Namma Clinic: ಬಡವರ ಆರೋಗ್ಯ ರಕ್ಷಣೆಗೆ ನಮ್ಮ ಕ್ಲಿನಿಕ್‌: ಸಚಿವ ಸುಧಾಕರ್‌

By Kannadaprabha News  |  First Published Dec 14, 2022, 7:23 AM IST

ಬಡವರ್ಗದ ಜನರು ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಮಾತ್ರ ಆಸ್ಪತ್ರೆಗೆ ಹೋಗುತ್ತಾರೆ. ತಾವಾಗಿಯೇ ಮುಂದೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಇದರ ಬದಲಾಗಿ ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ ಜನರಿಗೆ ಚಿಕಿತ್ಸೆ ನೀಡುವುದೇ ಸರ್ಕಾರದ ಗುರಿ. ಇದಕ್ಕಾಗಿಯೇ ನಮ್ಮ ಕ್ಲಿನಿಕ್‌ ಆರಂಭಿಸಲಾಗುತ್ತಿದೆ. ಬುಧವಾರ ರಾಜ್ಯಾದ್ಯಂತ 114 ಕ್ಲಿನಿಕ್‌ಗಳಿಗೆ ಚಾಲನೆ ಸಿಗಲಿದೆ. ಒಂದೇ ದಿನ ಇಷ್ಟೊಂದು ಸಂಖ್ಯೆಯಲ್ಲಿ ಕ್ಲಿನಿಕ್‌ಗಳು ಆರಂಭವಾಗುತ್ತಿರುವುದು ದೇಶದಲ್ಲೇ ಮೊದಲು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಕ್ಲಿನಿಕ್‌ನ ಧ್ಯೇಯೋದ್ದೇಶಗಳ ಬಗ್ಗೆ ಕನ್ನಡಪ್ರಭ ವಿಶೇಷ ಸಂದರ್ಶನದಲ್ಲಿ ವಿವರಿಸಿದ್ದಾರೆ.


ಸಂದರ್ಶನ: ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

* ಸರ್ಕಾರ ಏಕಕಾಲಕ್ಕೆ 114 ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡುತ್ತಿದೆ. ಇದರ ವಿಶೇಷತೆಯೇನು?
ಡಿ.14ರ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ನಮ್ಮ ಕ್ಲಿನಿಕ್‌’ಗಳನ್ನು ಉದ್ಘಾಟಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 438 ಕ್ಲಿನಿಕ್‌ಗಳನ್ನು ತೆರೆಯಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಒಟ್ಟು 150 ಕೋಟಿ ರು. ಖರ್ಚಾಗಲಿದೆ. ಆರಂಭಿಕ ಹಂತದಲ್ಲಿ 114 ಕ್ಲಿನಿಕ್‌ಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎಲ್ಲವೂ ಕಾರ್ಯನಿರ್ವಹಿಸಲಿವೆ. ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈಗಾಗಲೇ ಇವೆ. ಆದರೆ ಬಡ ಜನರು, ಕೂಲಿ ಕಾರ್ಮಿಕರು, ಹಮಾಲಿಗಳು, ವಲಸೆ ಹೋಗುವವರು ನಿಯಮಿತವಾಗಿ ಬಂದು ಆರೋಗ್ಯ ತಪಾಸಣೆ ಮಾಡಿಸುತ್ತಿಲ್ಲ. ಇಂತಹ ವರ್ಗದ ಜನರು ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಮಾತ್ರ ಆಸ್ಪತ್ರೆಗೆ ಹೋಗುತ್ತಾರೆ. ಇಂತಹ ಬಡ ಜನರು ವಾಸಿಸುವ ಪ್ರದೇಶಕ್ಕೆ ಸಮೀಪದಲ್ಲೇ ಗುಣಮಟ್ಟದ ಆರೋಗ್ಯ ಸೇವೆಗಳು ಸಿಗಬೇಕು. ಇದಕ್ಕಾಗಿ ನಮ್ಮ ಕ್ಲಿನಿಕ್‌ ಯೋಜನೆ ಜಾರಿ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮನ್ನು ಕಾಮನ್‌ ಮ್ಯಾನ್‌ ಎಂದೇ ಹೇಳಿಕೊಳ್ಳುತ್ತಾರೆ. ಅವರು ಸಾಮಾನ್ಯರಲ್ಲೇ ಸಾಮಾನ್ಯ ವ್ಯಕ್ತಿಯಾಗಿ ಚಿಂತನೆ ನಡೆಸಿದ್ದರಿಂದಲೇ ಇಂತಹ ವಿಶೇಷ ಯೋಜನೆ ರೂಪುಗೊಳ್ಳಲು ಸಾಧ್ಯವಾಗಿದೆ.

