ಸ್ನೇಹ ಮತ್ತು ರಾಜಕಾರಣ ಒಂದೇ ತಟ್ಟಿಯಲ್ಲಿ ತೂಗಲು ಹೋಗಬೇಡಿ. ನಮ್ಮ ಪಕ್ಷ ಏನೇ ಕೆಲಸ ಹೇಳಿದರೂ ಮಾಡುವೆ. ನಮಗೆ ಟಾಸ್ಕ್ ಏನಿಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. 2023ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ನಮ್ಮ ಟಾಸ್ಕ್: ಸಚಿವ ಶ್ರೀರಾಮುಲು
ಬೆಳಗಾವಿ(ಡಿ.28): ಎಸ್‌ಸಿ,ಎಸ್‌ಟಿ ಮೀಸಲಾತಿ ಹೆಚ್ಚಳ ಸಂಬಂಧ ಸೋಮವಾರ ಸದನದಲ್ಲಿ ಐತಿಹಾಸಿಕ ತೀರ್ಮಾನ ಆಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಸಿದ್ದರಾಮಯ್ಯ ಚರ್ಚೆಗೆ ಕೇಳಿದರು. ಕಾನೂನು ಸಚಿವರು, ಸಿದ್ದರಾಮಯ್ಯ ಮತ್ತು ಎಲ್ಲ ಶಾಸಕರು ಚರ್ಚೆಯಲ್ಲಿ ಭಾಗಿಯಾಗಿ ನಿಯಮ 69 ಅಡಿಯಲ್ಲಿ ಮೀಸಲಾತಿ ಹೆಚ್ಚಳದ ಬಿಲ್ ಮಾಡಿದ್ದೇವೆ. ಸರ್ವಾನುಮತದಿಂದ ಬಿಲ್ ಪಾಸ್ ಮಾಡಿದ್ದಾರೆ ಎಂದರು.
ನಮ್ಮ ಸಮುದಾಯಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕಾಗಿತ್ತು. ಇಂದು 102 ಪರಿಶಿಷ್ಟ ಜಾತಿಗಳಿವೆ. ಕೇಂದ್ರ ಸರ್ಕಾರ ಮೀಸಲಾತಿ ಕೊಟ್ಟಿತ್ತು. ರಾಜ್ಯ ಸರ್ಕಾರ ಕೊಟ್ಟಿರಲಿಲ್ಲ. ವಿಧಾನ ಪರಿಷತ್ತಿನಲ್ಲೂ ಬಿಲ್ ಪಾಸ್ ಮಾಡಿಸುತ್ತೇವೆ. ಶೆಡ್ಯೂಲ್ 9ರಲ್ಲಿ ಸೇರಿಸಿ ಕೇಂದ್ರ ಸರ್ಕಾರದಿಂದಲೂ ಅನುಮತಿ ಪಡೆಯಲಾಗುವುದು ಎಂದು ಹೇಳಿದರು.
SC/ST Reservation ; ಎಸ್ಸಿ-ಎಸ್ಟಿಮೀಸಲು ಹೆಚ್ಚಳಕ್ಕೆ ಪರಿಷತ್ತಲ್ಲೂ ಅಸ್ತು
ಜನಾರ್ದನ ರೆಡ್ಡಿ ಹೊಸ ಪಕ್ಷ ಆರಂಭಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷ ನನಗೆ ತಾಯಿ. ನನಗೆ ಇಷ್ಟೊಂದು ಸ್ಥಾನಮಾನ ನೀಡಿದೆ. ಸ್ನೇಹ ಮತ್ತು ರಾಜಕಾರಣ ಒಂದೇ ತಟ್ಟಿಯಲ್ಲಿ ತೂಗಲು ಹೋಗಬೇಡಿ. ನಮ್ಮ ಪಕ್ಷ ಏನೇ ಕೆಲಸ ಹೇಳಿದರೂ ಮಾಡುವೆ. ನಮಗೆ ಟಾಸ್ಕ್ ಏನಿಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. 2023ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ನಮ್ಮ ಟಾಸ್ಕ್. ನಮ್ಮ ಟಾಸ್ಕ್ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ನಮ್ಮ ಉದ್ದೇಶ ಕಾಂಗ್ರೆಸ್ ಮುಕ್ತ ರಾಜ್ಯ ಆಗಬೇಕು ಎಂದು ಹೇಳಿದರು.
News Hour | ಅಧಿವೇಶನದಲ್ಲಿ ಸದ್ದು ಮಾಡಿದ ಮೀಸಲಾತಿ & ಸುರತ್ಕಲ್ ಮರ್ಡರ್!
ಸ್ನೇಹ ಮುಖ್ಯವೋ, ಅಧಿಕಾರ ಮುಖ್ಯವೋ ಎಂದು ಕಾಂಗ್ರೆಸ್ ಟ್ವಿಟ್ ವಿಚಾರಕ್ಕೆ ಕಾಂಗ್ರೆಸ್ ವಿರುದ್ಧ ಗರಂ ಆದ ಅವರು, ಕಾಂಗ್ರೆಸ್ಸಿಗರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತಗಳು ಬೇರೆ, ಸ್ನೇಹವೇ ಬೇರೆ. ನಾನು ಏಕೆ ಅವರ ಜೊತೆ ಹೋಗಲಿ. ನನಗೆ ಪಕ್ಷ ಮುಖ್ಯ, ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಅವರಿಗೆ ಒಳ್ಳೆಯದಾಗಲಿ ಎಂದರು.
ಸಾರಿಗೆ ನೌಕರರಿಗೆ ಮುಷ್ಕರ ಮಾಡಬೇಡಿ ಎಂದು ನಾನೇ ಅವರಿಗೆ ಹೋಗಿ ಹೇಳಿದೆ. ಆದರೆ, ನನ್ನ ಮಾತಿಗೆ ಬೆಲೆ ಕೊಡದೇ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೋರಾಟಗಾರರು ಹುಟ್ಟಿಕೊಳ್ಳುತ್ತಾರೆ. ಅವರು ಬೇರೆಯವರ ಮಾತು ಕೇಳಬಾರದು. ಎಲ್ಲ ನಿಗಮಗಳಲ್ಲಿ 600 ಜನರು ಇದ್ದಾರೆ. ಅವರನ್ನು ಮತ್ತೆ ಸಾರಿಗೆ ಇಲಾಖೆಗೆ ಸೇರಿಸಿಕೊಳ್ಳಲು ಸಿದ್ಧರಿದ್ದೇವೆ. ಅವರು ಮೆಮೋಗೆ ಸಹಿ ಮಾಡಿ ಇಲಾಖೆಗೆ ಸೇರಿಕೊಳ್ಳಬೇಕು ಎಂದರು.