ಗಾಂಜಾ ಬೆಳೆ, ಹೆರಾಯಿನ್‌ ಘಟಕ ನಾಶ ಮಾಡಿ: ಬಸವರಾಜ ಬೊಮ್ಮಾಯಿ

By Kannadaprabha NewsFirst Published Sep 6, 2020, 11:17 AM IST
Highlights

ಪೊಲೀಸರು, ತನಿಖಾಧಿಕಾರಿಗಳ ಮೇಲೆ ಒತ್ತಡ ಇದೆ| ಸಚಿವ ಸಿ.ಟಿ.ರವಿ ಹೇಳಿಕೆಗೆ ಗೃಹ ಮಂತ್ರಿ ಸಮರ್ಥನೆ|ಮಾದಕ ದ್ರವ್ಯ ಮಾಫಿಯಾ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಬಿಜೆಪಿ ಕಾರ್ಯಕರ್ತರು ಕೈಜೋಡಿಸಿದ್ದಾರೆ|

ಬೆಂಗಳೂರು(ಸೆ.06): ಡ್ರಗ್ಸ್‌ ನಿಯಂತ್ರಣಕ್ಕಾಗಿ ರಾಜ್ಯದ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಶೇಷ ಪೊಲೀಸ್‌ ತಂಡ ರಚಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ರಾಜ್ಯದ ಐಜಿಪಿ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ, ಈ ಹಿಂದೆ ಮಾದಕ ವಸ್ತುಗಳ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಮಾದಕ ವಸ್ತುಗಳ ನಿಯಂತ್ರಣ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಗಾಂಜಾ ಬೆಳೆ ಮತ್ತು ಹೆರಾಯಿನ್‌ ತಯಾರಿಸುವ ಘಟಕಗಳನ್ನು ನಾಶಮಾಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. 

ಡ್ರಗ್ಸ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿಂದಿನ ಅಪರಾಧಿಗಳ ಚಲನವಲನಗಳ ಮೇಲೆ ನಿಗಾವಹಿಸಬೇಕು. ಔಷಧ ತಯಾರಿಕೆಗೆ ಬಳಸುವ ಮಾದಕ ದ್ರವ್ಯ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು. ಡ್ರಗ್‌ ಕಂಟ್ರೋಲ್‌ ಏಜೆನ್ಸಿಗಳ ಸಹಯೋಗದೊಂದಿಗೆ ನಿಯಂತ್ರಣ ಮಾಡಲು ಕ್ರಮ ಜರುಗಿಸಬೇಕು. ಡ್ರಗ್ಸ್‌ ಕಿಂಗ್‌ಪಿನ್‌ಗಳನ್ನು ಬಂಧಿಸಬೇಕು ಮತ್ತು ವಿದೇಶಿ ನಾಗರಿಕರ ಮೇಲೆ ತೀವ್ರ ನಿಗಾ ವಹಿಸಬೇಕು. ನೆರೆಯ ರಾಜ್ಯಗಳ ಪೊಲೀಸ್‌ ಮುಖ್ಯಸ್ಥರೊಂದಿಗೆ ಸಮನ್ವಯತೆ ಕಾಪಾಡಬೇಕು. ಆರೋಪಿಗಳ ಮೇಲೆ ಎನ್‌ಡಿಪಿಎಸ್‌ ಮತ್ತು ಗೂಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು. ಡ್ರಗ್ಸ್‌ ಪ್ರಕರಣದಲ್ಲಿ ಕಠಿಣ ಶಿಕ್ಷೆ ವಿಧಿಸಲು ಕಾನೂನು ಪ್ರಾಧಿಕಾರದ ಜತೆಗೆ ಜಂಟಿಯಾಗಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

ಮೊದಲು ಗಾಂಜಾ, ಬಳಿಕ ಎಂಡಿಎಂಎ: ಹೌದು, ನಾನು ಡ್ರಗ್ಗಿಣಿ: ನಟಿ ರಾಗಿಣಿ ತಪ್ಪೊಪ್ಪಿಗೆ!