Tap to resize

Latest Videos

* ಕ್ಲಿನಿಕ್‌ಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವಾಗ ಆರಂಭವಾಗುತ್ತವೆ?
ಬೆಂಗಳೂರು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ. ಇಲ್ಲಿ ಎಲ್ಲ ವರ್ಗದ ಜನರೂ ಇದ್ದಾರೆ. ಇದರಲ್ಲಿ ಕೊಳಗೇರಿಗಳು ಸೇರಿವೆ. ಬಡ ಜನರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳು ಆರಂಭವಾಗಲಿವೆ. ಇವೆಲ್ಲವನ್ನೂ ಒಂದೇ ಬಾರಿಗೆ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸಾಧ್ಯವಾಗದೆ ಇದ್ದರೆ ಜನವರಿ ಎರಡನೇ ವಾರದೊಳಗೆ ಕನಿಷ್ಠ 150 ನಮ್ಮ ಕ್ಲಿನಿಕ್‌ಗಳು ಬೆಂಗಳೂರಿನಲ್ಲಿ ಜನರ ಸೇವೆಗೆ ಲಭ್ಯವಿರಲಿವೆ.

10 ವರ್ಷದಲ್ಲಿ ಮಾನಸಿಕ ರೋಗಿಗಳು ಹೆಚ್ಚಳ: ಸಚಿವ ಸುಧಾಕರ್‌ ಕಳವಳ

* ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಿದ್ದರ ಹಿಂದಿನ ಉದ್ದೇಶಗಳೇನು?
2020-21ನೇ ಸಾಲಿನಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಅನುಷ್ಠಾನದಲ್ಲಿ ಕರ್ನಾಟಕವು ದೇಶದಲ್ಲೇ ನಂ.1 ಸ್ಥಾನ ಗಳಿಸಿದೆ. ನಮ್ಮಲ್ಲಿ 7 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿವೆ. ಆದರೆ ಇವು ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿವೆ. ನಗರಗಳಲ್ಲಿ ಉತ್ತಮ ಸೇವೆ ನೀಡುವ ಆಸ್ಪತ್ರೆಗಳು ಇದ್ದರೂ ಬಡ ಜನರು ತಾವಾಗಿಯೇ ಮುಂದೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ. ಗಂಭೀರ ಸ್ವರೂಪದ ಕಾಯಿಲೆಗಳು 1/3 ಭಾಗದ ಜನಸಂಖ್ಯೆಯನ್ನು ಆರ್ಥಿಕ ಸಂಕಷ್ಟಅಥವಾ ಸಾಲದ ಕೂಪಕ್ಕೆ ತಳ್ಳುತ್ತಿವೆ ಎಂದು ಅಧ್ಯಯನವೊಂದು ಅಂದಾಜಿಸಿದೆ. ಇದನ್ನು ತಡೆಯುವುದು ಸರ್ಕಾರದ ಗುರಿ. ಇದಕ್ಕಾಗಿಯೇ ಇಂತಹ ಕ್ಲಿನಿಕ್‌ ಆರಂಭಿಸಲಾಗಿದೆ. ಜನರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ನಮ್ಮ ಕ್ಲಿನಿಕ್‌ ಮೂಲಕ ಉತ್ತೇಜಿಸಲಾಗುವುದು. ಇದರಿಂದಾಗಿ ಆರಂಭಿಕ ಹಂತದಲ್ಲೇ ರೋಗ ಪತ್ತೆ ಸಾಧ್ಯ. ಮಧುಮೇಹ, ಬಿಪಿ ಮೊದಲಾದ ಅಸಾಂಕ್ರಾಮಿಕ ರೋಗಗಳಿಗೆ ಒಳಗಾದವರ ನಿಖರವಾದ ಅಂಕಿ-ಅಂಶಗಳು ನಮ್ಮ ಬಳಿ ಇರಲಿಲ್ಲ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಅದನ್ನು ಪತ್ತೆ ಮಾಡಲಾಗುತ್ತಿದೆ. ಹಾಗೆಯೇ ನಮ್ಮ ಕ್ಲಿನಿಕ್‌ಗಳಿಂದಲೂ ಮಾಹಿತಿ ಸಂಗ್ರಹ ನಡೆಯಲಿದೆ. ಸಾಂಕ್ರಾಮಿಕದಂತೆಯೇ, ಅಸಾಂಕ್ರಾಮಿಕ ರೋಗಗಳನ್ನೂ ಪತ್ತೆ ಮಾಡಿ ಅದರ ವ್ಯಾಪ್ತಿಯನ್ನು ಅರಿಯುವ ಅಗತ್ಯವಿದೆ. ಬಳಿಕ ಅದರ ನಿಯಂತ್ರಣಕ್ಕೆ ಸೂಕ್ತ ಯೋಜನೆ ರೂಪಿಸಲು ಸಾಧ್ಯ. ನಮ್ಮ ಕ್ಲಿನಿಕ್‌ಗಳು ನಗರಗಳ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಅತಿ ದೊಡ್ಡ ಹೆಜ್ಜೆಯಾಗಿದೆ.

