
ಬೆಂಗಳೂರು (ಫೆ.24): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಾಗಿ ಘೋಷಣೆ ಮಾಡಿ ಜಾರಿಗೆ ತರಲಾದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂವಿಧಾನಾತ್ಮಕವಾಗಿ ದಲಿತ ಸಮುದಾಯಗಳ ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಮೀಸಲಿಟ್ಟ ಹಣವನ್ನೂ ಬಳಕೆ ಮಾಡಿಕೊಳ್ಳುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮರ್ಥನೆ ಮಾಡಿಕೊಂಡಿದ್ದಾರೆ.
ದಲಿತರ ಹಣ, ಪರಿಶಿಷ್ಟ ನಿಗಮಗಳ ಹಣ ಗ್ಯಾರಂಟಿಗಳಿಗೆ ಬಳಕೆ ವಿಚಾರದ ಬಗ್ಗೆ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗೆ ಎಸ್‌ಸಿ, ಎಸ್‌ಟಿ ಯೋಜನೆಯ ಹಣವನ್ನು ಬಳಸಿಕೊಳ್ಳುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಎಲ್ಲರಿಗೂ ಮುಟ್ಟಿದೆ. ದಲಿತರಿಗೂ, ಹಿಂದುಳಿದವರಿಗೂ ಗ್ಯಾರಂಟಿ ಮುಟ್ಟುತ್ತಿದೆ. ಎಸ್‌ಸಿ, ಎಸ್‌ಟಿ ಹಣ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಬಾರದು ಅಂತೇನಿಲ್ಲ. ನಮ್ಮ ಮೂಲ ಉದ್ದೇಶ ಆ ಸಮುದಾಯಗಳಿಗೆ ಯೋಜನೆ ಮುಟ್ಟಬೇಕು ಅನ್ನೋದಾಗಿದೆ. ಆ ಉದ್ದೇಶ ಈಡೇರುತ್ತಿದೆ. ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಗೃಹ ಸಚಿವ ಸ್ಥಾನ ತ್ಯಾಗ ಮಾಡುವ ಕುರಿತು ಡಾ.ಜಿ.ಪರಮೇಶ್ವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಎಲ್ಲಾ ಸಚಿವರು ಸಂಪುಟದೊಳಗೆ ಸರಿಯಾಗಿ ಕೆಲಸ ಮಾಡ್ತಿದ್ದಾರೆ. ಯಾವುದೇ ಒತ್ತಡವಾಗಲಿ ಅಥವಾ ಬೇಸರವಾಗುವ ವಾತಾವರಣ ಸಂಪುಟದಲ್ಲಿ ಇಲ್ಲ. ಎಲ್ಲರೂ ಸಮರ್ಥರಿದ್ದಾರೆ. ಯಾರಾರು ಎಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡ್ತಿದ್ದಾರೆ ಅಂತ ನಾನು ಹೇಳಲಿಕ್ಕೆ ಆಗಲ್ಲ. ಆದರೆ, ಪರಮೇಶ್ವರ ಅವರು ಯಾವ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ ಅನ್ನೋದು ಗೊತ್ತಿಲ್ಲ. ಒಂದಂತೂ ಸ್ಪಷ್ಟ. ನಮ್ಮ ಸರ್ಕಾರದ ಒಳಗೆ ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿಯ ಭಾರ, ದಲಿತ ನಿಗಮಗಳ ಹಣಕ್ಕೂ ಕತ್ತರಿ ಹಾಕಿದ ಸರ್ಕಾರ?
ದಿನೇಶ್ ಗುಂಡೂರಾವ್ ಅವರಿಂದ ಸಾಫ್ಟ್ ಹಿಂದುತ್ವ ಪಾಲನೆ ಆರೋಪ ವಿಚಾರದ ಬಗ್ಗೆ ಮಾತನಾಡಿ, ಮಹಾಶಿವರಾತ್ರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿರೋದು ಹೌದು. ನಮ್ಮ ಕ್ಷೇತ್ರದಲ್ಲಿ ಪ್ರತೀ ವರ್ಷವೂ ವಿಶೇಷ ಕಾರ್ಯಕ್ರಮ ಮಾಡ್ತಿದ್ದೇವೆ. 2023ರ ವಿಧಾನಸಭೆ ಫಲಿತಾಂಶಕ್ಕೂ ಇದಕ್ಕೂ ಸಂಬಂಧ ಇಲ್ಲ. ಇದು ಸಾಫ್ಟ್ ಹಿಂದುತ್ವ ಅಲ್ಲ. ನಾನೂ ಬಹಳ ದೇವಸ್ಥಾನ ಕಟ್ಟಿಸಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರು. ಇನ್ನು ಎಸ್ಕಾಂಗಳಿಂದ ಇಂಧನ ಇಲಾಖೆಗೆ ಪತ್ರ ವಿಚಾರದ ಬಗ್ಗೆ ಮಾತನಾಡಿ, ನಾನು ಇಂಧನ ಸಚಿವ ಅಲ್ಲ, ಇದು ಅವರಿಗೇ ಕೇಳಿ. ಗ್ಯಾರಂಟಿಗಳ ಜಾರಿಗೆ ಯಾವುದೇ ಸಮಸ್ಯೆ ಆಗ್ತಿದೆ ಅಂತ ನನಗೆ ಅನಿಸಿಲ್ಲ. ನಮ್ಮ ಇಲಾಖೆ ಯೋಜನೆಗಳು ಉತ್ತಮವಾಗಿಯೇ ಜಾರಿಯಾಗುತ್ತಿವೆ ಎಂದು ತಿಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸರ್ಕಾರದ ಕ್ರಮಕ್ಕೆ ಛೀಮಾರಿ ಹಾಕಿದ್ದಾರೆ. ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ವರಸೆ ಹೀಗಿದೆ. ದಲಿತರ ಮತ ಬೇಕು, ಆದರೆ ದಲಿತರ ಅಭಿವೃದ್ಧಿ ಬೇಡ.
ಇದನ್ನೂ ಓದಿ: Karnataka News Live: ಪರಂ ಪದತ್ಯಾಗದ ಮಾತು, ಗೃಹಜ್ಯೋತಿಗೂ ಎದುರಾಯ್ತು ಶಾಕ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