ಡ್ರಗ್ಸ್‌ ತನಿಖೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯಲ್ಲ:

ಡ್ರಗ್ಸ್‌ ದಂಧೆಯಲ್ಲಿ ಯಾರು ಎಷ್ಟೇ ಒತ್ತಡ ಹಾಕಿದರೂ ಸರ್ಕಾರ ಮಣಿಯುವುದಿಲ್ಲ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್‌.ಟಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣದಲ್ಲಿ ಕೆಲವು ಪ್ರಭಾವಿಗಳ ಹೆಸರು ಕೇಳಿಬರುತ್ತಿರುವುದರಿಂದ ಪೊಲೀಸರು ಮತ್ತು ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕುವ ತಂತ್ರ ನಡೆದಿದೆ. ಆದರೆ, ಜಾಲದ ಯಾವುದೇ ಒತ್ತಡಕ್ಕಾಗಲಿ, ಪ್ರಭಾವಕ್ಕಾಗಲಿ ಮಣಿಯುವ ಪ್ರಶ್ನೆಯೇ ಇಲ್ಲ. ಡ್ರಗ್ಸ್‌ ಜಾಲದಲ್ಲಿ ಎಷ್ಟೇ ದೊಡ್ಡವರು ಭಾಗಿಯಾಗಿದ್ದರೂ ಅವರೆಲ್ಲರನ್ನು ಹೊರಗೆಳೆಯುತ್ತೇವೆ. ತನಿಖೆ ಯಾವುದೇ ಹಸ್ತಕ್ಷೇಪ, ಒತ್ತಡಗಳಿಲ್ಲದೆ ನಡೆಯುತ್ತಿದೆ ಎಂದು ತಿಳಿಸಿದರು.

ತನಿಖಾಧಿಕಾರಿಗಳ ಮೇಲೆ ಕೆಲವರು ಒತ್ತಡ ಹಾಕುತ್ತಿದ್ದಾರೆ ಎಂಬ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಭಾವಿಗಳ ಹೆಸರು ಕೇಳಿ ಬರುತ್ತಿರುವುದರಿಂದ ಒತ್ತಡ ಇದೆ ಎಂದು ಹೇಳಿದ್ದಾರೆಯೇ ಹೊರತು ಒತ್ತಡ ಹಾಕಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಏನೇ ಇದ್ದರೂ ಸರ್ಕಾರ ಯಾವುದಕ್ಕೂ ಬಗ್ಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದರು.

ಡ್ರಗ್ಸ್‌ ಜಾಲದ ಹಿಂದಿರುವ ವ್ಯಕ್ತಿಗಳು ಯಾರು? ಡ್ರಗ್ಸ್‌ ಮಾರಾಟ ದಂಧೆಯಲ್ಲಿರುವರು ಯಾರು? ಯಾರಿಗೆ ಡ್ರಗ್ಸ್‌ ಪೂರೈಕೆಯಾಗುತ್ತಿದೆ? ಹೀಗೆ ವಿವಿಧ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಗಡಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟುಬಿಗಿಗೊಳಿಸಲಾಗುವುದು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದಲೂ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ. ವಿದೇಶಗಳಿಂದ ನೇರವಾಗಿ ಕೊರಿಯರ್‌, ಡಾರ್ಕ್ವೆಬ್‌ಗಳ ಮೂಲಕ ನಡೆಯುವ ವ್ಯವಹಾರಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಡ್ರಗ್ಸ್‌ ಜಾಲ ಬುಡಸಮೇತ ನಾಶಕ್ಕೆ ಬಿಜೆಪಿ ಪಣ: ಕಟೀಲ್‌