* ಕ್ಲಿನಿಕ್‌ಗಳಲ್ಲಿ ಯಾವ ರೀತಿಯ ಸೇವೆಗಳು ಸಿಗಲಿವೆ? ಇವುಗಳನ್ನು ಆರಂಭಿಸಿದ ಬಳಿಕ ಎರಡು ಮತ್ತು ಮೂರನೇ ಹಂತದ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಆಗುವುದೇ?
ನಮ್ಮ ಕ್ಲಿನಿಕ್‌ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯವಾಗಲಿವೆ. ಗರ್ಭಿಣಿ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಹಾಗೂ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ ಪತ್ತೆ ಸೇರಿದಂತೆ ಹಲವಾರು ಬಗೆಯ ಸೇವೆಗಳು ಲಭ್ಯವಿರಲಿವೆ. ಕಾಲಕ್ಕೆ ತಕ್ಕಂತೆ ಹೊಸ ಸೇವೆಗಳನ್ನು ಸೇರ್ಪಡೆ ಮಾಡಲು ಅವಕಾಶವಿದೆ. ಜನರು ಎಲ್ಲ ರೋಗಗಳ ತಪಾಸಣೆಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು, ಜಿಲ್ಲಾಸ್ಪತ್ರೆಗೆ ಹೋಗಬೇಕಾಗಿಲ್ಲ. ಈ ಕ್ಲಿನಿಕ್‌ಗಳಿಂದಾಗಿ ಆ ಸಮಸ್ಯೆ ತಪ್ಪಲಿದೆ. ಬೇರೆ ಆಸ್ಪತ್ರೆಗಳಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳ ನಿವಾರಣೆ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗಲಿದೆ. ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ನಮ್ಮ ಕ್ಲಿನಿಕ್‌ ತೆರೆದಿರುತ್ತವೆ. ಭಾನುವಾರ ರಜೆ ಇರಲಿದೆ.

* ನಮ್ಮ ಕ್ಲಿನಿಕ್‌ನಲ್ಲಿ ಸೌಲಭ್ಯ ಪಡೆಯಲು ಶುಲ್ಕ ಕೊಡಬೇಕೆ? ಹೆಚ್ಚಿನ ಚಿಕಿತ್ಸೆ ಬೇಕಾದರೆ ಏನು ಮಾಡಬೇಕು?
ಇಲ್ಲಿ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಇದು ಸಂಪೂರ್ಣ ಉಚಿತವಾದ ಕ್ಲಿನಿಕ್‌. ದೈಹಿಕ ತಪಾಸಣೆ, ರಕ್ತ ಪರೀಕ್ಷೆ, ಬಿಪಿ, ಸಕ್ಕರೆ ಕಾಯಿಲೆ ಪರೀಕ್ಷೆಗಳು ಸೇರಿ ಎಲ್ಲವೂ ಉಚಿತ. ಔಷಧಿಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ. ಈ ಕ್ಲಿನಿಕ್‌ಗಳು ರೆಫರಲ… ಕೇಂದ್ರವಾಗಿಯೂ ಕೆಲಸ ಮಾಡುತ್ತವೆ. ರೋಗಿಯನ್ನು ಮೊದಲು ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ಹಾಗೂ ಅಗತ್ಯ ಔಷಧಿ ನೀಡುತ್ತಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದರೆ, ಮೇಲಿನ ಹಂತದ ಚಿಕಿತ್ಸೆಗೆ ಇಲ್ಲಿನ ವೈದ್ಯರೇ ಶಿಫಾರಸು ಮಾಡಿ ಬೇರೆ ಆಸ್ಪತ್ರೆಗಳಿಗೆ ಕಳುಹಿಸುತ್ತಾರೆ.

* ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರ ಕೊರತೆ ನೀಗಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ?
ಈ ಬಗ್ಗೆ ಹೆಚ್ಚು ಆತಂಕ ಪಡಬೇಕಿಲ್ಲ. ಈಗಾಗಲೇ 300 ವೈದ್ಯರ ನೇಮಕಾತಿ ನಡೆದಿದೆ. ಕೆಲವು ಕ್ಲಿನಿಕ್‌ಗಳಿಗೆ ಇನ್ನೂ ವೈದ್ಯರ ನೇಮಕಾತಿ ನಡೆಯಬೇಕಿದೆ. ತಕ್ಷಣದ ಕ್ರಮವಾಗಿ ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ವೈದ್ಯರನ್ನು ಇದಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಆಕರ್ಷಕ ವೇತನ ನೀಡುವ ಮೂಲಕ ಅವರನ್ನು ನಮ್ಮ ಕ್ಲಿನಿಕ್‌ಗಳಿಗೆ ನೇಮಕ ಮಾಡಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸದ್ಯ ಕೇವಲ 80-90 ವೈದ್ಯರ ಕೊರತೆ ಇದೆ.

* ಈ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಕೇಂದ್ರದ ನೆರವು ಸಿಗುತ್ತಿದೆಯೇ?
ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯ ವ್ಯವಸ್ಥೆಯ ಸುಧಾರಣೆಯ ವಿಚಾರದಲ್ಲಿ ಬಹಳ ಶ್ಲಾಘನೀಯ ಕ್ರಮ ವಹಿಸಿದ್ದಾರೆ. ಕೋವಿಡ್‌ ಆರಂಭವಾದ ಬಳಿಕ ಕೂಡ ಮೂಲಸೌಕರ್ಯದ ಸುಧಾರಣೆಗೆ ಸಾಕಷ್ಟುಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ, ಇಂದ್ರಧನುಷ್‌ ಲಸಿಕಾಕರಣ, ಕೋವಿಡ್‌ ಲಸಿಕಾಕರಣ ಸೇರಿದಂತೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದ ಸಹಕಾರದಲ್ಲಿ ಜಾರಿ ಮಾಡಲಾಗಿದೆ. ರಾಜ್ಯದ ಬಹುತೇಕ ಆರೋಗ್ಯ ಯೋಜನೆಗಳಿಗೆ ಕೇಂದ್ರದಿಂದ ಕಾಲಕಾಲಕ್ಕೆ ಉತ್ತಮ ಅನುದಾನ ಲಭ್ಯವಾಗುತ್ತಿದೆ.

 ನಮ್ಮ ಕ್ಲಿನಿಕ್‌ ಬಳಿಕ ಮಹಿಳಾ ಸ್ಪೆಷಲ್‌ ಆಯುಷ್ಮತಿ ಕ್ಲಿನಿಕ್‌
* ಮಹಿಳೆಯರಿಗಾಗಿಯೇ ವಿಶೇಷ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದಾಗಿ ಹೇಳಿದ್ದಿರಿ. ಅವುಗಳಿಗೆ ಯಾವಾಗ ಚಾಲನೆ ನೀಡಲಾಗುವುದು?

