇಡೀ ದೇಶ ವ್ಯಾಪಿ ಇದ್ದು ಅದೊಂದು ದೊಡ್ಡ ಸಮುದ್ರ. ಖುಷಿಯ ವಿಚಾರವೆಂದರೆ ಗ್ಯಾರಂಟಿ ಯೋಜನೆ ಜಾರಿ ಮಾಡುವುದರಲ್ಲಿ ನಾನೂ ಒಬ್ಬ ಸೇರಿದ್ದೇನೆ ಎನ್ನುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