ಪಕ್ಷ ಹಮ್ಮಿಕೊಂಡಿರುವ ‘ಡ್ರಗ್ಸ್‌ ಮುಕ್ತ ಕರ್ನಾಟಕ ಅಭಿಯಾನ’ದ ಮೂಲಕ ಡ್ರಗ್ಸ್‌ ಜಾಲವನ್ನು ಬುಡಸಮೇತ ಕಿತ್ತುಹಾಕುವ ತನಕ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.
ಡ್ರಗ್ಸ್‌ ಜಾಲವನ್ನು ಕೊನೆಗಾಣಿಸಲು ಪೊಲೀಸ್‌ ಅಧಿಕಾರಿಗಳಿಗೆ ಗೃಹ ಸಚಿವರು ಸಂಪೂರ್ಣವಾಗಿ ಮುಕ್ತ ಸ್ವಾತಂತ್ರ್ಯ ನೀಡಿದ್ದಾರೆ. ಗೃಹ ಸಚಿವರ ನಡೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಪ್ರಜ್ಞಾವಂತ ನಾಗರಿಕರು ಸ್ವಾಗತಿಸಿದ್ದಾರೆ. ಎಷ್ಟೇ ಪ್ರಭಾವಿ ವ್ಯಕ್ತಿಯಾದರೂ ಈ ನೆಲದ ಕಾನೂನನ್ನು ಮುರಿದರೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಸಕ್ತ ನಡೆಯುತ್ತಿರುವ ಮಾದಕ ದ್ರವ್ಯ ಜಾಲದ ತನಿಖೆಯನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಪಾಯಕಾರಿಯಾದ ಈ ಜಾಲದ ವಿರುದ್ಧ ಪೊಲೀಸರು ಕೈಗೊಂಡಿರುವ ತನಿಖೆ, ನಿರ್ವಹಣೆಯಲ್ಲಿನ ವೇಗ, ಪ್ರಮಾಣ, ದೃಢಸಂಕಲ್ಪ ಮತ್ತು ನಿಶ್ಚಯ ಪ್ರಶಂಸನಾರ್ಹವಾಗಿದೆ. ಈ ಪಿಡುಗಿನ ವಿರುದ್ಧ ರಾಜಿಯಾಗದ ದೃಢ ನಿಲುವಿಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಕರ್ನಾಟಕ ಮಾದಕ ದ್ರವ್ಯ ಮುಕ್ತವಾಗಿರುವುದನ್ನು ನೋಡಲು ಬಿಜೆಪಿ ಬದ್ಧವಾಗಿದೆ. ಈ ಪಿಡುಗನ್ನು ನಿರ್ಮೂಲನೆ ಮಾಡಲೇಬೇಕು ಎಂದಿದ್ದಾರೆ.

ಈ ಅಪಾಯಕಾರಿ ಪಿಡುಗಿನಲ್ಲಿ ತೊಡಗಿರುವ ಎಲ್ಲರನ್ನೂ ಹಾಗೂ ಎಷ್ಟೇ ದೊಡ್ಡವರಾಗಿರಲಿ, ಅವರ ಸಾಮಾಜಿಕ ಮತ್ತು ರಾಜಕೀಯ ಪ್ರಭಾವ, ಸ್ಥಾನಮಾನದ ಹೊರತಾಗಿಯೂ ಕಾನೂನಿನ ವ್ಯಾಪ್ತಿಗೆ ತರಬೇಕು. ಮಾದಕ ದ್ರವ್ಯ ಮಾಫಿಯಾ ವಿರುದ್ಧದ ಈ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಬಿಜೆಪಿ ಕಾರ್ಯಕರ್ತರು ಕೈಜೋಡಿಸಿದ್ದಾರೆ. ಮಾದಕ ವಸ್ತುವಿನ ವಿರುದ್ಧ ಅದರ ಅಪಾಯಗಳ ವಿರುದ್ಧ ಜನ ಜಾಗೃತಿ ಮೂಡಿಸುತ್ತೇವೆ. ಮಾದಕ ದ್ರವ್ಯ ಮಾಫಿಯಾ ವಿರುದ್ಧದ ತನಿಖೆ ನಿರ್ಣಾಯಕ ಘಟ್ಟತಲುಪಲೇಬೇಕು ಎಂದು ತಿಳಿಸಿದ್ದಾರೆ.
 

click me!