ಮಹಿಳೆಯರ ಆರೋಗ್ಯದ ವಿಚಾರದಲ್ಲಿ ನಮ್ಮ ಸರ್ಕಾರ ಹೆಚ್ಚು ಒಲವು, ಕಾಳಜಿ ತೋರಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇನ್ನೂ ತಾಯಂದಿರ ಮರಣ ಹಾಗೂ ಶಿಶು ಮರಣ ಸಂಭವಿಸುತ್ತಿದೆ. ಇದು ಇಂದಿನ ಸಮಾಜಕ್ಕೆ ನಿಜಕ್ಕೂ ಅಪಮಾನಕಾರಿಯಾದ ಸಂಗತಿ. ಹಾಗಾಗಿ ಮಹಿಳೆಯರ ಆರೋಗ್ಯದ ಬಗ್ಗೆ ನಾವು ಹೆಚ್ಚು ಎಚ್ಚರ ವಹಿಸಬೇಕಿದೆ. ಇದಕ್ಕಾಗಿ ‘ಆಯುಷ್ಮತಿ’ ಎಂಬ ಹೆಸರಿನ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ. ಇದು ಕೂಡ ನಮ್ಮ ಕ್ಲಿನಿಕ್‌ ಮಾದರಿಯೇ ಆಗಿದ್ದು, ಹೆಸರು ಬದಲಿಸಲಾಗಿದೆ. ಹಾಗೆಯೇ ಈ ಕ್ಲಿನಿಕ್‌ ಮಹಿಳೆಯರ ಸಂಪೂರ್ಣ ಆರೋಗ್ಯ ರಕ್ಷಣೆಗೆ ಮೀಸಲಾಗಿದೆ.

ಇದರ ಜೊತೆಗೆ, ಫರ್ಟಿಲಿಟಿ ಘಟಕಗಳನ್ನು ಆರಂಭಿಸಲು ಕೂಡ ಉದ್ದೇಶಿಸಲಾಗಿದೆ. ಈಗಿನ ಯುವ ಪೀಳಿಗೆಯಲ್ಲಿ ಅನೇಕರು ಉದ್ಯೋಗ, ಮಾನಸಿಕ ಒತ್ತಡ ಮೊದಲಾದ ಕಾರಣಗಳಿಂದಾಗಿ ಸಂತಾನ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಾಸಗಿ ಆರೋಗ್ಯ ವ್ಯವಸ್ಥೆಯಲ್ಲಿ ಐವಿಎಫ್‌ ಸೆಂಟರ್‌ಗಳು ಬಹಳಷ್ಟಿದ್ದರೂ ದರ ಬಹಳ ದುಬಾರಿಯಾಗಿದೆ. ಬಡ ಜನರು ಕೂಡ ಇಂತಹ ಸೇವೆ ಪಡೆಯಲು ಅವಕಾಶವಾಗುವಂತೆ ರಾಜ್ಯದಲ್ಲಿ 4 ಫರ್ಟಿಲಿಟಿ ಸೆಂಟರ್‌ಗಳನ್ನು ಸರ್ಕಾರದಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ. ಈ ಕೇಂದ್ರಗಳಲ್ಲಿ ಬಹುತೇಕ ಸೇವೆಗಳು ಉಚಿತ ಅಥವಾ ಅತಿ ಕಡಿಮೆ ದರ ಹೊಂದಿರುತ್ತವೆ.

ಶಾಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ಪರೀಕ್ಷೆ ಮಾಡಿ: ಸಚಿವ ಸುಧಾಕರ್‌ ಸೂಚನೆ

* ಆಯುಷ್ಮತಿ ಚಿಕಿತ್ಸಾ ಕೇಂದ್ರಗಳ ವಿಶೇಷತೆ ಏನು?
ಇವು ಕೇವಲ ಮಹಿಳೆಯರಿಗಾಗಿ ಮೀಸಲಾದ ಕ್ಲಿನಿಕ್‌ಗಳು. ಸಾಮಾನ್ಯವಾದ ಆಸ್ಪತ್ರೆಗಳಲ್ಲಿ ಎಲ್ಲ ರೋಗಿಗಳಿಗೂ ಸೇವೆ ದೊರೆಯುವುದರಿಂದ ಮಹಿಳೆಯರ ಆರೋಗ್ಯದ ರಕ್ಷಣೆಯ ವಿಚಾರದಲ್ಲಿ ಹಿನ್ನಡೆ ಉಂಟಾಗುವ ಸಂಭವ ಇರುತ್ತದೆ. ಆದರೆ ಆಯುಷ್ಮತಿ ಕ್ಲಿನಿಕ್‌ಗಳಿಂದಾಗಿ ಮಹಿಳೆಯರ ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ. ಮಹಿಳಾ ಆರೋಗ್ಯ ತಜ್ಞರೇ ಆ ಕ್ಲಿನಿಕ್‌ಗಳಲ್ಲಿ ಇರಲಿದ್ದು, ಅವರು ಎಲ್ಲ ಬಗೆಯ ಮಾಹಿತಿ, ಚಿಕಿತ್ಸೆ ನೀಡುತ್ತಾರೆ. ಪ್ರಮುಖವಾಗಿ ಗರ್ಭಿಣಿಯರು ಸಣ್ಣ ಪುಟ್ಟತಪಾಸಣೆಗೆ ಆಗಾಗ್ಗೆ ದೂರದ ಆಸ್ಪತ್ರೆಗೆ ಹೋಗಬೇಕಿಲ್ಲ. ಆಯುಷ್ಮತಿ ಕೇಂದ್ರಗಳಲ್ಲೇ ಬಂದು ಉಚಿತ ಸೇವೆ ಪಡೆಯಬಹುದು.

* ಮಹಿಳೆಯರ ಚಿಕಿತ್ಸೆಗೆ ಮೀಸಲಾಗಿರುವ ಕ್ಲಿನಿಕ್‌ಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯೂ ಮಹಿಳೆಯರೇ ಆಗಿರುತ್ತಾರೆಯೇ?
ಖಂಡಿತವಾಗಿಯೂ ಇರುತ್ತಾರೆ. ಮಹಿಳಾ ತಜ್ಞರನ್ನೇ ಇಲ್ಲಿಗೆ ನೇಮಿಸಿ ಸೇವೆ ನೀಡಲಾಗುವುದು. ಇದರಿಂದಾಗಿ ಮಹಿಳೆಯರು ತಮ್ಮ ಕಷ್ಟ, ಸಮಸ್ಯೆಗಳನ್ನು ಮಹಿಳಾ ತಜ್ಞರ ಬಳಿಯೇ ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗಲಿದೆ. ಈ ಕ್ಲಿನಿಕ್‌ಗಳು ಬಹಳ ವಿಭಿನ್ನ ಹಾಗೂ ವಿಶಿಷ್ಟವಾದ ಯೋಜನೆಯಾಗಿದೆ. ಸ್ತ್ರೀರೋಗತಜ್ಞ, ಮಕ್ಕಳ ತಜ್ಞರು, ಸೇರಿದಂತೆ ವಾರದಲ್ಲಿ ಪ್ರತಿ ದಿನ ಒಬ್ಬ ತಜ್ಞ ವೈದ್ಯರು ಆಯುಷ್ಮತಿ ಕ್ಲಿನಿಕ್‌ಗೆ ಭೇಟಿ ನೀಡುತ್ತಾರೆ. ಇಂತಹ ವಿಭಿನ್ನ ವ್ಯವಸ್ಥೆಯನ್ನು ಇಲ್ಲಿ ತರಲಾಗಿದೆ. ಇದರಿಂದಾಗಿ ಮಹಿಳೆಯರ ಸಮಗ್ರ ಆರೋಗ್ಯ ರಕ್ಷಣೆಗೆ ಒತ್ತು ನೀಡಲು ಸಾಧ್ಯವಾಗುತ್ತದೆ. ಮಹಿಳೆಯರು ತಮಗೆ ಯಾವ ಸಮಸ್ಯೆ ಇದೆಯೋ ಅದಕ್ಕೆ ತಕ್ಕಂತೆ ದಿನ ನಿಗದಿ ಮಾಡಿಕೊಂಡು ಆಯಾ ತಜ್ಞರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಮುಖ್ಯವಾಗಿ ತಾಯಂದಿರ ಮರಣ ಹಾಗೂ ನವಜಾತ ಶಿಶುಗಳ ಮರಣ ಸಂಭವಿಸುವುದನ್ನು ತಡೆಗಟ್ಟುವಂತೆ ಆರಂಭಿಕ ಹಂತದಲ್ಲೇ ತಪಾಸಣೆ, ಚಿಕಿತ್ಸೆ, ಆರೈಕೆ ನೀಡಲು ಈ ಕ್ಲಿನಿಕ್‌ಗಳು ಸಹಕಾರಿ.

click me!